ಮಧ್ಯಪ್ರದೇಶ- ಕಾಂಗ್ರೆಸ್ ಗೆ ಮತ್ತೊಂದು ಆಘಾತ – ಬಿಜೆಪಿ ಸೇರಿದ ಶಾಸಕಿ ಸುಮಿತ್ರ ಕಾಸ್ಡೇಕರ್
ಭೋಪಾಲ್, ಜುಲೈ 18: ಮಧ್ಯಪ್ರದೇಶದ ಬುರ್ಹಾನ್ಪುರ ಜಿಲ್ಲೆಯ ನೇಪನಗರ ಕಾಂಗ್ರೆಸ್ ಶಾಸಕಿ ಸುಮಿತ್ರಾ ದೇವಿ ಕಾಸ್ಡೇಕರ್ ಅವರು ಶುಕ್ರವಾರ ವಿಧಾನಸಭೆಗೆ ರಾಜೀನಾಮೆ ನೀಡಿ ಆಡಳಿತಾರೂಢ ಬಿಜೆಪಿಗೆ ಸೇರಿದ್ದಾರೆ.
ಪ್ರದ್ಯುಮಾನ್ ಸಿಂಗ್ ಲೋಧಿ ಅವರ ರಾಜೀನಾಮೆಯ ನಂತರ ರಾಜ್ಯದಲ್ಲಿ ಇದು ಕಾಂಗ್ರೆಸ್ ಗೆ ಮತ್ತೊಂದು ಆಘಾತವಾಗಿದೆ.
ಕಾಸ್ಡೇಕರ್ ಅವರು ತಮ್ಮ ರಾಜೀನಾಮೆಯನ್ನು ಸ್ಪೀಕರ್ ರಾಮೇಶ್ವರ ಶರ್ಮಾ ಅವರಿಗೆ ಸಲ್ಲಿಸಿದರು.
ನೇಪನಗರ ಶಾಸಕರ ರಾಜೀನಾಮೆಯನ್ನು ನಾನು ಒಪ್ಪಿಕೊಂಡಿದ್ದೇನೆ, ಏಕೆಂದರೆ ಅದರ ಬಗ್ಗೆ ಯೋಚಿಸಲು ಸಮಯ ನೀಡಿದ ನಂತರವೂ ರಾಜೀನಾಮೆ ಸ್ವೀಕರಿಸಬೇಕೆಂದು ಅವರು ಒತ್ತಾಯಿಸಿದರು ಎಂದು ಸ್ಪೀಕರ್ ಶರ್ಮಾ ಹೇಳಿದ್ದಾರೆ
ಸ್ಪೀಕರ್ ಸುಮಿತ್ರಾ ದೇವಿ ಕಾಸ್ಡೇಕರ್ ಅವರ ರಾಜೀನಾಮೆಯನ್ನು ಅಂಗೀಕರಿಸುವುದರೊಂದಿಗೆ, ಸದನದಲ್ಲಿ ಕಾಂಗ್ರೆಸ್ ಬಲ 90 ಕ್ಕೆ ಇಳಿದಿದೆ. ಅಲ್ಲದೆ, ಮಧ್ಯಪ್ರದೇಶದ 230 ವಿಧಾನಸಭಾ ಸ್ಥಾನಗಳಲ್ಲಿ 26 ಸ್ಥಾನಗಳು ಈಗ ಖಾಲಿ ಇದ್ದು, ಇದಕ್ಕಾಗಿ ಉಪಚುನಾವಣೆ ನಡೆಯಲಿದೆ.
ಸಮಾರಂಭದಲ್ಲಿ ಕಾಸ್ಡೇಕರ್ ಅವರನ್ನು ಬಿಜೆಪಿಗೆ ಸ್ವಾಗತಿಸಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್, ಕಾಂಗ್ರೆಸ್ ಮುಳುಗುವ ಹಡಗು. ಅಲ್ಲಿ ಜನರು ಉಸಿರುಗಟ್ಟುತ್ತಿದ್ದಾರೆಂದು ಭಾವಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ.
ನೀವು ದೆಹಲಿಯನ್ನು ನೋಡಿದಾಗ, ಅಲ್ಲಿ ಯಾವಾಗಲೂ ಸೋನಿಯಾ ಗಾಂಧಿ ಪಕ್ಷದ ಅಧ್ಯಕ್ಷರಾಗಿರುತ್ತಾರೆ ಅಥವಾ ರಾಹುಲ್ ಗಾಂಧಿ ಮುಖ್ಯಸ್ಥರಾಗಿತ್ತಾರೆ ಎಂದು ಹೇಳಿದ ಚೌಹಾನ್ ರಾಜ್ಯದಲ್ಲೂ, ಅದೇ ವ್ಯಕ್ತಿ ಮೊದಲು ಪಕ್ಷದ ಅಧ್ಯಕ್ಷನಾಗುತ್ತಾರೆ, ನಂತರ ಮುಖ್ಯಮಂತ್ರಿ ಮತ್ತು ಈಗ ಪ್ರತಿಪಕ್ಷದ ನಾಯಕನಾಗುತ್ತಾರೆ ಎಂದು ಕಮಲ್ ನಾಥ್ ಹೆಸರಿಸದೆ ಅವರು ಟಾಂಗ್ ನೀಡಿದರು
ಈ ಸಂದರ್ಭದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಕಾಸ್ಡೇಕರ್, ನನ್ನನ್ನು ಪಕ್ಷದಲ್ಲಿ ಕಡೆಗಣಿಸಲಾಗಿದೆ. ಕಾಂಗ್ರೆಸ್ ನ 15 ತಿಂಗಳ ಆಡಳಿತದಲ್ಲಿ ನನ್ನ ಬುಡಕಟ್ಟು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ನಡೆದಿಲ್ಲ ಎಂದು ಹೇಳಿದರು. ಅಭಿವೃದ್ಧಿಯ ವಿಷಯದಲ್ಲಿ ನಾನು ಪಕ್ಷದ ನಾಯಕರನ್ನು ಮತ್ತು ಇತರರನ್ನು ಭೇಟಿಯಾಗುತ್ತಿದ್ದೆ. ಆದರೆ ಎಲ್ಲವೂ ವ್ಯರ್ಥ ಪ್ರಯತ್ನ. ಆದ್ದರಿಂದ ನನ್ನ ಪ್ರದೇಶದ ಅಭಿವೃದ್ಧಿಗಾಗಿ ಬಿಜೆಪಿಗೆ ಸೇರಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ವಿಷ್ಣು ದತ್ ಶರ್ಮಾ ಮತ್ತು ಸಹಕಾರಿ ಸಚಿವ ಅರವಿಂದ ಭದೋರಿಯಾ ಉಪಸ್ಥಿತರಿದ್ದರು.
ಕಾಂಗ್ರೆಸ್ ಶಾಸಕ ಪ್ರದ್ಯುಮನ್ ಸಿಂಗ್ ಲೋಧಿ ಅವರು ವಿಧಾನಸಭಾ ಸದಸ್ಯ ಸ್ಥಾನಕ್ಕೆ ಭಾನುವಾರ ರಾಜೀನಾಮೆ ನೀಡಿದರು. ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ, ಬಿಜೆಪಿ ಸರ್ಕಾರ ಲೋಧಿಯನ್ನು ರಾಜ್ಯ ನಾಗರಿಕ ಸರಬರಾಜು ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿತು ಮತ್ತು ಅವರಿಗೆ ಕ್ಯಾಬಿನೆಟ್ ಸಚಿವರ ಸ್ಥಾನವನ್ನು ನೀಡಿತು.
ಮಾರ್ಚ್ ನಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರು ತಮ್ಮ ನಿಷ್ಠಾವಂತ 22 ಶಾಸಕರೊಂದಿಗೆ ಪಕ್ಷವನ್ನು ತೊರೆದ ಕಾರಣ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು.