ಮೈಸೂರು : ಕಾಂಗ್ರೆಸ್-ಜೆಡಿಎಸ್ ನಲ್ಲಿ ರಾಜಪ್ರಭುತ್ವ ನಡೆಯುತ್ತಿದೆ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರು ಆರೋಪಿಸಿದ್ದಾರೆ.
ಮೈಸೂರಿನಲ್ಲಿ ರಾಜಸ್ಥಾನದ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ವಿಶ್ವನಾಥ್, ಸಿದ್ದರಾಮಯ್ಯ 4 ಬಾರಿ ಪಕ್ಷಾಂತರ ಮಾಡಿದ್ದಾರೆ. ರಮೇಶ್ ಕುಮಾರ್ 10 ಬಾರಿ ಪಕ್ಷಾಂತರ ಮಾಡಿದ್ದಾರೆ. ಕುಮಾರಸ್ವಾಮಿ ಪಕ್ಷವನ್ನೇ ಪಕ್ಷಾಂತರ ಮಾಡಿದ್ದಾರೆ. ಇಂತವರೆಲ್ಲ ನಮ್ಮನ್ನು ಪಕ್ಷಾಂತರಿಗಳು ಎಂದು ಕರೆದರು ಎಂದು ಆಕ್ರೋಶ ಹೊರಹಾಕಿದರು.
ಜೆಡಿಎಸ್, ಕಾಂಗ್ರೆಸ್ ನಲ್ಲಿ ರಾಜಪ್ರಭುತ್ವ ನಡೆಯುತ್ತಿದೆ. ಮನೆಯವರೇ ರಾಷ್ಟ್ರಾಧ್ಯಕ್ಷ, ಮನೆಯವರೇ ರಾಜ್ಯಾಧ್ಯಕ್ಷ. ಎರಡು ಪಕ್ಷದ ರಾಜಪ್ರಭುತ್ವದ ವಿರುದ್ಧವೇ ನಾವು ಸಿಡಿದೆದ್ದಿದ್ದು. ಈಗ ಅದು ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಮುಂದುವರಿದಿದೆ ಎಂದರು.
ಇದೇ ವೇಳೆ ಡಿಸಿಎಂ ಸ್ಥಾನದಿಂದ ಸಚಿನ್ ಪೈಲಟ್ ಅವರನ್ನು ವಜಾಗೊಳಿಸಿದ ಬಗ್ಗೆ ಮಾತನಾಡಿದ ಅವರು, ಪಕ್ಷಾಂತರ ನಿಷೇಧ ಕಾಯ್ದೆಯನ್ನು ಆಡಳಿತ ಪಕ್ಷದ ಸಿಎಂಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಸರ್ವಾಧಿಕಾರಿ ಧೋರಣೆ. ಈ ಬಗ್ಗೆ ದೇಶಾದ್ಯಂತ ಚರ್ಚೆ ಆಗಬೇಕು ಎಂದು ಹೆಚ್.ವಿಶ್ವನಾಥ್ ಆಗ್ರಹಿಸಿದರು.
ರಾಜಸ್ಥಾನ ಆತಂರಿಕ ಬಿಕ್ಕಟ್ಟು ಮತ್ತು ಸಂವಿಧಾನದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಡೀ ದೇಶದಲ್ಲಿ ಮೊದಲ ಬಾರಿಗೆ ಕರ್ನಾಟದಲ್ಲಿ ಆಂತರಿಕ ಬಿಕ್ಕಟ್ಟು ಪ್ರಾರಂಭವಾಯಿತು. ವಿರೋಧ ಪಕ್ಷದಿಂದ ಆಡಳಿತ ಪಕ್ಷಕ್ಕೆ ಯಾರು ಹೋಗುತ್ತಿಲ್ಲ. ಆಡಳಿತ ಪಕ್ಷದಿಂದಲೇ ವಿರೋಧ ಪಕ್ಷದ ಕಡೆಗೆ ಹೋಗುತ್ತಿದ್ದಾರೆ. ಕರ್ನಾಟಕ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ಸಚಿನ್ ಪೈಲಟ್ ಆಡಳಿತ ಪಕ್ಷ ತೊರೆದು ಆಚೆ ಬಂದರು. ಈ ಮೂಲಕ ಆಡಳಿತ ಪಕ್ಷದಲ್ಲಿ ಅಸಮಾಧಾನ ದಂಗೆ ಹೇಳುತ್ತಿದೆ. ಇದನ್ನು ಪಕ್ಷಾಂತರ ಪಕ್ಷಾಂತರ ಎಂದು ಹೇಳುತ್ತಾರೆ. ಪಕ್ಷಾಂತರ ಪಾಪವಲ್ಲ ಎಂದರು.








