ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಸಜ್ಜಾಗಿರುವ ಡಿ.ಕೆ. ಶಿವಕುಮಾರ್ ಅವರು ಇದೀಗ ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಮಾಹಿತಿ ರಾಷ್ಟ್ರ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ವಿವಿಧ ವರದಿಗಳ ಪ್ರಕಾರ, ಡಿಕೆ ಶಿವಕುಮಾರ್ ಸುಮಾರು ₹1,413 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು, ದೇಶದ ಇತರ ಎಲ್ಲಾ ಮುಖ್ಯಮಂತ್ರಿಗಳಿಗಿಂತ ಮೊದಲ ಸ್ಥಾನದಲ್ಲಿದ್ದಾರೆ.ಇದಕ್ಕೂ ಮೊದಲು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ₹931 ಕೋಟಿ ಆಸ್ತಿಯೊಂದಿಗೆ ಅಗ್ರಸ್ಥಾನದಲ್ಲಿದ್ದರು. ಇನ್ನು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಸುಮಾರು ₹648 ಕೋಟಿ ಆಸ್ತಿ ಮೌಲ್ಯದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ ಎನ್ನಲಾಗಿದೆ.
ಡಿಕೆ ಶಿವಕುಮಾರ್ ಅವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದ ಕ್ಷಣದಿಂದಲೇ ರಾಷ್ಟ್ರ ರಾಜಕೀಯದಲ್ಲಿ ಅವರ ಪ್ರಭಾವ, ಸಂಘಟನಾ ಸಾಮರ್ಥ್ಯ, ಆರ್ಥಿಕ ಬಲ ಹಾಗೂ ರಾಜಕೀಯ ಪಯಣದ ಬಗ್ಗೆ ವ್ಯಾಪಕ ಚರ್ಚೆಗಳು ಆರಂಭವಾಗಿವೆ. “ಟ್ರಬಲ್ ಶೂಟರ್” ಎಂದೇ ಗುರುತಿಸಿಕೊಂಡಿರುವ ಡಿಕೆಶಿ, ಇದೀಗ ಕರ್ನಾಟಕದ ರಾಜಕೀಯದ ಕೇಂದ್ರಬಿಂದುವಾಗಿ ಹೊರಹೊಮ್ಮಿದ್ದಾರೆ.
ರಾಜ್ಯದ ರಾಜಕೀಯ ಬೆಳವಣಿಗೆಗಳ ಜೊತೆಗೆ, ಡಿಕೆಶಿಯವರ ಆಸ್ತಿ, ವ್ಯಾಪಾರಿಕ ಹಿನ್ನೆಲೆ ಹಾಗೂ ರಾಜಕೀಯ ಪ್ರಭಾವದ ಕುರಿತ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲೂ ಟ್ರೆಂಡ್ ಆಗುತ್ತಿವೆ.








