ರಾಷ್ಟ್ರ ರಾಜಧಾನಿ ದೆಹಲಿಯಿಂದ ಕರ್ನಾಟಕ ಬಿಜೆಪಿಗೆ ಸಂಬಂಧಿಸಿದಂತೆ ಅಚ್ಚರಿಯ ಮತ್ತು ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ಕೆಲವು ದಿನಗಳಿಂದ ತಣ್ಣಗಿದ್ದ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದ್ದು, ಹೈಕಮಾಂಡ್ ಮಟ್ಟದಲ್ಲಿ ದೊಡ್ಡ ಮಟ್ಟದ ಸಿದ್ಧತೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ. ಬಿಜೆಪಿ ರಾಷ್ಟ್ರೀಯ ನಾಯಕ ನಿತಿನ್ ನಬಿನ್ ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿ ಹೋಗಿರುವುದು ಈ ಬೆಳವಣಿಗೆಗೆ ವೇಗ ನೀಡಿದೆ.
ಜೂನ್ ಮಧ್ಯಭಾಗದಲ್ಲಿ ಕೇಂದ್ರ ಸಚಿವ ಸಂಪುಟಕ್ಕೆ ಭಾರಿ ಶಸ್ತ್ರಚಿಕಿತ್ಸೆ
ಮೂಲಗಳ ಪ್ರಕಾರ ಜೂನ್ 15 ರಿಂದ 18 ರ ನಡುವೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸಲಿವೆ. ಮುಂಬರುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೊಸ ತಂತ್ರ ರೂಪಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಸುಮಾರು 10 ರಿಂದ 12 ಸಚಿವರನ್ನು ಸಂಪುಟದಿಂದ ಕೈಬಿಟ್ಟು ಅವರಿಗೆ ಪಕ್ಷದ ಸಂಘಟನೆಯ ಜವಾಬ್ದಾರಿಯನ್ನು ಹೊರಿಸುವ ಸಾಧ್ಯತೆಯಿದೆ. ಇದರ ಭಾಗವಾಗಿಯೇ ಕರ್ನಾಟಕದ ಸಚಿವರೊಬ್ಬರನ್ನು ರಾಜ್ಯಕ್ಕೆ ವಾಪಸ್ ಕಳುಹಿಸಿ ಅವರಿಗೆ ಅಧ್ಯಕ್ಷ ಪಟ್ಟ ಕಟ್ಟುವ ಮಾತುಗಳು ಕೇಳಿಬರುತ್ತಿವೆ.
ರಾಜ್ಯದ ಮೂವರು ಸಚಿವರಲ್ಲಿ ಯಾರಿಗೆ ಕೊಕ್? ಯಾರಿಗೆ ಲಕ್?
ಸದ್ಯ ಕೇಂದ್ರ ಸಂಪುಟದಲ್ಲಿ ಕರ್ನಾಟಕದಿಂದ ಪ್ರಲ್ಹಾದ ಜೋಶಿ, ವಿ ಸೋಮಣ್ಣ ಮತ್ತು ಶೋಭಾ ಕರಂದ್ಲಾಜೆ ಅವರು ಬಿಜೆಪಿ ಪ್ರತಿನಿಧಿಗಳಾಗಿದ್ದಾರೆ. ಇವರಲ್ಲಿ ಒಬ್ಬರನ್ನು ಸಂಪುಟದಿಂದ ಕೈಬಿಟ್ಟು ರಾಜ್ಯ ಬಿಜೆಪಿಯ ಹೊಸ ಸಾರಥಿಯನ್ನಾಗಿ ನೇಮಿಸುವ ಸಾಧ್ಯತೆ ದಟ್ಟವಾಗಿದೆ. ಈ ರೇಸ್ ನಲ್ಲಿ ಅನುಭವಿ ನಾಯಕ ಪ್ರಲ್ಹಾದ ಜೋಶಿ ಮತ್ತು ಸಂಘಟನಾ ಚತುರ ವಿ ಸೋಮಣ್ಣ ಅವರ ಹೆಸರುಗಳು ಪ್ರಬಲವಾಗಿ ಕೇಳಿಬರುತ್ತಿವೆ. ಈ ಹಿಂದೆ ಕೂಡ ಈ ಇಬ್ಬರ ಹೆಸರುಗಳು ಅಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿದ್ದವು, ಈಗ ದೆಹಲಿ ಮಟ್ಟದ ಬದಲಾವಣೆಗಳ ಹಿನ್ನೆಲೆಯಲ್ಲಿ ಈ ಸುದ್ದಿಗೆ ಮತ್ತೆ ರೆಕ್ಕೆಪುಕ್ಕ ಬಂದಿದೆ.
ಇತ್ತೀಚೆಗೆ ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಅಧ್ಯಕ್ಷರ ನೇಮಕ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸಿರುವ ಬಿಜೆಪಿ ಹೈಕಮಾಂಡ್, ಈಗ ದಕ್ಷಿಣದ ಭದ್ರಕೋಟೆ ಕರ್ನಾಟಕದ ಮೇಲೆ ಕಣ್ಣಿಟ್ಟಿದೆ. ರಾಜ್ಯದಲ್ಲಿ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಮೈತ್ರಿ ಪಕ್ಷಗಳನ್ನು ಸಮರ್ಥವಾಗಿ ಒಟ್ಟುಗೂಡಿಸಿಕೊಂಡು ಹೋಗಲು ಪ್ರಬಲ ನಾಯಕತ್ವದ ಅಗತ್ಯವಿದೆ ಎಂದು ವರಿಷ್ಠರು ಭಾವಿಸಿದ್ದಾರೆ. ಜೂನ್ ತಿಂಗಳ ಅಂತ್ಯದೊಳಗೆ ಕರ್ನಾಟಕ ಬಿಜೆಪಿಗೆ ಹೊಸ ಬಾಸ್ ಸಿಗುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಸಚಿವರ ಪಟ್ಟಿಯಲ್ಲಿರುವ ಯಾರಿಗೆ ರಾಜ್ಯದ ಹೊಣೆಗಾರಿಕೆ ಸಿಗಲಿದೆ ಎಂಬುದು ಸದ್ಯದ ಕುತೂಹಲ.
ದೆಹಲಿಯಲ್ಲಿ ನಡೆಯಲಿರುವ ಕೇಂದ್ರ ಸಚಿವ ಸಂಪುಟದ ಬದಲಾವಣೆಯು ರಾಜ್ಯ ಬಿಜೆಪಿ ರಾಜಕಾರಣದ ದಿಕ್ಕನ್ನೇ ಬದಲಿಸುವ ಸಾಧ್ಯತೆಯಿದೆ. ಕೇಂದ್ರದಿಂದ ರಾಜ್ಯಕ್ಕೆ ಬರಲಿರುವ ಆ ಪ್ರಭಾವಿ ನಾಯಕ ಯಾರು ಎಂಬ ಪ್ರಶ್ನೆಗೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.








