ನವದೆಹಲಿ : ಕರ್ನಾಟಕ ರಾಜಕಾರಣದ ದಿಕ್ಸೂಚಿ ಈಗ ದೆಹಲಿಯತ್ತ ತಿರುಗಿದೆ. ರಾಜ್ಯದ ಮುಖ್ಯಮಂತ್ರಿ ಗಾದಿಯ ಬದಲಾವಣೆ ಕುರಿತು ಭಾರೀ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ವಿಶೇಷವೆಂದರೆ ಮಾಧ್ಯಮಗಳ ಯಾವುದೇ ಕಠಿಣ ಪ್ರಶ್ನೆಗಳಿಗೂ ಎದೆಗುಂದದ ಡಿಕೆಶಿ, ಕೇವಲ ನಗುವಿನ ಮೂಲಕವೇ ಉತ್ತರ ನೀಡುತ್ತಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.
ದೆಹಲಿಯ ತಮ್ಮ ನಿವಾಸದಿಂದ ಕರ್ನಾಟಕ ಭವನಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರನ್ನು ಮಾಧ್ಯಮದವರು ಮುತ್ತಿಕೊಂಡರು. ಹೈಕಮಾಂಡ್ ಜೊತೆಗಿನ ಹೈ ವೋಲ್ಟೇಜ್ ಸಭೆಯ ಬಗ್ಗೆ ಹಾಗೂ ಸಿಎಂ ಕುರ್ಚಿ ಬದಲಾವಣೆಯ ಬಗ್ಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು. ಆದರೆ ಡಿ.ಕೆ. ಶಿವಕುಮಾರ್ ಯಾವುದಕ್ಕೂ ಅಧಿಕೃತವಾಗಿ ಪ್ರತಿಕ್ರಿಯಿಸಲಿಲ್ಲ. ಬದಲಾಗಿ ಅವರ ಮುಖದಲ್ಲಿ ಮಿನುಗುತ್ತಿದ್ದ ಗೆಲುವಿನ ನಗು ಮಾತ್ರ ಅನೇಕ ಅರ್ಥಗಳನ್ನು ಹೊಮ್ಮಿಸುತ್ತಿತ್ತು.
ರಾಜಕೀಯ ಚಾಣಾಕ್ಷತನ ಮೆರೆದ ಡಿಕೆಶಿ
ಸಭೆಯ ಒಳಸುಳಿಗಳ ಬಗ್ಗೆ ಕೆದಕಿದಾಗ ಡಿಕೆಶಿ ಅತಿ ಜಾಣ್ಮೆಯಿಂದ ವಿಷಯಾಂತರ ಮಾಡಿದರು. ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕರ್ನಾಟಕದ ಪರವಾಗಿ ತೀರ್ಪು ನೀಡಿದೆ, ಇದರ ಬಗ್ಗೆ ನಿಮಗೆ ಮಾಹಿತಿ ಇದೆಯೇ ಎಂದು ಮರುಪ್ರಶ್ನಿಸುವ ಮೂಲಕ ತಾವೊಬ್ಬ ಜವಾಬ್ದಾರಿಯುತ ನಾಯಕ ಎಂಬುದನ್ನು ಸಾಬೀತುಪಡಿಸಿದರು. ಆ ಮೂಲಕ ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತಿರುವ ಆಂತರಿಕ ಚರ್ಚೆಗಳನ್ನು ಗುಟ್ಟಾಗಿಡುವಲ್ಲಿ ಅವರು ಯಶಸ್ವಿಯಾದರು.
ನೀವು ಸಿಎಂ ಆಗುತ್ತೀರಾ ಎನ್ನುವ ನೇರ ಪ್ರಶ್ನೆಗೆ ಕೇವಲ ಮಂದಹಾಸವನ್ನೇ ಉತ್ತರವಾಗಿಸಿದ ಡಿಕೆಶಿ, ಯಾವುದೇ ನಿರಾಕರಣೆ ಅಥವಾ ಸಮರ್ಥನೆಗೆ ಮುಂದಾಗಲಿಲ್ಲ. ನಿನ್ನೆ ಬೆಳಿಗ್ಗೆ ತಮ್ಮ ನಿವಾಸದ ಬಳಿ ಮಾಧ್ಯಮದವರು ಜಮಾಯಿಸಿದ್ದನ್ನು ಕಂಡು ನಯವಾಗಿಯೇ ಗದರಿಸಿದ ಅವರು, ನಂತರದ ಕ್ಷಣಗಳಲ್ಲಿ ಫುಲ್ ಖುಷ್ ಆಗಿ ಕಂಡುಬಂದರು.
ಒಟ್ಟಾರೆಯಾಗಿ ಡಿ.ಕೆ. ಶಿವಕುಮಾರ್ ಅವರ ಈ ನಿಗೂಢ ನಗು ಮತ್ತು ಆತ್ಮವಿಶ್ವಾಸದ ನಡಿಗೆ, ಕರ್ನಾಟಕ ಕಾಂಗ್ರೆಸ್ ನಲ್ಲಿ ದೊಡ್ಡ ಮಟ್ಟದ ಬದಲಾವಣೆಯ ಗಾಳಿ ಬೀಸುತ್ತಿದೆಯೇ ಎಂಬ ಅನುಮಾನಕ್ಕೆ ಪುಷ್ಟಿ ನೀಡಿದೆ. ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆಯೇ ಅಥವಾ ರಾಜಕೀಯ ತಂತ್ರಗಾರಿಕೆಯಲ್ಲಿ ಡಿಕೆಶಿ ಮೇಲುಗೈ ಸಾಧಿಸಿದ್ದಾರೆಯೇ ಎಂಬುದು ಸದ್ಯದ ಕುತೂಹಲ. ಈ ಮೌನದ ಹಿಂದಿನ ರಹಸ್ಯ ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಕಾದು ನೋಡಬೇಕಿದೆ.








