ರಾಜ್ಯದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳನ್ನು ತರಲು ಸರ್ಕಾರ ಮುಂದಾಗಿದೆ. ಯೋಜನೆಯ ಪಾರದರ್ಶಕತೆ ಹೆಚ್ಚಿಸಲು ಹಾಗೂ ಅನರ್ಹ ಫಲಾನುಭವಿಗಳನ್ನು ಹೊರಗಿಡಲು ಹೊಸ ಅರ್ಜಿ ಮತ್ತು ದಾಖಲೆ ಪರಿಶೀಲನಾ ಪ್ರಕ್ರಿಯೆ ಜಾರಿಯಾಗುವ ಸಾಧ್ಯತೆ ಇದೆ.
ಹೊಸ ನಿಯಮಗಳ ಪ್ರಕಾರ, ಅರ್ಜಿಯಲ್ಲಿ ಮನೆಯ ಯಜಮಾನಿ ಯಾರು ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು. ಜೊತೆಗೆ ಫಲಾನುಭವಿಯ ಬ್ಯಾಂಕ್ ಖಾತೆ ವಿವರಗಳು, ಈ ಹಿಂದೆ ಮನೆಯ ಯಾವ ಸದಸ್ಯರ ಖಾತೆಗೆ ಗೃಹಲಕ್ಷ್ಮಿ ಹಣ ಜಮೆಯಾಗುತ್ತಿತ್ತು ಎಂಬ ಮಾಹಿತಿ, ಫಲಾನುಭವಿಯ ಜಾತಿ, ಪತಿಯ ಹೆಸರು ಸೇರಿದಂತೆ ಹಲವು ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ.
ಅಲ್ಲದೆ, ಅರ್ಜಿದಾರರು ಸಲ್ಲಿಸುವ ದಾಖಲೆಗಳ ನಕಲು ಪ್ರತಿಗಳನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಆದಾಯ ತೆರಿಗೆ (IT) ಪಾವತಿಸುತ್ತಿದ್ದಾರೆಯೇ, GST ನೋಂದಣಿ ಇದೆಯೇ, BPL ಅಥವಾ APL ಪಡಿತರ ಚೀಟಿ ಹೊಂದಿದ್ದಾರೆಯೇ ಎಂಬ ಮಾಹಿತಿಯನ್ನೂ ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ.
ಇತ್ತೀಚೆಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ಅನರ್ಹ ಫಲಾನುಭವಿಗಳು, ಮೃತರ ಹೆಸರಿನಲ್ಲಿ ಹಣ ಜಮೆಯಾಗಿರುವ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ.
ಅರ್ಹ ಮಹಿಳೆಯರಿಗೆ ಮಾತ್ರ ಮಾಸಿಕ ₹2,000 ನೆರವು ತಲುಪುವಂತೆ ಮಾಡಲು ಫಲಾನುಭವಿಗಳ ಮಾಹಿತಿಯನ್ನು ಮರುಪರಿಶೀಲಿಸುವ ಕಾರ್ಯ ಮುಂದುವರಿಯಲಿದೆ. ಸರ್ಕಾರದ ಅಧಿಕೃತ ಆದೇಶ ಮತ್ತು ಮಾರ್ಗಸೂಚಿ ಪ್ರಕಟವಾದ ಬಳಿಕ ಅರ್ಜಿ ಪ್ರಕ್ರಿಯೆಯ ಸಂಪೂರ್ಣ ವಿವರಗಳು ಸ್ಪಷ್ಟವಾಗಲಿವೆ.








