ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಕಣವು ರಣಕಣವಾಗಿ ಮಾರ್ಪಟ್ಟಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಒಂದು ಹರಿತವಾದ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಭಾರಿ ಬಿರುಗಾಳಿಯನ್ನೇ ಎಬ್ಬಿಸಿದೆ. ಚುನಾವಣಾ ಪ್ರಚಾರದ ಭಾಷಣದ ಮಧ್ಯೆ ಅಮಿತ್ ಶಾ ಅವರು ಅಲ್ಲಿನ ಪೊಲೀಸ್ ಅಧಿಕಾರಿಯೊಬ್ಬರಿಗೆ ನೀಡಿದ ಖಡಕ್ ಸೂಚನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.
ಪ್ರಚಾರ ಸಭೆಯನ್ನು ಉದ್ದೇಶಿಸಿ ಅಮಿತ್ ಶಾ ಅವರು ಗಂಭೀರವಾಗಿ ಭಾಷಣ ಮಾಡುತ್ತಿದ್ದಾಗ, ವೇದಿಕೆಯ ಮುಂಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಅಡ್ಡಬಂದಂತೆ ಕಂಡಿತು. ಕೂಡಲೇ ಮೈಕ್‌ನಲ್ಲಿಯೇ ಗುಡುಗಿದ ಅಮಿತ್ ಶಾ ಅವರು, ಓ ಬಂಗಾಳ ಪೊಲೀಸರೇ, ಸ್ವಲ್ಪ ಹಿಂದೆ ಸರಿಯಿರಿ ಎಂದು ಗತ್ತಿನಿಂದಲೇ ಹೇಳಿದರು. ಅಮಿತ್ ಶಾ ಅವರ ಈ ಮಾತುಗಳು ಹೊರಬೀಳುತ್ತಿದ್ದಂತೆ ಅಲ್ಲಿದ್ದ ಸಾವಿರಾರು ಬಿಜೆಪಿ ಕಾರ್ಯಕರ್ತರು ಹರ್ಷೋದ್ಗಾರ ಮಾಡಿ ಸಂಭ್ರಮಿಸಿದರು.
ಅಮಿತ್ ಶಾ ಅವರ ಈ ನಡೆಯನ್ನು ನೆಟ್ಟಿಗರು ಕೇವಲ ಪೊಲೀಸರಿಗೆ ನೀಡಿದ ಸೂಚನೆ ಎಂದು ನೋಡುತ್ತಿಲ್ಲ. ಬದಲಾಗಿ, ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರವನ್ನು ಆಡಳಿತದಿಂದ ಹಿಂದೆ ತಳ್ಳುವ ಮುನ್ಸೂಚನೆ ಇದು ಎಂದು ವಿಶ್ಲೇಷಿಸುತ್ತಿದ್ದಾರೆ. ಈ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ಪರ-ವಿರೋಧದ ಚರ್ಚೆಗಳು ಜೋರಾಗಿವೆ.
ಇನ್ನು ಅಮಿತ್ ಶಾ ಅವರ ಈ ನಡೆಯನ್ನು ತೃಣಮೂಲ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಅಮಿತ್ ಶಾ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ, ಅರೇ ಓ ಮೋಟಭಾಯ್… ನೀವು ಹೇಳುವುದನ್ನು ನಾವು ಕೇಳಿಸಿಕೊಳ್ಳುತ್ತಿದ್ದೇವೆ. ಆದರೆ ಮೊದಲು ನೀವು ಬಂಗಾಳ ಬಿಟ್ಟು ನಿಮ್ಮ ದೆಹಲಿಗೆ ವಾಪಸ್ ಹೋಗಿ ಎಂದು ತಿರುಗೇಟು ನೀಡಿದ್ದಾರೆ. ಅಧಿಕಾರಿಗಳನ್ನು ಸಾರ್ವಜನಿಕವಾಗಿ ನಡೆಸಿಕೊಳ್ಳುವ ರೀತಿ ಇದಲ್ಲ ಎಂದು ಟಿಎಂಸಿ ಆಕ್ರೋಶ ವ್ಯಕ್ತಪಡಿಸಿದೆ.
ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಹಲವು ಹಂತದ ಮತದಾನ ಮುಕ್ತಾಯಗೊಂಡಿದ್ದು, ಏಪ್ರಿಲ್ 29 ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಇಡೀ ದೇಶದ ಕುತೂಹಲ ಕೆರಳಿಸಿರುವ ಈ ಹೈವೋಲ್ಟೇಜ್ ಚುನಾವಣೆಯ ಫಲಿತಾಂಶವು ಮೇ 4 ರಂದು ಪ್ರಕಟವಾಗಲಿದ್ದು, ಬಂಗಾಳದ ಗದ್ದುಗೆ ಯಾರ ಪಾಲಾಗಲಿದೆ ಎಂಬುದು ಅಂದು ನಿರ್ಧಾರವಾಗಲಿದೆ. ಅಲ್ಲಿಯವರೆಗೆ ಇಂತಹ ವಾಗ್ದಾಳಿಗಳು ಮತ್ತು ಸವಾಲು-ಪ್ರತಿಸವಾಲುಗಳು ಮುಂದುವರಿಯುವುದು ಖಚಿತವಾಗಿದೆ.







