ಬೆಂಗಳೂರು: ಕನ್ನಡ ಸಿನಿಮಾ ರಂಗದಿಂದ ವೃತ್ತಿ ಜೀವನ ಆರಂಭಿಸಿ, ಇಂದು ಇಡೀ ದಕ್ಷಿಣ ಭಾರತದಾದ್ಯಂತ ಮಿಂಚುತ್ತಿರುವ ಯುವ ನಟಿ ಶ್ರೀಲೀಲಾಗೆ ಮುಂಬೈನಲ್ಲಿ ಕಹಿ ಅನುಭವ ಉಂಟಾಗಿದೆ. ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯವರ ಪತ್ನಿ ಅಮೃತಾ ಫಡ್ನವೀಸ್ ಅವರು ಶ್ರೀಲೀಲಾ ಅವರೊಂದಿಗೆ ನಡೆದುಕೊಂಡ ರೀತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ.
ಜೂನ್ 22 ರಂದು ಮುಂಬೈನಲ್ಲಿ ನಡೆದ ವಿಶೇಷ ಯೋಗ ದಿನದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಶಾಹಿದ್ ಕಪೂರ್ ಮತ್ತು ನಟಿ ಶ್ರೀಲೀಲಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀಲೀಲಾ ಅವರು ಯೋಗದ ಮಹತ್ವದ ಬಗ್ಗೆ ಮಾತನಾಡಿ, ಸ್ವತಃ ಯೋಗಾಸನಗಳನ್ನು ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆದರೆ ಕಾರ್ಯಕ್ರಮದ ಅಂತ್ಯದಲ್ಲಿ ನಡೆದ ಫೋಟೋ ಸೆಷನ್ ವೇಳೆ ಅಹಿತಕರ ಘಟನೆಯೊಂದು ಸಂಭವಿಸಿದೆ.
ವೇದಿಕೆಯ ಮೇಲೆ ಅಮೃತಾ ಫಡ್ನವೀಸ್, ಅವರ ಮಗಳು ಮತ್ತು ಶ್ರೀಲೀಲಾ ಮೂವರೂ ಮಾಧ್ಯಮದವರಿಗೆ ಜಂಟಿಯಾಗಿ ಫೋಟೋ ಪೋಸ್ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಕೆಲವು ಮಾಧ್ಯಮ ಪ್ರತಿನಿಧಿಗಳು ಕೇವಲ ಅಮೃತಾ ಫಡ್ನವೀಸ್ ಮತ್ತು ಅವರ ಮಗಳ ಫೋಟೋ ಮಾತ್ರ ತೆಗೆಯಲು ಬಯಸಿದರು. ಆಗ ಅಮೃತಾ ಅವರು ಪಕ್ಕದಲ್ಲೇ ನಿಂತಿದ್ದ ಶ್ರೀಲೀಲಾ ಅವರಿಗೆ ವಿನಮ್ರವಾಗಿ ವಿನಂತಿಸುವ ಬದಲಿಗೆ, ಅತ್ಯಂತ ಅಸಭ್ಯವಾಗಿ ಕೈ ಸನ್ನೆಯ ಮೂಲಕ ಪಕ್ಕಕ್ಕೆ ಸರಿಯುವಂತೆ ಸೂಚಿಸಿದರು.
ಶ್ರೀಲೀಲಾ ಅವರನ್ನು ಒಬ್ಬ ಸ್ಟಾರ್ ನಟಿ ಎನ್ನುವ ಗೌರವ ನೀಡದಿದ್ದರೂ ಕನಿಷ್ಠ ಸೌಜನ್ಯವನ್ನೂ ತೋರದೆ, ಆಕಡೆ ಹೋಗಮ್ಮ ಎನ್ನುವಂತೆ ಅಮೃತಾ ಫಡ್ನವೀಸ್ ಮಾಡಿದ ಸನ್ನೆ ಈಗ ನೆಟ್ಟಿಗರ ಕಣ್ಣು ಕೆಂಪಾಗಿಸಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಶ್ರೀಲೀಲಾ ಅಭಿಮಾನಿಗಳು ಮತ್ತು ಸಿನಿಮಾ ಪ್ರೇಮಿಗಳು ಮುಖ್ಯಮಂತ್ರಿ ಪತ್ನಿಯ ವಿರುದ್ಧ ಹರಿಹಾಯುತ್ತಿದ್ದಾರೆ. ಅಧಿಕಾರದ ಮದ ಮತ್ತು ಅಹಂಕಾರದಿಂದ ಇಷ್ಟು ದೊಡ್ಡ ನಟಿಗೆ ಅವಮಾನ ಮಾಡುವುದು ಸರಿಯಲ್ಲ. ದಕ್ಷಿಣ ಭಾರತದ ನಟಿಯರನ್ನು ಬಾಲಿವುಡ್ ಮತ್ತು ಉತ್ತರ ಭಾರತದ ಗಣ್ಯರು ಕಾಣುವ ರೀತಿ ಇದೇನಾ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ.
ಒಟ್ಟಾರೆಯಾಗಿ, ಯೋಗದಂತಹ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀಲೀಲಾಗೆ ಎದುರಾದ ಈ ಮುಜುಗರದ ಸನ್ನಿವೇಶ ಈಗ ಸಿನಿಮಾ ಮತ್ತು ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿದೆ. ಅಮೃತಾ ಫಡ್ನವೀಸ್ ಅವರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.







