ಕರ್ನಾಟಕ ರಾಜಕಾರಣದ ಧ್ರುವತಾರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿ ಭರ್ತಿ 50 ವಸಂತಗಳನ್ನು ಪೂರೈಸಿದ್ದಾರೆ. ಈ ಐತಿಹಾಸಿಕ ಮೈಲಿಗಲ್ಲನ್ನು ಸಂಭ್ರಮಿಸಲು ಕೋಟೆ ನಾಡು ಚಿತ್ರದುರ್ಗದಲ್ಲಿ ಬೃಹತ್ ಯಡಿಯೂರಪ್ಪ ಉತ್ಸವ ಸಮಾವೇಶವನ್ನು ಆಯೋಜಿಸಲು ಸಿದ್ಧತೆಗಳು ನಡೆಯುತ್ತಿವೆ. ಈ ಮಹತ್ವದ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಗಮಿಸುವ ಸಾಧ್ಯತೆ ದಟ್ಟವಾಗಿದೆ.
ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪ ಅವರ ಅರ್ಧ ಶತಮಾನದ ರಾಜಕೀಯ ಪಯಣದ ಸ್ಮರಣಾರ್ಥ ಈ ಬೃಹತ್ ಸಮಾವೇಶವನ್ನು ಮೇ 9ರಂದು ನಡೆಸಲು ಉದ್ದೇಶಿಸಲಾಗಿದೆ. ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಮೇ 4ರಂದು ಹೊರಬೀಳಲಿದ್ದು, ಆ ಬಳಿಕ ಅಮಿತ್ ಶಾ ಅವರು ಕರ್ನಾಟಕಕ್ಕೆ ಭೇಟಿ ನೀಡುವ ಭರವಸೆ ನೀಡಿದ್ದಾರೆ. ಶಾ ಅವರ ಭೇಟಿಯ ದಿನಾಂಕದ ಮೇಲೆ ಸಮಾವೇಶದ ಅಂತಿಮ ಮುಹೂರ್ತ ನಿರ್ಧಾರವಾಗಲಿದೆ.
ಈ ಸಮಾವೇಶವು ಕೇವಲ ಸಂಭ್ರಮಾಚರಣೆಯಲ್ಲದೆ, ರಾಜಕೀಯವಾಗಿಯೂ ದೊಡ್ಡ ಸಂಚಲನ ಮೂಡಿಸುವ ನಿರೀಕ್ಷೆಯಿದೆ. ಮೇ ತಿಂಗಳಲ್ಲೇ ಸಮಾವೇಶ ನಡೆಸಲು ಪಕ್ಷ ನಿರ್ಧರಿಸಿದ್ದು, ಈಗಾಗಲೇ ತೆರೆಮರೆಯಲ್ಲಿ ಭರ್ಜರಿ ತಯಾರಿಗಳು ಆರಂಭವಾಗಿವೆ. ಲಕ್ಷಾಂತರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಬಲಪ್ರದರ್ಶನ ಮಾಡಲು ಕೇಸರಿ ಪಡೆ ಸಜ್ಜಾಗುತ್ತಿದೆ. ಶೀಘ್ರದಲ್ಲೇ ಹೈಕಮಾಂಡ್ ಸೂಚನೆಯ ಮೇರೆಗೆ ಅಧಿಕೃತ ದಿನಾಂಕ ಪ್ರಕಟವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.








