ನೀಟ್ 2026 ಮರುಪರೀಕ್ಷೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಟೆಲಿಗ್ರಾಮ್ ಮೇಲೆ ವಿಧಿಸಲಾಗಿದ್ದ ತಾತ್ಕಾಲಿಕ ನಿಷೇಧವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.
ಆದರೆ, ಆ್ಯಪ್‌ನ ಮೆಸೇಜ್-ಎಡಿಟಿಂಗ್ ಸೌಲಭ್ಯದ ಮೇಲಿನ ನಿರ್ಬಂಧವನ್ನು ಜೂನ್ 30ರವರೆಗೆ ಮುಂದುವರಿಸಲು ಸರ್ಕಾರ ಆದೇಶಿಸಿದೆ. ಪರೀಕ್ಷಾ ಅಕ್ರಮಗಳು ಹಾಗೂ ನಕಲಿ ಪ್ರಶ್ನೆಪತ್ರಿಕೆಗಳ ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಸದ್ಯ ಪ್ಲೇ ಸ್ಟೋರ್ ಹಾಗೂ ಆ್ಯಪಲ್ ಸ್ಟೋರ್ ಗಳಲ್ಲಿ ಟೆಲಿಗ್ರಾಮ್ ಸಂಪೂರ್ಣವಾಗಿ ಲಭ್ಯವಾಗದಿದ್ದರೂ, ದೇಶದ ವಿವಿಧ ಇಂಟರ್ನೆಟ್ ಸೇವಾ ಪೂರೈಕೆದಾರರು (ISP) ಹಂತಹಂತವಾಗಿ ನಿರ್ಬಂಧ ತೆರವುಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ.
ಇದರಿಂದ ಮುಂದಿನ ಕೆಲವು ದಿನಗಳಲ್ಲಿ ದೇಶದ ಬಳಕೆದಾರರಿಗೆ ಟೆಲಿಗ್ರಾಮ್ ಸೇವೆ ಪೂರ್ಣ ಪ್ರಮಾಣದಲ್ಲಿ ಪುನಃ ಲಭ್ಯವಾಗುವ ನಿರೀಕ್ಷೆಯಿದೆ.
ನೀಟ್ ಮರುಪರೀಕ್ಷೆಯ ಸಂದರ್ಭದಲ್ಲಿ ನಕಲಿ ಪ್ರಶ್ನೆಪತ್ರಿಕೆಗಳು ಮತ್ತು ತಪ್ಪು ಮಾಹಿತಿಯ ಹರಡುವಿಕೆ ಕುರಿತ ಆತಂಕಗಳ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಗಳನ್ನು ಕೈಗೊಂಡಿದ್ದು, ಪರಿಸ್ಥಿತಿಯ ಮೇಲೆ ನಿಗಾ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.







