ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪ್ರಮುಖ ಸಂಪರ್ಕ ಮಾರ್ಗವಾಗಿದ್ದ ಹಲ್ಕೆ-ಮುಪ್ಪಾನೆ ಲಾಂಚ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಲಿಂಗನಮಕ್ಕಿ ಡ್ಯಾಂನ ಶರಾವತಿ ಹಿನ್ನೀರಿನ ಮಟ್ಟ ಕನಿಷ್ಠ ಮಟ್ಟಕ್ಕೆ ಇಳಿದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.
ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ನೀರಿನ ಆಳ ಕಡಿಮೆಯಾಗಿರುವುದರಿಂದ ಹಿನ್ನೀರಿನಲ್ಲಿ ಇರುವ ಮರದ ಕಾಂಡಗಳು ಲಾಂಚ್ಗೆ ತಾಗುವ ಅಪಾಯ ಹೆಚ್ಚಾಗಿದೆ. ಜೊತೆಗೆ ವಾಹನಗಳನ್ನು ಇಳಿಸುವ ಸ್ಥಳದಲ್ಲಿ ಲಾಂಚ್ನ ಅಡಿಭಾಗ ನೆಲಕ್ಕೆ ತಾಗುತ್ತಿರುವ ಹಿನ್ನೆಲೆ ಸುರಕ್ಷತಾ ಸಮಸ್ಯೆಗಳು ಎದುರಾಗಿವೆ.
ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಈ ಮಾರ್ಗವು ಸಾಗರ ತಾಲೂಕಿನ ಕರೂರು ಮತ್ತು ಭಾರಂಗಿ ಹೋಬಳಿಗಳ ಜನರಿಗೆ ಅತ್ಯಂತ ಪ್ರಮುಖ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿತ್ತು. ಲಾಂಚ್ ಸೇವೆ ಸ್ಥಗಿತದಿಂದ ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರಿಗೆ ತೊಂದರೆ ಉಂಟಾಗುವ ಸಾಧ್ಯತೆಯಿದೆ.








