ಪಶ್ಚಿಮ ಬಂಗಾಳದ ರಾಜಕೀಯ ಸಮರ ಈಗ ಆಸ್ಪತ್ರೆಯ ಹೊಸ್ತಿಲಿಗೆ ಬಂದು ನಿಂತಿದೆ. ಸೋನಾರ್ಪುರದಲ್ಲಿ ಕಿಡಿಗೇಡಿಗಳ ಹಲ್ಲೆಯಿಂದ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದ ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಬಿಜೆಪಿ ನಾಯಕರ ಒತ್ತಡದ ಮೇರೆಗೆ ಆಸ್ಪತ್ರೆಯಿಂದ ಬಲವಂತವಾಗಿ ಬಿಡುಗಡೆ ಮಾಡಿಸಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಗಂಭೀರವಾಗಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ ಅವರು ದೆಹಲಿಯ ನಾಯಕರು ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ವೈದ್ಯರ ಮೇಲೆ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಅಭಿಷೇಕ್ ಅವರ ಆರೋಗ್ಯ ಸ್ಥಿತಿ ಇನ್ನೂ ಸುಧಾರಿಸಿಲ್ಲ. ಹಲ್ಲೆಯ ತೀವ್ರತೆಗೆ ಅವರ ದೇಹದ ಒಳಭಾಗದಲ್ಲಿ ರಕ್ತ ಹೆಪ್ಪುಗಟ್ಟಿದೆ. ಇಂತಹ ಸೂಕ್ಷ್ಮ ಸಮಯದಲ್ಲಿ ಅವರನ್ನು ತೀವ್ರ ಚಿಕಿತ್ಸಾ ಘಟಕದಿಂದ (ಐಟಿಯು) ಬಿಡುಗಡೆ ಮಾಡಿರುವುದು ದೊಡ್ಡ ಷಡ್ಯಂತ್ರ ಎಂದು ಅವರು ಗುಡುಗಿದ್ದಾರೆ.
ಸೋನಾರ್ಪುರದಲ್ಲಿ ಚುನಾವಣೋತ್ತರ ಹಿಂಸಾಚಾರಕ್ಕೆ ಬಲಿಯಾದವರ ಕುಟುಂಬಗಳನ್ನು ಭೇಟಿ ಮಾಡಲು ತೆರಳಿದ್ದ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ಎಂದು ಹೇಳಲಾದ ಗುಂಪು ಕಲ್ಲು ಮತ್ತು ಮೊಟ್ಟೆಗಳಿಂದ ಭೀಕರ ದಾಳಿ ನಡೆಸಿತ್ತು. ಚೋರ್ ಚೋರ್ ಎಂಬ ಘೋಷಣೆಗಳ ನಡುವೆ ಭದ್ರತಾ ಸಿಬ್ಬಂದಿ ಹೆಲ್ಮೆಟ್ ತೊಡಿಸಿ ಅಭಿಷೇಕ್ ಅವರನ್ನು ಕೂದಲೆಳೆ ಅಂತರದಲ್ಲಿ ಪಾರು ಮಾಡಿದ್ದರು. ಈ ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ಅಭಿಷೇಕ್ ಅವರಿಗೆ 3ಡಿ ಸಿಟಿಸ್ಕ್ಯಾನ್, ಅಲ್ಟ್ರಾಸೊನೋಗ್ರಫಿ ಮತ್ತು ಹೃದಯಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಆದರೆ ಈ ಹಂತದಲ್ಲಿ ಉಪ ಪೊಲೀಸ್ ಆಯುಕ್ತರು ಮತ್ತು ಬಿಜೆಪಿ ಮುಖಂಡರು ಆಸ್ಪತ್ರೆಗೆ ಬೆದರಿಕೆ ಕರೆಗಳನ್ನು ಮಾಡಿ, ಅವರನ್ನು ತಕ್ಷಣವೇ ಡಿಸ್ಚಾರ್ಜ್ ಮಾಡುವಂತೆ ಒತ್ತಡ ಹೇರಿದ್ದಾರೆ ಎಂದು ಮಮತಾ ವಿವರಿಸಿದ್ದಾರೆ. ಒಂದು ವೇಳೆ ಅಭಿಷೇಕ್ ಬ್ಯಾನರ್ಜಿ ಅವರ ಪ್ರಾಣಕ್ಕೆ ಏನಾದರೂ ಅಪಾಯ ಸಂಭವಿಸಿದರೆ ಅದಕ್ಕೆ ಸಂಬಂಧಪಟ್ಟ ಆಸ್ಪತ್ರೆ ಮತ್ತು ಬಿಜೆಪಿ ನಾಯಕರೇ ನೇರ ಹೊಣೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಅಭಿಷೇಕ್ ಬ್ಯಾನರ್ಜಿ ಅವರ ಮೇಲಿನ ದಾಳಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಂಡಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ರಾಹುಲ್ ಗಾಂಧಿ, ಈ ಸಂಕಷ್ಟದ ಸಮಯದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಈ ಘಟನೆಯು ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ.








