ಬೆಂಗಳೂರು: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರದ ವಿಚಾರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ತೆಗೆದುಕೊಂಡ ನಿರ್ಧಾರದಿಂದಾಗಿ ದಕ್ಷಿಣ ಭಾರತದ ರಾಜ್ಯಗಳು ದೊಡ್ಡ ಮಟ್ಟದ ಹಿನ್ನಡೆ ಅನುಭವಿಸುವಂತಾಗಿದೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಸೂದೆಯ ಅನುಷ್ಠಾನದೊಂದಿಗೆ ಸಂಸತ್ ಸ್ಥಾನಗಳ ಸಂಖ್ಯೆ ಹೆಚ್ಚಳವಾಗಿದ್ದರೆ ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯ ಗಣನೀಯವಾಗಿ ಏರಿಕೆಯಾಗುತ್ತಿತ್ತು, ಆದರೆ ಪ್ರತಿಪಕ್ಷಗಳ ನಡವಳಿಕೆಯಿಂದ ಈ ಸುವರ್ಣಾವಕಾಶ ಕೈತಪ್ಪಿದೆ ಎಂದು ಅವರು ಟೀಕಿಸಿದ್ದಾರೆ.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮಸೂದೆಯ ಅನ್ವಯ ಸಂಸತ್ ಸದಸ್ಯರ ಸ್ಥಾನಗಳಲ್ಲಿ ಶೇಕಡ 50ರಷ್ಟು ಹೆಚ್ಚಳವಾಗುವ ಸಾಧ್ಯತೆಯಿತ್ತು. ಈ ಯೋಜನೆಯಡಿ ದಕ್ಷಿಣ ಭಾರತದ ಐದು ರಾಜ್ಯಗಳ ಒಟ್ಟು ಸಂಸತ್ ಸ್ಥಾನಗಳ ಸಂಖ್ಯೆ ಈಗಿರುವ 129 ರಿಂದ 195ಕ್ಕೆ ಏರಿಕೆಯಾಗುತ್ತಿತ್ತು. ಪ್ರಮುಖವಾಗಿ ಕರ್ನಾಟಕದ ಸ್ಥಾನಗಳು 28 ರಿಂದ 42ಕ್ಕೆ ಹಾಗೂ ತಮಿಳುನಾಡಿನ ಸ್ಥಾನಗಳು 39 ರಿಂದ 59ಕ್ಕೆ ಹೆಚ್ಚಳವಾಗುವ ಅವಕಾಶವಿತ್ತು. ಆದರೆ ಇಂಡಿಯಾ ಒಕ್ಕೂಟದ ವಿರೋಧದಿಂದಾಗಿ ಈ ಪ್ರಕ್ರಿಯೆಗೆ ಹಿನ್ನಡೆಯಾಗಿದೆ. ಮುಂದಿನ ದಿನಗಳಲ್ಲಿ 2027ರ ಜನಗಣತಿಯನ್ನು ಆಧರಿಸಿ ಕ್ಷೇತ್ರ ಪುನರ್ ವಿಂಗಡಣೆ ನಡೆದರೆ, ಕರ್ನಾಟಕಕ್ಕೆ 3 ಮತ್ತು ತಮಿಳುನಾಡಿಗೆ ಸುಮಾರು 10 ಸ್ಥಾನಗಳು ನಷ್ಟವಾಗುವ ಭೀತಿ ಎದುರಾಗಿದೆ ಎಂದು ಎಚ್ಚರಿಸಿದರು.
ದೇಶದ ಇತಿಹಾಸವನ್ನು ಮೆಲುಕು ಹಾಕಿದ ಅವರು, 1952ರಲ್ಲಿ ಭಾರತದ ಜನಸಂಖ್ಯೆ 36 ಕೋಟಿ ಇದ್ದಾಗ ಮೊದಲ ಬಾರಿಗೆ ಕ್ಷೇತ್ರ ಪುನರ್ ವಿಂಗಡಣೆ ಮಾಡಲಾಗಿತ್ತು. 1962ರಲ್ಲಿ 43 ಕೋಟಿ ಜನಸಂಖ್ಯೆಗೆ 494 ಸ್ಥಾನಗಳಿದ್ದವು. ನಂತರ 1971ರಲ್ಲಿ ಜನಸಂಖ್ಯೆ 54 ಕೋಟಿಗೆ ತಲುಪಿದಾಗ ಸಂಸತ್ ಸ್ಥಾನಗಳನ್ನು 543ಕ್ಕೆ ಏರಿಸಲಾಯಿತು. ಅಂದಿನಿಂದ ಇಂದಿನವರೆಗೆ ಸುಮಾರು 55 ವರ್ಷಗಳು ಕಳೆದರೂ ಕ್ಷೇತ್ರ ಪುನರ್ ವಿಂಗಡಣೆಯ ಕಾರ್ಯ ನಡೆದಿಲ್ಲ. ಪ್ರಸ್ತುತ ಭಾರತದ ಜನಸಂಖ್ಯೆ 140 ಕೋಟಿ ದಾಟಿದ್ದರೂ ಸಹ ಪ್ರಾತಿನಿಧ್ಯದ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನಸಂಖ್ಯೆ ಹೆಚ್ಚಾದಂತೆ ಶಾಸನಸಭೆ ಮತ್ತು ಲೋಕಸಭೆಗಳಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾಗುವುದು ಪ್ರಜಾಪ್ರಭುತ್ವದ ಸಾಮಾನ್ಯ ನಿಯಮ. ಆದರೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಇದನ್ನು ವಿರೋಧಿಸುತ್ತಿವೆ. 2011ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಮಾಡಿದರೆ ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಾ ಜನರ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ದೂರಿದರು.
ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಂಸದರ ಸಂಖ್ಯೆ ತೀರಾ ಕಡಿಮೆ ಇದೆ ಎಂದು ಅಭಿಪ್ರಾಯಪಟ್ಟ ಡಾ. ಮಂಜುನಾಥ್, ಇಂಗ್ಲೆಂಡ್ ದೇಶವು ಭಾರತಕ್ಕಿಂತ ಗಾತ್ರದಲ್ಲಿ 13 ಪಟ್ಟು ಚಿಕ್ಕದಾಗಿದ್ದರೂ ಅಲ್ಲಿ 650 ಸಂಸದರಿದ್ದಾರೆ. ಆದರೆ 140 ಕೋಟಿ ಜನಸಂಖ್ಯೆಯಿರುವ ನಮ್ಮ ದೇಶದಲ್ಲಿ ಕೇವಲ 543 ಸ್ಥಾನಗಳಷ್ಟೇ ಇವೆ. ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ 27 ಕೋಟಿ ಜನಸಂಖ್ಯೆಗೆ 129 ಸಂಸದರಿದ್ದರೆ, ಉತ್ತರ, ಪೂರ್ವ ಮತ್ತು ಪಶ್ಚಿಮ ಭಾರತದ ಉಳಿದ ಶೇಕಡ 80ರಷ್ಟು ಜನಸಂಖ್ಯೆಗೆ 416 ಸ್ಥಾನಗಳಿವೆ. ಈ ಅಸಮತೋಲನವನ್ನು ಸರಿಪಡಿಸುವ ಪ್ರಯತ್ನಕ್ಕೆ ಅಡೆತಡೆ ಉಂಟುಮಾಡುತ್ತಿರುವುದು ಸರಿಯಲ್ಲ. 2027ರ ಜನಗಣತಿ ಆಧಾರಿತ ಪುನರ್ ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳ ಹಿತಾಸಕ್ತಿಗೆ ಧಕ್ಕೆಯಾಗುವ ಸಾಧ್ಯತೆಗಳಿದ್ದು, ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ ಎಂದು ಅವರು ಹೇಳಿದರು.







