ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಹೊಸ ಸಮರ ಶುರುವಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ಶೈಕ್ಷಣಿಕವಾಗಿ ಬೀಗುತ್ತಿದ್ದರೆ, ಕಲಬುರಗಿ ಜಿಲ್ಲೆ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿರುವುದು ಈಗ ರಾಜಕೀಯ ಕೆಸರೆರಚಾಟಕ್ಕೆ ಪ್ರಮುಖ ಅಸ್ತ್ರವಾಗಿದೆ. ಮುಖ್ಯವಾಗಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಿಕೊಂಡು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯದ ಸುರಿಮಳೆಗೈದಿವೆ.
ಖರ್ಗೆ ಕುಟುಂಬದ ವಿರುದ್ಧ ಜೆಡಿಎಸ್ ಕಿಡಿ
ಕಲಬುರಗಿ ಜಿಲ್ಲೆಯ ಶೈಕ್ಷಣಿಕ ಕುಸಿತದ ಬಗ್ಗೆ ಜೆಡಿಎಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕಳೆದ ಬಾರಿಯೂ 34ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ ಅತಿ ಕೊನೆಯ ಅಂದರೆ 35ನೇ ಸ್ಥಾನಕ್ಕೆ ಕುಸಿದಿರುವುದು ನಾಚಿಕೆಗೇಡಿನ ಸಂಗತಿ ಎಂದು ಜೆಡಿಎಸ್ ಟೀಕಿಸಿದೆ. ಸುಮಾರು 4 ರಿಂದ 5 ದಶಕಗಳಿಂದ ಕಲಬುರಗಿ ಜಿಲ್ಲೆಯನ್ನು ಆಳುತ್ತಿರುವ ಖರ್ಗೆ ಕುಟುಂಬಕ್ಕೆ ಜಿಲ್ಲೆಯ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯವಾಗಿಲ್ಲ. ಜಿಲ್ಲೆಯಲ್ಲಿ ಶಿಕ್ಷಕರ ನೇಮಕ, ಮೂಲಸೌಕರ್ಯ ಹಾಗೂ ಶೈಕ್ಷಣಿಕ ವಾತಾವರಣ ಕಲ್ಪಿಸುವಲ್ಲಿ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದೆ. ಭಾಷಣದಲ್ಲಿ ಅಬ್ಬರಿಸುವ ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮ ಸಾಧನೆಯ ಪಟ್ಟಿಗೆ ಈ ಶೂನ್ಯ ಸಾಧನೆಯನ್ನು ಸೇರಿಸಿಕೊಳ್ಳಿ ಎಂದು ಲೇವಡಿ ಮಾಡಿರುವ ಜೆಡಿಎಸ್, ಸಚಿವರನ್ನು ನಾಟಿಕೋಳಿ ಮಿನಿಸ್ಟರ್ ಎಂದು ಕರೆದು ವ್ಯಂಗ್ಯವಾಡಿದೆ.
ಟ್ವೀಟ್ ಎಲ್ಲಿ ಹೋದರು ಮಹಾಜ್ಞಾನಿ ಎಂದ ಬಿಜೆಪಿ
ಇತ್ತ ಬಿಜೆಪಿ ಕೂಡ ಪ್ರಿಯಾಂಕ್ ಖರ್ಗೆ ಅವರ ಕಾಲೆಳೆಯುವಲ್ಲಿ ಹಿಂದೆ ಬಿದ್ದಿಲ್ಲ. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಪ್ರಿಯಾಂಕ್ ಖರ್ಗೆ ಅವರನ್ನು ಮಹಾಜ್ಞಾನಿ ಎಂದು ಸಂಬೋಧಿಸಿರುವ ಬಿಜೆಪಿ, ಫಲಿತಾಂಶ ಬಂದಿದ್ದರೂ ಇನ್ನೂ ನಿಮ್ಮ ಟ್ವೀಟ್ ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿದೆ. ಪ್ರಿಯಾಂಕ್ ಖರ್ಗೆ ಅವರು ಫಲಿತಾಂಶ ವೀಕ್ಷಿಸುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ಬಿಜೆಪಿ, ಕಲಬುರಗಿಯ ಶೈಕ್ಷಣಿಕ ವೈಫಲ್ಯ ಸಚಿವರ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಟೀಕಿಸಿದೆ. ಮಾತಿನಲ್ಲಿ ಶೌರ್ಯ ತೋರಿಸುವ ಸಚಿವರು ಜಿಲ್ಲೆಯನ್ನು ಅಕ್ಷರಶಃ ಶೈಕ್ಷಣಿಕ ಅಂಧಕಾರಕ್ಕೆ ದೂಡಿದ್ದಾರೆ ಎಂಬುದು ವಿಪಕ್ಷಗಳ ಪ್ರಮುಖ ಆರೋಪವಾಗಿದೆ.
ಒಟ್ಟಾರೆಯಾಗಿ ಕಲಬುರಗಿ ಜಿಲ್ಲೆಯ ಎಸ್ ಎಸ್ ಎಲ್ ಸಿ ಫಲಿತಾಂಶವು ಈಗ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ನಡೆ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.








