ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಕೇಂದ್ರ ಸರ್ಕಾರಕ್ಕಿಂತ ರಾಜ್ಯ ಸರ್ಕಾರಕ್ಕೇ ಹೆಚ್ಚು ಲಾಭವಾಗುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಳೆದ 10 ದಿನಗಳಲ್ಲಿ ನಾಲ್ಕನೇ ಬಾರಿ ತೈಲ ದರ ಏರಿಕೆಯಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಮೇಲೆ ತಪ್ಪು ಹೊರಿಸುವ ಬದಲು ರಾಜ್ಯ ಸರ್ಕಾರದ ತೆರಿಗೆ ಕಡಿತದ ಬಗ್ಗೆ ಯೋಚಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ತೆರಿಗೆ ಕಡಿಮೆ ಮಾಡಿದರೆ, ದೆಹಲಿ ಹಾಗೂ ಗುಜರಾತ್ ರಾಜ್ಯಗಳ ದರಕ್ಕೆ ಸಮಾನವಾಗಿ ಕರ್ನಾಟಕದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಲಭ್ಯವಾಗಬಹುದು ಎಂದು ಅವರು ಹೇಳಿದರು. ತೈಲ ದರ ವಿಚಾರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ ಆರ್ ಅಶೋಕ್, ಜನರ ಗಮನ ಬೇರೆಡೆ ತಿರುಗಿಸಲು ಕಾಂಗ್ರೆಸ್ ಸರ್ಕಾರ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದೆ ಎಂದು ಟೀಕಿಸಿದರು.
ಇದೇ ವೇಳೆ, ಇಂಧನ ದರ ಏರಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಾರದು ಎಂದು ಹೇಳಿದ ಅವರು, ಜನರ ಮೇಲೆ ಹೆಚ್ಚುವರಿ ಭಾರ ಬೀಳದಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.








