ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಹಂಚಿಕೊಂಡಿರುವ ಒಂದು ಪೋಸ್ಟ್ ಈಗ ಭಾರತದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಾರ್ವೆ ಭೇಟಿಯ ಸಂದರ್ಭದಲ್ಲಿ ವಿದೇಶಿ ಪತ್ರಕರ್ತೆಯೊಬ್ಬರ ಪ್ರಶ್ನೆಯನ್ನು ನಿರ್ಲಕ್ಷಿಸಿ ಮುಂದೆ ಸಾಗಿದ್ದಾರೆ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಮಹುವಾ ಮೊಯಿತ್ರಾ ಕೇಂದ್ರ ಸರ್ಕಾರ ಮತ್ತು ದೇಶದ ಮಾಧ್ಯಮಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾರ್ವೆ ಮೂಲದ ಪತ್ರಕರ್ತೆ ಹೆಲ್ಲೆ ಲಿಂಗ್ ಅವರು ಹಂಚಿಕೊಂಡಿರುವ ವಿಡಿಯೋ ಈಗ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಹೆಲ್ಲೆ ಲಿಂಗ್ ಅವರು, ಭಾರತದ ಪ್ರಧಾನಿ ನರೇಂದ್ರ ಮೋದಿ ನನ್ನ ಪ್ರಶ್ನೆಗೆ ಉತ್ತರಿಸಲಿಲ್ಲ, ಆದರೆ ಅವರು ಉತ್ತರ ನೀಡುತ್ತಾರೆ ಎಂಬ ನಿರೀಕ್ಷೆ ಕೂಡ ನನಗಿರಲಿಲ್ಲ ಎಂದು ಹೇಳಿರುವುದು ಸದ್ದು ಮಾಡುತ್ತಿದೆ. ಇದರ ಜೊತೆಗೆ ಅವರು ಪ್ರಪಂಚದ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ನಾರ್ವೆ ಮೊದಲ ಸ್ಥಾನದಲ್ಲಿದ್ದರೆ, ಭಾರತ 157ನೇ ಸ್ಥಾನಕ್ಕೆ ಕುಸಿದಿದೆ ಎಂಬ ಗಂಭೀರ ಸತ್ಯವನ್ನು ನೆನಪಿಸಿದ್ದಾರೆ.
ಈ ವಿಡಿಯೋವನ್ನು ಹಂಚಿಕೊಂಡಿರುವ ಮಹುವಾ ಮೊಯಿತ್ರಾ, ನಾರ್ವೆ ಮಾಧ್ಯಮಗಳು ಭಾರತದ ಗೋದಿ ಮೀಡಿಯಾ ಹೇಳಲು ಸಾಧ್ಯವಿಲ್ಲದ್ದನ್ನು ಹೇಳುತ್ತಿವೆ ಎಂದು ಕಿಡಿ ಕಾರಿದ್ದಾರೆ. ಕೇವಲ ವಿದೇಶ ಪ್ರವಾಸಗಳನ್ನು ಕೈಗೊಂಡರೆ ಸಾಲದು, ಒಂದು ಮುಕ್ತ ಸಮಾಜದ ಮೌಲ್ಯಗಳನ್ನು ಮತ್ತು ಸಂವಿಧಾನದ ಆಶಯಗಳನ್ನು ಅಲ್ಲಿಂದ ಕಲಿಯಬೇಕು ಎಂದು ಟೀಕಿಸಿದ್ದಾರೆ. ಈ ಹಿಂದೆ ಕೂಡ ಪ್ರಧಾನಿ ಮೋದಿ ಅವರು ವಿದೇಶಿ ಪ್ರವಾಸಗಳಲ್ಲಿ ಅಥವಾ ಸ್ವದೇಶದಲ್ಲಿ ಪತ್ರಿಕಾಗೋಷ್ಠಿಗಳನ್ನು ನಡೆಸದೆ ನೇರ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ನಿರಂತರವಾಗಿ ಆರೋಪಿಸುತ್ತಲೇ ಬಂದಿವೆ.
ಮತ್ತೊಂದೆಡೆ ಮಹುವಾ ಮೊಯಿತ್ರಾ ಅವರ ಈ ಪೋಸ್ಟ್ ವಿರುದ್ಧ ಬಿಜೆಪಿ ಬೆಂಬಲಿಗರು ಕೆಂಡಾಮಂಡಲವಾಗಿದ್ದಾರೆ. ವಿದೇಶಿ ಪತ್ರಕರ್ತರ ಹೇಳಿಕೆಗಳನ್ನು ಆಧಾರವಾಗಿಟ್ಟುಕೊಂಡು ದೇಶದ ಪ್ರಧಾನಿಯನ್ನು ಅವಮಾನಿಸುವುದು ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಧಕ್ಕೆ ತರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶದ ಗೌರವವನ್ನು ಹರಾಜು ಹಾಕಲಾಗುತ್ತಿದೆ ಎಂದು ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ. ಒಟ್ಟಾರೆ ಈ ಘಟನೆ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರೆಸ್ ಫ್ರೀಡಂ ಮತ್ತು ಪ್ರಧಾನಿಯ ಮೌನದ ಬಗ್ಗೆ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.








