ಕಣದಿಂದ ಹಿಂದೆ ಸರಿಯುವಂತೆ ಹೇಳಲು ಸಾಕ್ಷಾತ್ ಪರಮಾತ್ಮನೇ ಧರೆಗಿಳಿದು ಬಂದರೂ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಗುಡುಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಕೊನೆಗೂ ಕಾಂಗ್ರೆಸ್ ನಾಯಕರ ತಂತ್ರಗಾರಿಕೆಗೆ ಮಣಿದಿದ್ದಾರೆ. ಘಟಾನುಘಟಿ ಅಲ್ಪಸಂಖ್ಯಾತ ನಾಯಕರು ಕೈಚೆಲ್ಲಿ ಅಸಹಾಯಕರಾಗಿ ಕೂತಿದ್ದಾಗ, ವಿಧಾನಪರಿಷತ್ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್ ಹಾಗೂ ಶಾಸಕ ರಿಜ್ವಾನ್ ಅರ್ಷದ್ ನಡೆಸಿದ ಅಹರ್ನಿಶಿ ಕಾರ್ಯಾಚರಣೆ ದಾವಣಗೆರೆ ಕಾಂಗ್ರೆಸ್ ಪಾಲಿಗೆ ಎದುರಾಗಿದ್ದ ಬಹುದೊಡ್ಡ ಬಂಡಾಯದ ಬೇಗೆಯನ್ನು ಶಮನ ಮಾಡುವಲ್ಲಿ ಯಶಸ್ವಿಯಾಗಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸುಮಾರು ಎಪ್ಪತ್ತು ಸಾವಿರಕ್ಕೂ ಅಧಿಕ ಅಲ್ಪಸಂಖ್ಯಾತ ಮತಗಳಿವೆ. ಒಂದು ವೇಳೆ ಸಾದಿಕ್ ಪೈಲ್ವಾನ್ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದರೆ, ಈ ಮತಗಳು ವಿಭಜನೆಯಾಗಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಅವರ ಗೆಲುವಿಗೆ ಭಾರಿ ಹೊಡೆತ ಬೀಳಲಿದೆ ಎಂಬ ಆತಂಕ ಕೈ ನಾಯಕರನ್ನು ಕಾಡತೊಡಗಿತ್ತು. ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಕ್ಷಣವೇ ಕಾರ್ಯಪ್ರವೃತ್ತರಾಗುವಂತೆ ರಾಜ್ಯದ ಪ್ರಮುಖ ಅಲ್ಪಸಂಖ್ಯಾತ ನಾಯಕರಿಗೆ ಖಡಕ್ ಸೂಚನೆ ನೀಡಿದ್ದರು.
ನಾಯಕರಿಗೆ ನಡುಕ ಹುಟ್ಟಿಸಿದ್ದ ಧಾರ್ಮಿಕ ಗುರುಗಳ ಆದೇಶ
ಹೈಕಮಾಂಡ್ ಸೂಚನೆ ನೀಡಿದರೂ, ಸ್ಥಳೀಯ ಧಾರ್ಮಿಕ ಗುರುಗಳ ಕಠಿಣ ಆದೇಶವಿದ್ದ ಕಾರಣ ಸಚಿವರಾದ ಜಮೀರ್ ಅಹ್ಮದ್ ಖಾನ್ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಬಂಡಾಯ ಶಮನಕ್ಕೆ ಮುಂದಾಗಲು ಅಂಜಿದ್ದರು ಎನ್ನಲಾಗಿದೆ. ಜವಾಬ್ದಾರಿಯಿಂದ ನುಣುಚಿಕೊಳ್ಳುವ ತಂತ್ರ ಮಾಡಿದ ಜಮೀರ್ ಅಹ್ಮದ್ ಅವರು, ತಮಗೆ ಕೇರಳ ಚುನಾವಣೆಯ ಉಸ್ತುವಾರಿ ಇದೆ ಎಂಬ ನೆಪವೊಡ್ಡಿ ದಾವಣಗೆರೆಯತ್ತ ಮುಖವನ್ನೇ ಮಾಡಲಿಲ್ಲ. ಇನ್ನು ಸಲೀಂ ಅಹಮದ್ ಹಾಗೂ ರಿಜ್ವಾನ್ ಅರ್ಷದ್ ಜೊತೆಗೆ ಹೆಲಿಪ್ಯಾಡ್ ವರೆಗೂ ಬಂದಿದ್ದ ನಸೀರ್ ಅಹಮದ್ ಅವರು, ಕೊನೆಯ ಕ್ಷಣದಲ್ಲಿ ಹೆಲಿಕಾಪ್ಟರ್ ಹತ್ತದೆ ವಾಪಸ್ಸಾಗುವ ಮೂಲಕ ಹೈಡ್ರಾಮಾ ಸೃಷ್ಟಿಸಿದ್ದರು.
ಸಲೀಂ ಮತ್ತು ರಿಜ್ವಾನ್ ಸಾಹಸದ ರಾತ್ರಿ ಕಾರ್ಯಾಚರಣೆ
ಹಿರಿಯ ನಾಯಕರು ಕೈಕೊಟ್ಟರೂ ಎದೆಗುಂದದ ಸಲೀಂ ಅಹಮದ್ ಮತ್ತು ರಿಜ್ವಾನ್ ಅರ್ಷದ್ ಗುರುವಾರ ಹೆಲಿಕಾಪ್ಟರ್ ಮೂಲಕ ಚಿತ್ರದುರ್ಗಕ್ಕೆ ಬಂದಿಳಿದರು. ಅಲ್ಲಿಂದ ರಸ್ತೆ ಮಾರ್ಗವಾಗಿ ದಾವಣಗೆರೆಯತ್ತ ಪ್ರಯಾಣ ಬೆಳೆಸಿದರು. ಆದರೆ ಅಷ್ಟರಲ್ಲಾಗಲೇ ಸಾದಿಕ್ ಪೈಲ್ವಾನ್ ತಮ್ಮ ಉಮೇದುವಾರಿಕೆ ಸಲ್ಲಿಸಿ, ಯಾರ ಕೈಗೂ ಸಿಗಬಾರದು ಎಂಬ ಉದ್ದೇಶದಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಅಜ್ಞಾತವಾಸಕ್ಕೆ ಜಾರಿದ್ದರು.
ಆದರೂ ಪಟ್ಟು ಬಿಡದ ಈ ಇಬ್ಬರು ನಾಯಕರು ನೇರವಾಗಿ ಸಾದಿಕ್ ಪೈಲ್ವಾನ್ ಮನೆಗೆ ತೆರಳಿ, ರಾತ್ರಿಯಿಡೀ ಅವರ ಕುಟುಂಬ ಸದಸ್ಯರ ಜೊತೆ ನಿರಂತರ ಮಾತುಕತೆ ನಡೆಸಿದರು. ರಾಜಕೀಯದ ಒಳಹೊರಗುಗಳು, ಭವಿಷ್ಯದ ಪರಿಣಾಮಗಳು ಹಾಗೂ ಪಕ್ಷದ ನಿಲುವನ್ನು ಮನವರಿಕೆ ಮಾಡುವಲ್ಲಿ ಕೊನೆಗೂ ಈ ನಾಯಕರು ಯಶಸ್ವಿಯಾದರು. ಇದರ ಫಲವಾಗಿ ಶುಕ್ರವಾರ ಮುಂಜಾನೆ ಸಾದಿಕ್ ಅವರನ್ನು ನೇರವಾಗಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಕರೆತರುವಲ್ಲಿ ಸಲೀಂ ಮತ್ತು ರಿಜ್ವಾನ್ ಜಯಶಾಲಿಯಾದರು.
ಸಿದ್ದರಾಮಯ್ಯ ಸಂಧಾನ ಮತ್ತು ಸುರ್ಜೇವಾಲ ಗರಂ
ತಮ್ಮ ನಿವಾಸಕ್ಕೆ ಆಗಮಿಸಿದ ಸಾದಿಕ್ ಪೈಲ್ವಾನ್ ಅವರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದೀರ್ಘ ಚರ್ಚೆ ನಡೆಸಿದರು. ನಾಮಪತ್ರ ಹಿಂಪಡೆಯಲು ಸಮಯ ಮುಗಿದಿರುವುದರಿಂದ, ಕಣದಲ್ಲಿದ್ದರೂ ಸಂಪೂರ್ಣವಾಗಿ ತಟಸ್ಥರಾಗಿ ಉಳಿಯುವಂತೆ ಹಾಗೂ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸುವಂತೆ ಸಿದ್ದರಾಮಯ್ಯ ಸೂಚಿಸಿದರು. ಮುಖ್ಯಮಂತ್ರಿಗಳ ಭರವಸೆಗೆ ಒಪ್ಪಿದ ಸಾದಿಕ್, ತಕ್ಷಣವೇ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಗೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸುವ ಮೂಲಕ ಬಂಡಾಯದ ಬಾವುಟ ಕೆಳಗಿಳಿಸಿದರು.
ಇನ್ನೊಂದೆಡೆ, ಪಕ್ಷಕ್ಕೆ ಇಷ್ಟೊಂದು ದೊಡ್ಡ ಗಂಡಾಂತರ ಎದುರಾಗಿದ್ದರೂ ಜವಾಬ್ದಾರಿಯಿಂದ ಓಡಿಹೋದ ಜಮೀರ್ ಅಹ್ಮದ್ ಖಾನ್ ವರ್ತನೆಗೆ ರಾಜ್ಯ ಉಸ್ತುವಾರಿ ಸುರ್ಜೇವಾಲ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕಾರ್ಯಾಚರಣೆ ಬಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್ ಮೆಚ್ಚುಗೆ
ಈ ಯಶಸ್ವಿ ಕಾರ್ಯಾಚರಣೆಯ ಬಗ್ಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ದಾವಣಗೆರೆ ಬಂಡಾಯ ಶಮನಗೊಳಿಸುವ ಹೊಣೆಯನ್ನು ಸಲೀಂ ಅಹಮದ್, ರಿಜ್ವಾನ್ ಅರ್ಷದ್ ಸೇರಿದಂತೆ ನಾಲ್ವರು ಅಲ್ಪಸಂಖ್ಯಾತ ನಾಯಕರಿಗೆ ನೀಡಲಾಗಿತ್ತು. ಆದರೆ, ಒಬ್ಬರು ಕೇರಳಕ್ಕೆ ಹೋಗಬೇಕು ಎಂದು ತಪ್ಪಿಸಿಕೊಂಡರು, ಮತ್ತೊಬ್ಬರು ಬೇರೆ ಕೆಲಸ ಇದೆ ಎಂದು ಹೆದರಿ ಹಿಂದೆ ಸರಿದರು. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಅಂತಿಮವಾಗಿ ಸಲೀಂ ಅಹಮದ್ ಹಾಗೂ ರಿಜ್ವಾನ್ ಅರ್ಷದ್ ಅತ್ಯಂತ ಜವಾಬ್ದಾರಿಯಿಂದ ಮನವೊಲಿಕೆ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಪಕ್ಷದ ಪರವಾಗಿ ಅವರಿಗೆ ವಿಶೇಷ ಅಭಿನಂದನೆಗಳು ಎಂದು ಹೇಳುವ ಮೂಲಕ ಪರೋಕ್ಷವಾಗಿ ಜಮೀರ್ ಹಾಗೂ ನಸೀರ್ ಅಹಮದ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಒಟ್ಟಿನಲ್ಲಿ ದಾವಣಗೆರೆ ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿದ್ದ ಸಾದಿಕ್ ಪೈಲ್ವಾನ್ ಬಂಡಾಯ ಕೊನೆಗೂ ಸುಖಾಂತ್ಯ ಕಂಡಿದ್ದು, ಕೈ ಪಾಳಯದಲ್ಲಿ ಸದ್ಯ ನಿರಾಳತೆ ಮನೆಮಾಡಿದೆ.








