ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿರುವ ನೂತನ ಸಚಿವ ಸಂಪುಟ ರಚನೆ ಇದೀಗ ಅಂತಿಮ ಹಂತಕ್ಕೆ ತಲುಪಿದೆ. ಇಂದು ನೂತನ ಮುಖ್ಯಮಂತ್ರಿಯವರ ಜೊತೆ ಮೊದಲ ಹಂತದಲ್ಲಿ ಸುಮಾರು 10 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಸದ್ಯ ಚರ್ಚೆಯಲ್ಲಿರುವ ಸಂಭಾವ್ಯ ಪಟ್ಟಿಯಲ್ಲಿ ಹಿರಿಯ ನಾಯಕರು ಹಾಗೂ ವಿವಿಧ ಸಮುದಾಯಗಳ ಪ್ರತಿನಿಧಿಗಳಿಗೆ ಅವಕಾಶ ನೀಡುವ ಲೆಕ್ಕಾಚಾರ ನಡೆಯುತ್ತಿದೆ. ಮೊದಲ ಹಂತದ ಸಚಿವ ಸಂಪುಟದಲ್ಲಿ ಡಾ. ಜಿ. ಪರಮೇಶ್ವರ್, ಕೆ.ಜೆ. ಜಾರ್ಜ್, ಹೆಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್, ರಾಮಲಿಂಗ ರೆಡ್ಡಿ, ಪ್ರಿಯಾಂಕ್ ಖರ್ಗೆ, ಬೈರತಿ ಸುರೇಶ್, ಯು.ಟಿ. ಖಾದರ್, ಯತೀಂದ್ರ ಸಿದ್ದರಾಮಯ್ಯ ಹಾಗೂ ಕೆ.ಹೆಚ್. ಮುನಿಯಪ್ಪ ಅವರಿಗೆ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.
ಜಾತಿ ಸಮೀಕರಣ, ಪ್ರಾದೇಶಿಕ ಪ್ರತಿನಿಧಿತ್ವ ಹಾಗೂ ಪಕ್ಷದ ಒಳರಾಜಕೀಯ ಸಮತೋಲನವನ್ನು ಗಮನದಲ್ಲಿಟ್ಟುಕೊಂಡೇ ಹೈಕಮಾಂಡ್ ಸಚಿವರ ಆಯ್ಕೆ ಪ್ರಕ್ರಿಯೆ ನಡೆಸುತ್ತಿದೆ ಎನ್ನಲಾಗಿದೆ. ಆದರೆ, ಅಧಿಕೃತ ಪಟ್ಟಿ ಪ್ರಮಾಣ ವಚನಕ್ಕೂ ಕೆಲವೇ ಗಂಟೆಗಳ ಮುನ್ನ ಬಿಡುಗಡೆಯಾಗುವ ಸಾಧ್ಯತೆ ಇದೆ.








