ಬೆಂಗಳೂರು: ಆನೇಕಲ್ ಸಮೀಪ ಕರ್ನಾಟಕ ಗೃಹ ಮಂಡಳಿ ಮೂಲಕ ರೈತರ ಫಲವತ್ತಾದ ಜಮೀನು ಪಡೆದು ಅಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಮಾನ್ಯ ಜನರಿಗೆ ಮನೆ ನಿರ್ಮಿಸಿಕೊಡಬೇಕಾದ ಗೃಹ ಮಂಡಳಿ, ಈಗ ಸ್ಟೇಡಿಯಂ ನಿರ್ಮಿಸಲು ಹೊರಟಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.
ಗೃಹ ಮಂಡಳಿಯ ಉದ್ದೇಶವೇ ಬದಲಾಯಿತೇ
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ವಸತಿ ಸೌಕರ್ಯ ಕಲ್ಪಿಸುವ ಹೊಣೆಗಾರಿಕೆಯನ್ನು ಗೃಹ ಮಂಡಳಿ ಹೊತ್ತಿದೆ. ಆದರೆ ಮನೆ ಕಟ್ಟುವ ನೆಪದಲ್ಲಿ ರೈತರಿಂದ ಬೆಲೆಬಾಳುವ ಫಲವತ್ತಾದ ಜಮೀನು ಪಡೆದು, ಈಗ ಅಲ್ಲಿ ವಾಣಿಜ್ಯ ಉದ್ದೇಶದ ಸ್ಟೇಡಿಯಂ ನಿರ್ಮಿಸಲು ಹೊರಟಿರುವುದು ಸರಿಯಲ್ಲ. ಸ್ಟೇಡಿಯಂ ಬೇಕಿದ್ದರೆ ಅದನ್ನು ಸರ್ಕಾರವೇ ನೇರವಾಗಿ ಮಾಡಲಿ, ಅದನ್ನು ಬಿಟ್ಟು ವಸತಿ ಮಂಡಳಿಯ ಮೂಲಕ ಈ ಕೆಲಸ ಮಾಡಿಸುತ್ತಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ದೂರಿದರು.
ಆನೇಕಲ್ ಭಾಗವು ಈಗಾಗಲೇ ಅತಿಯಾದ ವಾಹನ ದಟ್ಟಣೆಯಿಂದ ಬಳಲುತ್ತಿದೆ. ಗಡಿ ಭಾಗವಾದ ಆನೇಕಲ್‌ಗೆ ಸಂಚರಿಸುವುದೇ ಈಗ ದೊಡ್ಡ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಅಲ್ಲಿ ಸ್ಟೇಡಿಯಂ ನಿರ್ಮಿಸಿದರೆ ಜನದಟ್ಟಣೆ ಮತ್ತು ಸಂಚಾರ ದಟ್ಟಣೆಯನ್ನು ನಿರ್ವಹಿಸಲು ಸಾಧ್ಯವೇ ಇಲ್ಲ. ಸರ್ಕಾರದ ಈ ನಿರ್ಧಾರ ಅವೈಜ್ಞಾನಿಕವಾಗಿದೆ. ಒಂದು ವೇಳೆ ಸ್ಟೇಡಿಯಂ ಅನಿವಾರ್ಯವಾಗಿದ್ದರೆ ಅದನ್ನು ತುಮಕೂರು ರಸ್ತೆಯ ಕಡೆಗೆ ನಿರ್ಮಿಸಿದ್ದರೆ ಜನರಿಗೆ ಅನುಕೂಲವಾಗುತ್ತಿತ್ತು ಎಂದು ಅವರು ಸಲಹೆ ನೀಡಿದರು.
ಬೆಂಗಳೂರು ನಗರವನ್ನು ಕೇವಲ ಒಂದು ದಿಕ್ಕಿನಲ್ಲಿ ಅಥವಾ ವರ್ಟಿಕಲ್ ಆಗಿ ಬೆಳೆಸುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ಅಭಿವೃದ್ಧಿ ಎಂಬುದು ಕೇವಲ ಬೆಂಗಳೂರಿನ ಸುತ್ತಮುತ್ತ ಅಥವಾ ತಮಿಳುನಾಡು ಗಡಿಯ ಕಡೆಗೆ ಮಾತ್ರ ಸೀಮಿತವಾಗಬಾರದು. ಅದರ ಬದಲು ಉತ್ತರ ಕರ್ನಾಟಕದ ಕಡೆಗೆ ಗಮನ ಹರಿಸಿದ್ದರೆ ಆ ಭಾಗದ ಯುವಕರಿಗೆ ಮತ್ತು ಜನರಿಗೆ ಅನುಕೂಲವಾಗುತ್ತಿತ್ತು. ಸರ್ಕಾರಕ್ಕೆ ಬೆಂಗಳೂರಿನ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ, ಇಡೀ ಕರ್ನಾಟಕವನ್ನೇ ಬೆಂಗಳೂರು ಎಂದು ಮರುನಾಮಕರಣ ಮಾಡಲಿ ಎಂದು ಮಾರ್ಮಿಕವಾಗಿ ಟೀಕಿಸಿದರು.
ಸ್ಟೇಡಿಯಂ ನಿರ್ಮಾಣದ ಹೆಸರಿನಲ್ಲಿ ದೊಡ್ಡ ಮಟ್ಟದ ಲೂಟಿ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಈ ಯೋಜನೆಯ ವಿರುದ್ಧ ಪ್ರಕೃತಿಯೇ ಮುನಿದಿದೆ ಎಂದರು. ಅರಣ್ಯ ಸಚಿವರೇ ಹೇಳಿರುವಂತೆ ಪ್ರಸ್ತಾವಿತ ಸ್ಟೇಡಿಯಂ ಜಾಗವು ಆನೆ ಕಾರಿಡಾರ್ ವ್ಯಾಪ್ತಿಯಲ್ಲಿದೆ. ಇಲ್ಲಿ ಜನಸಂದಣಿ ಹೆಚ್ಚಾದರೆ ಕಾಡು ಪ್ರಾಣಿಗಳಿಗೆ ತೊಂದರೆಯಾಗುವುದು ನಿಶ್ಚಿತ. ಸ್ಟೇಡಿಯಂಗಳಲ್ಲಿ ಈ ಹಿಂದೆ ಕಾಲ್ತುಳಿತದಿಂದ ಸಾವುಗಳು ಸಂಭವಿಸಿವೆ, ಆದರೆ ಇಲ್ಲಿ ಸ್ಟೇಡಿಯಂ ನಿರ್ಮಿಸಿದರೆ ಜನರು ಆನೆ ತುಳಿತಕ್ಕೆ ಬಲಿಯಾಗುವ ಅಪಾಯವಿದೆ ಎಂದು ಎಚ್ಚರಿಸಿದರು.
ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ಈಗಾಗಲೇ ಕೋರ್ ಕಮಿಟಿಯಲ್ಲಿ ಚರ್ಚೆ ನಡೆದಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸುವ ಬಗ್ಗೆ ಯಾವುದೇ ಅಧಿಕೃತ ನಿರ್ಧಾರವಾಗಿಲ್ಲ. ದೇವೇಗೌಡರ ಮೇಲೆ ನಮಗೆ ಅಪಾರ ಗೌರವವಿದೆ. ಅವರು ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದಾರೆಯೇ ಹೊರತು ಬಿಜೆಪಿಯ ಭಾಗವಲ್ಲ ಎಂದು ಸ್ಪಷ್ಟನೆ ನೀಡಿದರು.








