ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಗೆ ಈಗ ದೊಡ್ಡ ಮಟ್ಟದ ಪರಿಷ್ಕರಣೆ ಎದುರಾಗಿದೆ. ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳ ಬೆನ್ನಲ್ಲೇ ಈಗ ಆಹಾರ ಇಲಾಖೆಯಲ್ಲೂ ಕ್ರಾಂತಿಕಾರಿ ಬದಲಾವಣೆಗೆ ಸರ್ಕಾರ ಮುಂದಾಗಿದ್ದು, ಸುಮಾರು 14 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಲು ಸಿದ್ಧತೆ ನಡೆಸಿದೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾಹಿತಿ ನೀಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ, ಅನ್ನಭಾಗ್ಯ ಯೋಜನೆಯ ಸೌಲಭ್ಯಗಳು ಕೇವಲ ಅರ್ಹ ಬಡವರಿಗೆ ಮಾತ್ರ ತಲುಪಬೇಕು ಎನ್ನುವುದು ಸರ್ಕಾರದ ಸ್ಪಷ್ಟ ಉದ್ದೇಶವಾಗಿದೆ. ಆದರೆ ಸದ್ಯದ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಸುಮಾರು 13 ರಿಂದ 14 ಲಕ್ಷ ಜನರು ಅನರ್ಹರಾಗಿದ್ದರೂ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಅಂತಹವರನ್ನು ಪತ್ತೆ ಹಚ್ಚಿ ಪಟ್ಟಿಯಿಂದ ಕೈಬಿಡುವ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ತಿಳಿಸಿದರು.
ಯಾರು ಆರ್ಥಿಕವಾಗಿ ಸದೃಢರಾಗಿದ್ದರೂ ಬಿಪಿಎಲ್ ಕಾರ್ಡ್ ಬಳಸುತ್ತಿದ್ದಾರೋ, ಅವರು ಸ್ವಯಂಪ್ರೇರಿತರಾಗಿ ತಮ್ಮ ಕಾರ್ಡ್ಗಳನ್ನು ಎಪಿಎಲ್ ವರ್ಗಕ್ಕೆ ಬದಲಿಸಿಕೊಳ್ಳಬೇಕು ಎಂದು ಸರ್ಕಾರ ಈಗಾಗಲೇ ತಿಳಿಸಿದೆ. ಈಗಾಗಲೇ ಈ ಬಗ್ಗೆ ವರದಿ ಸಿದ್ಧವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ. ಈ ಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುವುದು ತಪ್ಪುವುದಲ್ಲದೆ, ನೈಜ ಬಡವರಿಗೆ ಹೆಚ್ಚಿನ ನೆರವು ನೀಡಲು ಸಾಧ್ಯವಾಗುತ್ತದೆ ಎಂದು ಮುನಿಯಪ್ಪ ವಿವರಿಸಿದರು.
ರಾಜ್ಯ ಸರ್ಕಾರ ಈಗ ತನ್ನ ಯೋಜನೆಗಳ ಮತ್ತು ಆಡಳಿತ ವೈಖರಿಯ ಪುನರ್ ವಿಮರ್ಶೆಗೆ ಇಳಿದಿದ್ದು, ಇದು ಫಲಾನುಭವಿಗಳು ಮತ್ತು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಅರ್ಹರು ಆತಂಕಪಡುವ ಅಗತ್ಯವಿಲ್ಲದಿದ್ದರೂ, ಸುಳ್ಳು ಮಾಹಿತಿ ನೀಡಿ ಕಾರ್ಡ್ ಪಡೆದವರಿಗೆ ಮಾತ್ರ ಈ ಸರ್ಜರಿ ಬಿಸಿ ಮುಟ್ಟಿಸುವುದು ಖಚಿತವಾಗಿದೆ.







