ಕನ್ನಡ ಸಿನೆಮಾ ರಂಗದ ಧ್ರುವತಾರೆ ಡಾ ರಾಜ್ ಕುಮಾರ್ ಅವರ ಜನ್ಮದಿನದ ಸಂಭ್ರಮದ ನಡುವೆಯೇ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸ ದೊಡ್ಡ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ರಾಜ್ಯಾದ್ಯಂತ ಅಭಿಮಾನಿಗಳು ಅಣ್ಣಾವ್ರ ಸ್ಮರಣೆಯಲ್ಲಿ ತೊಡಗಿದ್ದರೆ ಇತ್ತ ಚೇತನ್ ಅವರು ರಾಜ್ ಕುಮಾರ್ ಅವರ ಸಮಾಧಿ ಸ್ಥಳಕ್ಕೆ ನೀಡಿರುವ ಜಾಗದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಇಡೀ ಕರ್ನಾಟಕವೇ ಡಾ ರಾಜ್ ಕುಮಾರ್ ಅವರ ಜಯಂತಿಯನ್ನು ಹಬ್ಬದಂತೆ ಆಚರಿಸುತ್ತಿದೆ. ರಕ್ತದಾನ, ನೇತ್ರದಾನ ಹಾಗೂ ಅನ್ನದಾನದಂತಹ ಸಮಾಜಮುಖಿ ಕೆಲಸಗಳಲ್ಲಿ ಅಭಿಮಾನಿಗಳು ನಿರತರಾಗಿದ್ದಾರೆ. ಇಂತಹ ಸುಸಂದರ್ಭದಲ್ಲಿ ಚೇತನ್ ಅಹಿಂಸ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ 2006 ರಲ್ಲಿ ಒಬ್ಬ ನಟನ ಸಮಾಧಿ ಕಾಂಪ್ಲೆಕ್ಸ್ ಗಾಗಿ ಬೆಂಗಳೂರಿನ ಹೃದಯಭಾಗದಲ್ಲಿ 2.5 ಎಕರೆ ಭೂಮಿಯನ್ನು ನೀಡಿದ್ದು ಸರಿಯಾದ ನಿರ್ಧಾರವೇ ಎಂದು ಪ್ರಶ್ನಿಸಿದ್ದಾರೆ.
ಇಪ್ಪತ್ತೊಂದನೇ ಶತಮಾನದ ಭಾರತದಲ್ಲಿ ಭೂಮಿ ಎಂಬುದು ಅತಿ ದೊಡ್ಡ ಹೋರಾಟದ ವಸ್ತುವಾಗಿದೆ. ಸರ್ಕಾರಗಳು ಭೂಮಿಯನ್ನು ಭವಿಷ್ಯದ ದೃಷ್ಟಿಯಿಂದ ಸಾರ್ವಜನಿಕ ಉದ್ದೇಶಗಳಿಗೆ ಬಳಸಬೇಕೇ ಹೊರತು ಕೇವಲ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಅಥವಾ ಲಾಭಕ್ಕಾಗಿ ಈ ರೀತಿ ಹಂಚಬಾರದು ಎಂದು ಚೇತನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಬ್ಬ ಕಲಾವಿದನಿಗೆ ಅಷ್ಟು ದೊಡ್ಡ ಪ್ರಮಾಣದ ಭೂಮಿ ನೀಡುವ ಅಗತ್ಯವಿತ್ತೇ ಎನ್ನುವುದು ಅವರ ವಾದ
ಚೇತನ್ ಅವರ ಈ ಹೇಳಿಕೆ ಅಣ್ಣಾವ್ರ ಅಭಿಮಾನಿಗಳ ಪಾಲಿಗೆ ಕೆಂಡದಂತಾಗಿದೆ. ರಾಜ್ ಕುಮಾರ್ ಅವರು ಕೇವಲ ಒಬ್ಬ ನಟನಲ್ಲ, ಅವರು ಕನ್ನಡದ ಅಸ್ಮಿತೆ. ಈ ನೆಲದ ಭಾಷೆ ಮತ್ತು ಸಂಸ್ಕೃತಿಗೆ ಅವರು ನೀಡಿದ ಕೊಡುಗೆಯ ಮುಂದೆ ಈ 2.5 ಎಕರೆ ಜಾಗ ಅತಿ ಚಿಕ್ಕದು ಎಂದು ಅಭಿಮಾನಿಗಳು ತಿರುಗೇಟು ನೀಡುತ್ತಿದ್ದಾರೆ. ರಾಜಕೀಯ ನಾಯಕರಾದ ಇಂದಿರಾ ಗಾಂಧಿ ಅಥವಾ ರಾಜೀವ್ ಗಾಂಧಿ ಅವರ ಸ್ಮಾರಕಗಳಿಗೆ ಇರುವ ಎಕರೆಗಟ್ಟಲೆ ಜಾಗದ ಬಗ್ಗೆ ಚೇತನ್ ಅವರು ಯಾಕೆ ಮಾತನಾಡುತ್ತಿಲ್ಲ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ಕಂಠೀರವ ಸ್ಟುಡಿಯೋ ಕೇವಲ ಒಂದು ಸಮಾಧಿ ಸ್ಥಳವಲ್ಲ ಅದು ಕನ್ನಡ ಚಿತ್ರರಂಗದ ಇತಿಹಾಸದ ಒಂದು ಭಾಗ. ಅಲ್ಲಿ ಅಣ್ಣಾವ್ರ ಜೊತೆಗೆ ಅಂಬರೀಶ್ ಹಾಗೂ ಪುನೀತ್ ರಾಜ್ ಕುಮಾರ್ ಅವರ ಸ್ಮಾರಕಗಳೂ ಇವೆ. ಈ ಜಾಗವನ್ನು ಯಾವುದೇ ವಾಣಿಜ್ಯ ಲಾಭಕ್ಕೆ ಬಳಸುತ್ತಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಇಂತಹ ಸಂದರ್ಭದಲ್ಲಿ ಚೇತನ್ ಅವರ ಈ ಹೇಳಿಕೆ ವಿನಾಕಾರಣ ವಿವಾದ ಸೃಷ್ಟಿಸುವ ಉದ್ದೇಶದಿಂದ ಕೂಡಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಚೇತನ್ ವಿರುದ್ಧ ತೀವ್ರ ವಾಗ್ದಾಳಿ ನಡೆಯುತ್ತಿದ್ದು ಈ ವಿವಾದ ಮುಂದೆ ಯಾವ ಹಂತಕ್ಕೆ ತಲುಪಲಿದೆ ಎಂಬ ಕುತೂಹಲ ಮೂಡಿಸಿದೆ.








