ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿದ ಯುವ ನಾಯಕರನ್ನು ಮತ್ತೆ ಎಂದಿಗೂ ಪಕ್ಷದೊಳಗೆ ಸೇರಿಸಿಕೊಳ್ಳುವುದಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಕಠಿಣ ಸಂದೇಶ ರವಾನಿಸಿದ್ದಾರೆ.
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಈ ಕುರಿತು ವಿಸ್ತಾರವಾಗಿ ಮಾತನಾಡಿರುವ ಅವರು, ಪಕ್ಷಕ್ಕೆ ದ್ರೋಹ ಬಗೆದವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ 12 ವರ್ಷಗಳಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ, ಜಿತಿನ್ ಪ್ರಸಾದ ಮತ್ತು ಮಿಲಿಂದ್ ದಿಯೋರಾ ಅವರಂತಹ ಪ್ರಮುಖ ಯುವ ನಾಯಕರು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ. ಇವರು ಪಕ್ಷದಲ್ಲಿದ್ದಾಗ ಉನ್ನತ ಅಧಿಕಾರ ಮತ್ತು ಎಲ್ಲಾ ರೀತಿಯ ಸೌಲಭ್ಯಗಳನ್ನು ಅನುಭವಿಸಿದರು. ಆದರೆ ಪಕ್ಷಕ್ಕೆ ಇವರ ಅವಶ್ಯಕತೆ ಇದ್ದ ಸಮಯದಲ್ಲಿ ಸಿದ್ಧಾಂತವನ್ನು ಗಾಳಿಗೆ ತೂರಿ ಬಿಜೆಪಿ ಸೇರಿದರು. ಇಂತಹವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದು ಕಾಂಗ್ರೆಸ್ ಪಾಲಿಗೆ ನಾಚಿಕೆಗೇಡಿನ ಸಂಗತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಕುರಿತು ಹೆಮ್ಮೆಯಿಂದ ಮಾತನಾಡಿದ ಜೈರಾಮ್ ರಮೇಶ್, ಕಾಂಗ್ರೆಸ್ ಕಳೆದ ಒಂದು ದಶಕದಿಂದ ಕೇಂದ್ರದಲ್ಲಿ ಅಧಿಕಾರದಲ್ಲಿಲ್ಲದಿದ್ದರೂ ಸಹ, ಇಂದಿಗೂ ಪಕ್ಷದಲ್ಲಿ ಉಳಿದಿರುವವರು ಕೇವಲ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿರುವವರು ಮಾತ್ರ. ಇಂತಹ ನಿಷ್ಠಾವಂತ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಬಿಟ್ಟು, ಅಧಿಕಾರ ಲಾಲಸೆಯಿಂದ ಪಕ್ಷ ಬಿಟ್ಟು ಹೋದವರನ್ನು ಮರಳಿ ಕರೆತರುವುದು ಸರಿಯಲ್ಲ ಎಂಬುದು ನನ್ನ ವೈಯಕ್ತಿಕ ನಿಲುವು ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತೀಯ ರಾಜಕಾರಣದಲ್ಲಿ ಏನು ಬೇಕಾದರೂ ಸಂಭವಿಸಬಹುದು ಎಂಬ ಅರಿವಿದ್ದರೂ, ಪಕ್ಷಾಂತರಿಗಳ ವಿಷಯದಲ್ಲಿ ಯಾವುದೇ ಮೃದು ಧೋರಣೆ ತೋರುವುದು ಪಕ್ಷದ ಅಸ್ತಿತ್ವಕ್ಕೆ ಮಾರಕ ಎಂಬುದು ಅವರ ಅಭಿಪ್ರಾಯವಾಗಿದೆ. ಜೈರಾಮ್ ರಮೇಶ್ ಅವರ ಈ ಖಡಕ್ ಹೇಳಿಕೆಯು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪಕ್ಷ ಬಿಡಲು ಯೋಚಿಸುತ್ತಿರುವವರಿಗೆ ಮತ್ತು ಮರಳಿ ಬರಲು ಕಾಯುತ್ತಿರುವವರಿಗೆ ಪ್ರಬಲ ಎಚ್ಚರಿಕೆ ನೀಡಿದಂತಿದೆ.








