ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ಡಿಜಿಪಿ ಡಾ. ರಾಮಚಂದ್ರ ರಾವ್ ಅವರ ಅಮಾನತು ಆದೇಶವನ್ನು ಸರ್ಕಾರ ಹಿಂಪಡೆದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಗೃಹ ಸಚಿವ ಜಿ. ಪರಮೇಶ್ವರ್ ಅವರು, ಕೇವಲ ಮಾನವೀಯ ದೃಷ್ಟಿಯಿಂದ ಮತ್ತು ನಿವೃತ್ತಿ ಸೌಲಭ್ಯಗಳ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಡಿಜಿಪಿ ರಾಮಚಂದ್ರ ರಾವ್ ಅಮಾನತು ರದ್ದತಿಗೆ ಕಾರಣಗಳೇನು?
ಡಿಜಿಪಿ ರಾಮಚಂದ್ರ ರಾವ್ ಅವರು ಈ ತಿಂಗಳ ಅಂತ್ಯಕ್ಕೆ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಅವರು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ್ದು, ತಮ್ಮ ಮೇಲಿನ ತನಿಖೆ ಮುಂದುವರಿಯಲಿ, ಆದರೆ ನಿವೃತ್ತಿಯ ನಂತರ ಸಿಗಬೇಕಾದ ಪೆನ್ಷನ್ ಮತ್ತು ಇತರ ಸರ್ಕಾರಿ ಸೌಲಭ್ಯಗಳಿಗೆ ತೊಂದರೆಯಾಗದಂತೆ ಅಮಾನತು ಆದೇಶ ಹಿಂಪಡೆಯಲು ಕೋರಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಅನುಮತಿ ಪಡೆದು ಡಿಪಿಆರ್ ಈ ಕ್ರಮ ಕೈಗೊಂಡಿದೆ. ತನಿಖೆ ಮಾತ್ರ ಯಥಾಸ್ಥಿತಿಯಲ್ಲಿ ಮುಂದುವರಿಯಲಿದ್ದು, ಅದರ ವರದಿ ಬಂದ ನಂತರ ಮುಂದಿನ ತೀರ್ಮಾನವಾಗಲಿದೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.
ಐಪಿಎಲ್ ಫೈನಲ್ ಬೆಂಗಳೂರಿನಿಂದ ಶಿಫ್ಟ್ ಆಗಿದ್ದಕ್ಕೆ ಅಸಲಿ ಕಾರಣ ಬಹಿರಂಗ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐಪಿಎಲ್ ಫೈನಲ್ ಪಂದ್ಯ ಸ್ಥಳಾಂತರವಾಗಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಇದು ಭದ್ರತಾ ವೈಫಲ್ಯದ ಕಾರಣದಿಂದ ನಡೆದ ಬದಲಾವಣೆಯಲ್ಲ ಎಂದರು. ಬೆಂಗಳೂರಿನಲ್ಲಿ ಈಗಾಗಲೇ ಐದು ಪಂದ್ಯಗಳು ಸುಸೂತ್ರವಾಗಿ ನಡೆದಿವೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೇವಲ 33 ಸಾವಿರ ಆಸನ ಸಾಮರ್ಥ್ಯವಿದೆ. ಇದರಲ್ಲಿ 8 ಸಾವಿರದಷ್ಟು ಸೀಟುಗಳನ್ನು ಸ್ಪಾನ್ಸರ್ ಗಳಿಗೆ ನೀಡಬೇಕಾಗುತ್ತದೆ. ಇದರಿಂದ ಕೇವಲ 25 ಸಾವಿರ ಸೀಟುಗಳು ಮಾತ್ರ ಉಳಿಯುವುದರಿಂದ ಆಯೋಜಕರಿಗೆ ಇದು ಆರ್ಥಿಕವಾಗಿ ಲಾಭದಾಯಕವಾಗಿಲ್ಲ ಎಂಬ ಕಾರಣಕ್ಕೆ ಸ್ಥಳಾಂತರ ಮಾಡಲಾಗಿದೆ ಎಂಬ ಅನಧಿಕೃತ ಮಾಹಿತಿ ಇದೆ ಎಂದು ಅವರು ವಿವರಿಸಿದರು. ಬಿಸಿಸಿಐ ಮೊದಲೇ ಈ ಬಗ್ಗೆ ನಿರ್ಧಾರ ಮಾಡಿರಬಹುದು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಶೃಂಗೇರಿ ಚುನಾವಣೆ ಮತ್ತು ಪೋಸ್ಟಲ್ ಬ್ಯಾಲೆಟ್ ವಿವಾದ
ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರು ಸೋತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಈಗಾಗಲೇ ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಮತ್ತು ಎಫ್ ಐ ಆರ್ ಕೂಡ ದಾಖಲಾಗಿದೆ. ಮತ ಎಣಿಕೆಯಲ್ಲಿ ಏನಾದರೂ ಅಕ್ರಮ ನಡೆದಿದ್ದರೆ ತನಿಖೆಯ ಮೂಲಕ ಸತ್ಯಾಂಶ ಹೊರಬರಲಿದೆ. ನ್ಯಾಯಾಲಯದಲ್ಲಿ ಈ ಪ್ರಕರಣದ ಅಂತಿಮ ತೀರ್ಮಾನವಾಗಲಿದೆ ಎಂದು ತಿಳಿಸಿದರು.
ತಮಿಳುನಾಡು ರಾಜಕೀಯ ಮತ್ತು ಟಿವಿಕೆ ಬೆಂಬಲ
ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿರುವ ಕುರಿತಾದ ಟೀಕೆಗಳಿಗೆ ತಿರುಗೇಟು ನೀಡಿದ ಪರಮೇಶ್ವರ್, ಬಿಜೆಪಿಯವರು ದೇಶಾದ್ಯಂತ ಎಷ್ಟು ಜನರಿಗೆ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದರು. ತಮಿಳುನಾಡಿನಲ್ಲಿ ಉತ್ತಮ ಆಡಳಿತ ನೀಡುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡಿಎಂಕೆ ಮತ್ತು ಕಾಂಗ್ರೆಸ್ ಸಂಬಂಧ ಈಗಲೂ ಅಣ್ಣ ತಮ್ಮಂದಿರಂತೆಯೇ ಇದೆ, ಕೇವಲ ಸರ್ಕಾರ ರಚನೆಯ ಸಾಧ್ಯತೆಗಳ ಆಧಾರದ ಮೇಲೆ ಕೆಲವು ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಸಮರ್ಥಿಸಿಕೊಂಡರು.







