ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹೈಕಮಾಂಡ್ ಭೇಟಿ ಮತ್ತು ಕುರ್ಚಿ ಕಾಳಗದ ವಿಚಾರವೀಗ ಹದ್ದು ಮೀರಿದ ವಾಕ್ಸಮರಕ್ಕೆ ಕಾರಣವಾಗಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ದೆಹಲಿ ಹೈಕಮಾಂಡ್ ಮುಂದೆ ಶರಣಾಗಿದೆ ಎಂದು ಬಿಜೆಪಿ ತೀವ್ರವಾಗಿ ವಾಗ್ಧಾಳಿ ನಡೆಸಿದೆ. ನಾಯಕರ ವೈಯಕ್ತಿಕ ಅಧಿಕಾರದ ಹಪಾಹಪಿಯಿಂದಾಗಿ ರಾಜ್ಯದ ಅಭಿವೃದ್ಧಿ ಹಳ್ಳ ಹಿಡಿದಿದೆ ಮತ್ತು ಆಡಳಿತ ಯಂತ್ರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ಕಮಲ ಪಡೆ ಆಕ್ರೋಶ ಹೊರಹಾಕಿದೆ.
ಕುರ್ಚಿ ಕಾಳಗದಲ್ಲಿ ಅನಾಥವಾಯಿತೇ ಕರುನಾಡು?
ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆಯ ಕಿತ್ತಾಟ ಬೀದಿಗೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳಲು ದೆಹಲಿ ಬಾಗಿಲು ತಟ್ಟುತ್ತಿದ್ದರೆ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಮ್ಮ ಕೂಲಿ ಕೊಡಿ ಎಂದು ಹೈಕಮಾಂಡ್ ಮುಂದೆ ಗೋಗರೆಯುತ್ತಿದ್ದಾರೆ. ಇತ್ತ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕಾಗಿ ಪಟ್ಟು ಹಿಡಿದಿದ್ದಾರೆ. ಪರಮೇಶ್ವರ್ ಮತ್ತು ಮಹದೇವಪ್ಪ ಕೂಡ ನಮಗೊಂದು ಚಾನ್ಸ್ ಕೊಡಿ ಎಂದು ದೆಹಲಿಯಲ್ಲಿ ಲಾಬಿ ನಡೆಸುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿದೆಯೇ ಎಂಬ ಸಂಶಯ ಮೂಡುತ್ತಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.
ಸಚಿವರಿಗಾಗಿ ರಾಜ್ಯದ ಜನರ ಹುಡುಕಾಟ
ಎಕ್ಸ್ ಖಾತೆಯಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿರುವ ಬಿಜೆಪಿ, ಸಚಿವರು ಮತ್ತು ಮುಖ್ಯಮಂತ್ರಿಗಳು ರಾಜ್ಯದ ಸಮಸ್ಯೆಗಳನ್ನು ಆಲಿಸುವ ಬದಲು ದೆಹಲಿಯ ಗೇಟು ಕಾಯುವುದರಲ್ಲೇ ಮಗ್ನರಾಗಿದ್ದಾರೆ ಎಂದು ಟೀಕಿಸಿದೆ. ಅಭಿವೃದ್ಧಿ ಕುಂಠಿತದಂತಹ ಗಂಭೀರ ಸಮಸ್ಯೆಗಳಿದ್ದರೂ ಸರ್ಕಾರಕ್ಕೆ ಅಧಿಕಾರವೇ ಮುಖ್ಯವಾಗಿದೆ. ರಾಜ್ಯದ ಜನತೆ ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳಲು ಸಚಿವರನ್ನು ಹುಡುಕುವಂತಾಗಿದೆ ಎಂದು ವ್ಯಂಗ್ಯವಾಡಿದೆ.
ಸರ್ಕಾರ ವಿಸರ್ಜನೆಗೆ ಬಿಜೆಪಿ ಆಗ್ರಹ
ರಾಜ್ಯದ ಆಡಳಿತ ಅಯೋಮಯವಾಗಿರುವ ಈ ಸಂದರ್ಭದಲ್ಲಿ ಸರ್ಕಾರವನ್ನು ಕೂಡಲೇ ವಿಸರ್ಜಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಜನರಿಗೆ ಸ್ಪಂದಿಸದ, ಹೈಕಮಾಂಡ್ ಗುಲಾಮಗಿರಿಯಲ್ಲಿರುವ ಈ ಸರ್ಕಾರ ಅಧಿಕಾರದಲ್ಲಿ ಮುಂದುವರಿಯಲು ನೈತಿಕ ಹಕ್ಕಿಲ್ಲ. ಜನತೆ ಈ ಸರ್ಕಾರದ ಪತನಕ್ಕಾಗಿ ಕಾಯುತ್ತಿದ್ದಾರೆ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ. ಆಡಳಿತ ಯಂತ್ರ ಕುಸಿದು ಕರುನಾಡು ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ ಎಂದು ಬಿಜೆಪಿ ತನ್ನ ಆಕ್ರೋಶ ವ್ಯಕ್ತಪಡಿಸಿದೆ.
ಸತೀಶ್ ಜಾರಕಿಹೊಳಿ ಅವರ ಹೇಳಿಕೆಗಳನ್ನು ಉಲ್ಲೇಖಿಸಿರುವ ಬಿಜೆಪಿ, ರಾಜ್ಯದ ಜನತೆ ನಿಮ್ಮ ಸರ್ಕಾರದ ವಿಸರ್ಜನೆಗೆ ಕಾಯುತ್ತಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್ ಗೇಟು ಕಾಯುವ ಬದಲು ರಾಜ್ಯದಲ್ಲಿ ಸರಿಯಾಗಿ ಆಡಳಿತ ನಡೆಸಿ, ಇಲ್ಲದಿದ್ದರೆ ಕುರ್ಚಿ ಬಿಟ್ಟು ಕೆಳಗಿಳಿಯಿರಿ ಎಂದು ಸವಾಲು ಹಾಕಿದೆ. ಒಟ್ಟಾರೆಯಾಗಿ ಕಾಂಗ್ರೆಸ್ ನಾಯಕರ ದೆಹಲಿ ದೌಡು ಈಗ ರಾಜ್ಯ ರಾಜಕೀಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.
https://x.com/BJP4Karnataka/status/2059227294523355142?ref_src=twsrc%5Etfw%7Ctwcamp%5Etweetembed%7Ctwterm%5E2059227294523355142%7Ctwgr%5E501bdada851709e4e3f3d35d9f32a2b3a22dc5df%7Ctwcon%5Es1_c10&ref_url=https%3A%2F%2Fapi-news.dailyhunt.in%2F








