ಚೆನ್ನೈ: ಮುಂಬರುವ ನೀಟ್ ಯುಜಿ ಮರುಪರೀಕ್ಷೆಗೆ ಕೇಂದ್ರ ಶಿಕ್ಷಣ ಸಚಿವಾಲಯ ಹಾಗೂ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಕೈಗೊಂಡಿರುವ ಅತಿಯಾದ ಭದ್ರತಾ ಕ್ರಮಗಳ ವಿರುದ್ಧ ತಮಿಳುನಾಡಿನ ಪ್ರಭಾವಿ ನಾಯಕ ಕೆ ಅಣ್ಣಾಮಲೈ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರೀಕ್ಷಾ ಅಕ್ರಮ ತಡೆಯುವ ಹೆಸರಿನಲ್ಲಿ ಜಾರಿಗೆ ತಂದಿರುವ ಮಿಲಿಟರಿ ಮಾದರಿಯ ಕಠಿಣ ನಿಯಮಗಳು ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ಮಾನಸಿಕ ಒತ್ತಡ ಹೇರುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಇದು ಪರೀಕ್ಷೆಯೋ ಅಥವಾ ರಹಸ್ಯ ಮಿಲಿಟರಿ ಕಾರ್ಯಾಚರಣೆಯೋ
ಇತ್ತೀಚೆಗಷ್ಟೇ ಬಿಜೆಪಿಯಿಂದ ಹೊರಬಂದು ಹೊಸ ರಾಜಕೀಯ ಹಾದಿ ತುಳಿಯಲು ಸಿದ್ಧರಾಗಿರುವ ಅಣ್ಣಾಮಲೈ, ಕೇಂದ್ರ ಸರ್ಕಾರದ ನೀತಿಯನ್ನು ಮುಕ್ತವಾಗಿ ಟೀಕಿಸಿದ್ದಾರೆ. ಸಿಆರ್ಪಿಎಫ್ ಮತ್ತು ಸಿಐಎಸ್ಎಫ್ ಪಡೆಗಳ ಕಾವಲು, ಭಾರತೀಯ ವಾಯುಸೇನೆಯ ವಿಮಾನಗಳ ಬಳಕೆ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ 4 ಪದರಗಳ ಸಿಸಿಟಿವಿ ಕಣ್ಗಾವಲು ಕಂಡು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮುನ್ನ ನಡೆಸುವ ಬಯೋಮೆಟ್ರಿಕ್ ಮತ್ತು ಫೇಶಿಯಲ್ ರೆಕಗ್ನಿಷನ್ ತಪಾಸಣೆಗಳನ್ನು ಲೇವಡಿ ಮಾಡಿರುವ ಅವರು, ಇದು ಯಾವುದೋ ರಹಸ್ಯ ಮಿಲಿಟರಿ ಸಾಫ್ಟ್ವೇರ್ ಖರೀದಿಯ ವ್ಯವಸ್ಥೆಯಂತೆ ಕಾಣುತ್ತಿದೆ ಎಂದು ಟೀಕಿಸಿದ್ದಾರೆ.
ವಿದ್ಯಾರ್ಥಿಗಳ ನೆಮ್ಮದಿ ಕೆಡಿಸುವ ಭದ್ರತಾ ತಪಾಸಣೆ
ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಕ್ರಮಗಳನ್ನು ಕೈಗೊಳ್ಳುವುದು ಸ್ವಾಗತಾರ್ಹ. ಆದರೆ ಪರೀಕ್ಷಾ ಕೇಂದ್ರದ ಒಳಗೆ ಹೋಗುವ ಮುನ್ನ ನಡೆಸಲಾಗುವ ಸುದೀರ್ಘ ತಪಾಸಣೆಗಳು ಮತ್ತು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವ ಪ್ರಕ್ರಿಯೆಗಳು ವಿದ್ಯಾರ್ಥಿಗಳಲ್ಲಿ ಅನಗತ್ಯ ಆತಂಕವನ್ನು ಸೃಷ್ಟಿಸುತ್ತವೆ. ವಿದ್ಯಾರ್ಥಿ ಹಗಲಿರುಳು ಕಷ್ಟಪಟ್ಟು ಓದಿರುತ್ತಾನೆ, ಅಂತಹವನಿಗೆ ಈ ರೀತಿಯ ಕಟ್ಟುನಿಟ್ಟಿನ ವಾತಾವರಣವು ಪರೀಕ್ಷೆಯ ಬರೆಯುವ ಉತ್ಸಾಹವನ್ನೇ ಕುಂದಿಸುತ್ತದೆ ಎಂದು ಅಣ್ಣಾಮಲೈ ವಾದಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯಕ್ಕೆ ಕೊಡಲಿ ಪೇಟು
ಪರೀಕ್ಷಾ ಅವಧಿಯನ್ನು 180 ರಿಂದ 195 ನಿಮಿಷಗಳಿಗೆ ಹೆಚ್ಚಿಸಿರುವುದನ್ನು ಪ್ರಸ್ತಾಪಿಸಿದ ಅವರು, ಇದು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದಿದ್ದಾರೆ. ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲಿರುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡಬೇಕು ಎನ್ನುವುದು ರಾಷ್ಟ್ರೀಯ ಶಿಕ್ಷಣ ನೀತಿ 2020ರ ಮೂಲ ಉದ್ದೇಶವಾಗಿದೆ. ಆದರೆ ಈಗಿನ ಕಠಿಣ ಕ್ರಮಗಳು ಈ ನೀತಿಯ ಆಶಯಕ್ಕೇ ತದ್ವಿರುದ್ಧವಾಗಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತಾಂತ್ರಿಕ ದೋಷಗಳಿಂದ ಕಂಗಾಲಾದ ಅಭ್ಯರ್ಥಿಗಳು
ಪರೀಕ್ಷೆಯ ಭದ್ರತೆಯ ಬಗ್ಗೆ ಇಷ್ಟೊಂದು ಮುನ್ನೆಚ್ಚರಿಕೆ ವಹಿಸಿರುವ ಕೇಂದ್ರ ಸರ್ಕಾರ, ಪ್ರವೇಶ ಪತ್ರ ಡೌನ್ಲೋಡ್ ಮಾಡುವಾಗ ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ ಗಮನಹರಿಸಿಲ್ಲ ಎಂದು ಅಣ್ಣಾಮಲೈ ಆಪಾದಿಸಿದ್ದಾರೆ. ಪರೀಕ್ಷೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಇಂತಹ ಅಡಚಣೆಗಳು ವಿದ್ಯಾರ್ಥಿಗಳನ್ನು ಮತ್ತಷ್ಟು ಕಂಗಾಲಾಗಿಸುತ್ತಿವೆ. ಶಿಕ್ಷಣ ಸಚಿವಾಲಯವು ಹಳೆಯ ಸಮಸ್ಯೆಗಳನ್ನು ಮುಚ್ಚಿಟ್ಟು ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ.
ಜೂನ್ 21 ರಂದು ನಡೆಯಲಿರುವ ಈ ಮರುಪರೀಕ್ಷೆಯು ಈಗ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅಣ್ಣಾಮಲೈ ಅವರ ಈ ನೇರ ವಾಗ್ದಾಳಿ ಕೇಂದ್ರ ಸರ್ಕಾರಕ್ಕೆ ಮುಜುಗರ ತಂದಿಟ್ಟಿದ್ದು, ಪರೀಕ್ಷಾ ವ್ಯವಸ್ಥೆಯ ಸುಧಾರಣೆಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.








