ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಯ ಪರ್ವ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿ, ರಾಜ್ಯಪಾಲರಿಗೆ ಅಧಿಕೃತವಾಗಿ ಪತ್ರ ರವಾನಿಸಿದ್ದಾರೆ. ರಾಜ್ಯಪಾಲರು ಸದ್ಯ ಹೊರ ರಾಜ್ಯದಲ್ಲಿರುವುದರಿಂದ ಈ ರಾಜೀನಾಮೆ ಪತ್ರ ತಾಂತ್ರಿಕವಾಗಿ ಅಂಗೀಕಾರವಾಗುವುದು ಮಾತ್ರ ಬಾಕಿ ಉಳಿದಿದೆ. ಇದರ ಬೆನ್ನಲ್ಲೇ ಕನಕಪುರದ ಬಂಡೆ ಡಿ ಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗಿ ಪಟ್ಟಾಭಿಷೇಕ ಮಾಡಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.
ಆದರೆ ಇಲ್ಲಿ ಗಮನಿಸಬೇಕಾದ ಅತ್ಯಂತ ಪ್ರಮುಖ ಅಂಶವೆಂದರೆ, ಸಿದ್ದರಾಮಯ್ಯ ಅವರು ಅಧಿಕಾರದಿಂದ ಕೆಳಗಿಳಿಯುವ ಮುನ್ನವೇ ತಮ್ಮ ನೆಚ್ಚಿನ ಮತ್ತು ಅತ್ಯಂತ ಆಪ್ತ ಅಧಿಕಾರಿಗಳನ್ನು ಸುರಕ್ಷಿತ ಹಾಗೂ ಪ್ರಭಾವಿ ಇಲಾಖೆಗಳಿಗೆ ವರ್ಗಾವಣೆ ಮಾಡುವ ಮೂಲಕ ಮಾಸ್ಟರ್ ಪ್ಲ್ಯಾನ್ ಒಂದನ್ನು ರೂಪಿಸಿದ್ದಾರೆ. ಸಾಮಾನ್ಯವಾಗಿ ಹೊಸ ಸರ್ಕಾರ ಅಥವಾ ಹೊಸ ಮುಖ್ಯಮಂತ್ರಿ ಬಂದಾಗ ಹಳೆಯ ಅಧಿಕಾರಿಗಳನ್ನು ಬದಲಾಯಿಸುವುದು ಆಡಳಿತಾತ್ಮಕ ಸಂಪ್ರದಾಯ. ಇದನ್ನು ಮೊದಲೇ ಅರಿತ ಸಿದ್ದರಾಮಯ್ಯ, ತಮ್ಮ ತಂಡದಲ್ಲಿದ್ದ ಅಧಿಕಾರಿಗಳಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಆಯಕಟ್ಟಿನ ಜಾಗಗಳಿಗೆ ನಿಯುಕ್ತಿಗೊಳಿಸಿದ್ದಾರೆ.
ವರ್ಗಾವಣೆಗೊಂಡ ಪ್ರಮುಖ ಅಧಿಕಾರಿಗಳ ಪಟ್ಟಿ ಇಲ್ಲಿದೆ
ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿಯಾಗಿದ್ದ ಕೆಎಎಸ್ ಅಧಿಕಾರಿ ಡಾ.ವೆಂಕಟೇಶಯ್ಯ ಅವರನ್ನು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಇನ್ನು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ರಮೇಶ್ ಪಿ.ಕೋನರೆಡ್ಡಿ ಅವರನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನಿರ್ದೇಶಕರಾಗಿ ಅತ್ಯಂತ ಪ್ರಭಾವಿ ಹುದ್ದೆಗೆ ವರ್ಗಾಯಿಸಲಾಗಿದೆ.
ಅಷ್ಟೇ ಅಲ್ಲದೆ, ಸಿಎಂ ಜಂಟಿ ಕಾರ್ಯದರ್ಶಿಯಾಗಿದ್ದ ಟಿ.ಎನ್.ಕೃಷ್ಣಮೂರ್ತಿ ಅವರನ್ನು ನಗರಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿ ಹುದ್ದೆಗೆ ನಿಯೋಜಿಸಲಾಗಿದೆ. ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಬಿ.ಶಿವಸ್ವಾಮಿ ಅವರನ್ನು ಕ್ರೈಸ್ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಕ ಮಾಡುವ ಮೂಲಕ ಸಿದ್ದರಾಮಯ್ಯ ತಮ್ಮ ಆಪ್ತ ವಲಯದ ಅಧಿಕಾರಿಗಳಿಗೆ ಸುರಕ್ಷಿತ ನೆಲೆ ಒದಗಿಸಿದ್ದಾರೆ.
ಈ ಅಧಿಕಾರಿಗಳ ಪೈಕಿ ಡಾ. ವೆಂಕಟೇಶಯ್ಯ ಅವರನ್ನು 2023ರಲ್ಲಿ ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆದಾಗ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿತ್ತು. ಹಾಗೆಯೇ ರಮೇಶ್ ಪಿ.ಕೋನರೆಡ್ಡಿ ಅವರೂ ಕೂಡ ಸಿಎಂ ಅವರ ನೆಚ್ಚಿನ ಅಧಿಕಾರಿಯಾಗಿದ್ದರು. ಈಗ ಸಿದ್ದರಾಮಯ್ಯ ಪದತ್ಯಾಗ ಮಾಡುತ್ತಿದ್ದಂತೇ ಈ ಅಧಿಕಾರಿಗಳ ಭವಿಷ್ಯ ಏನಾಗಬಹುದು ಎಂಬ ಚರ್ಚೆ ಇತ್ತು. ಆದರೆ ರಾಜೀನಾಮೆ ಅಂಗೀಕಾರವಾಗುವ ಮೊದಲೇ ಸಿದ್ದರಾಮಯ್ಯ ಅವರು ಈ ವರ್ಗಾವಣೆ ಆದೇಶ ಹೊರಡಿಸುವ ಮೂಲಕ ತಮ್ಮ ಆಪ್ತರಿಗೆ ಆಡಳಿತಾತ್ಮಕ ರಕ್ಷಣೆ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಈ ಕೊನೆಯ ಕ್ಷಣದ ನಡೆ ಈಗ ರಾಜಕೀಯ ಮತ್ತು ಅಧಿಕಾರಿಗಳ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.








