ಬಿಡದಿ ಉಪನಗರ ಯೋಜನೆಯ ವಿಚಾರದಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತೆ ಸಂಚಲನ ಮೂಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಎರಡನೇ ಬಾರಿಗೆ ಸುದೀರ್ಘ ಪತ್ರ ಬರೆದಿದ್ದಾರೆ. ಮೊದಲ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ಈ ಬಾರಿಯಾದರೂ ಸಕಾರಾತ್ಮಕವಾಗಿ ಸ್ಪಂದಿಸಿ ಎಂದು ಮನವಿ ಮಾಡಿದ್ದಾರೆ.
ಮುಖ್ಯವಾಗಿ ಜೂನ್ 27 ರಂದು ತಾವು ಬೈರಮಂಗಲ ಗ್ರಾಮಕ್ಕೆ ಭೇಟಿ ನೀಡುತ್ತಿರುವುದಾಗಿ ತಿಳಿಸಿರುವ ಕುಮಾರಸ್ವಾಮಿ, ಈ ಸಂದರ್ಭದಲ್ಲಿ ನೀವು ಕೂಡ ಬನ್ನಿ ಎಂದು ಡಿ.ಕೆ. ಶಿವಕುಮಾರ್ ಅವರಿಗೆ ಬಹಿರಂಗ ಆಹ್ವಾನ ನೀಡಿದ್ದಾರೆ. ಈ ಯೋಜನೆಯಿಂದ ಸಂಕಷ್ಟಕ್ಕೆ ಸಿಲುಕುವ ರೈತರು, ಕೃಷಿ ಕಾರ್ಮಿಕರು, ಹೈನುಗಾರಿಕೆಯಲ್ಲಿ ತೊಡಗಿರುವ ಮಹಿಳೆಯರು ಹಾಗೂ ಸಣ್ಣ ಉದ್ಯಮಿಗಳ ಅಹವಾಲುಗಳನ್ನು ನೇರವಾಗಿ ಕೇಳೋಣ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಜೂನ್ 22 ರಂದು ನಾನು ಬರೆದ ಪತ್ರಕ್ಕೆ ನಿಮ್ಮಿಂದ ಇನ್ನೂ ಯಾವುದೇ ಉತ್ತರ ಬಂದಿಲ್ಲ. ಈ ಎರಡನೇ ಪತ್ರಕ್ಕಾದರೂ ನೀವು ಸ್ಪಂದಿಸುತ್ತೀರಿ ಎಂಬ ವಿಶ್ವಾಸ ನನಗಿದೆ. ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯಿಂದ ಬಾಧಿತರಾಗುವ ರೈತರು ಮತ್ತು ಗ್ರಾಮಸ್ಥರ ನೋವುಗಳನ್ನು ಆಲಿಸಲು ನಾನು ಬೈರಮಂಗಲಕ್ಕೆ ತೆರಳುತ್ತಿದ್ದೇನೆ. ನೀವು ಕೂಡ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಅಲ್ಲಿಗೆ ಬಂದರೆ ಜನರ ಸಂಕಷ್ಟಗಳನ್ನು ಸ್ಥಳದಲ್ಲೇ ಆಲಿಸಿ ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸಲು ಸಾಧ್ಯವಾಗುತ್ತದೆ ಎಂದು ಕುಮಾರಸ್ವಾಮಿ ಪತ್ರದಲ್ಲಿ ವಿವರಿಸಿದ್ದಾರೆ.
ಕೇವಲ ಅಭಿವೃದ್ಧಿ ಹೆಸರಿನಲ್ಲಿ ಜನರ ಬದುಕನ್ನು ಬೀದಿಗೆ ತಳ್ಳಬಾರದು ಎಂಬುದು ಕುಮಾರಸ್ವಾಮಿ ಅವರ ವಾದವಾಗಿದೆ. ರೈತರ ಭೂಮಿ ಮತ್ತು ಗ್ರಾಮೀಣ ಜನರ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ಯೋಜನೆಯನ್ನು ರೂಪಿಸಲು ಇಬ್ಬರೂ ಪ್ರಭಾವಿ ನಾಯಕರು ಮುಖಾಮುಖಿಯಾಗಿ ಚರ್ಚಿಸುವುದು ಸೂಕ್ತ ಎಂಬುದು ಅವರ ಅಭಿಪ್ರಾಯ ಒಟ್ಟಾರೆ ಈ ಪತ್ರದ ಮೂಲಕ ಬಿಡದಿ ಟೌನ್ಶಿಪ್ ವಿಚಾರದಲ್ಲಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ಹೊಸ ಸವಾಲು ಎಸೆದಿದ್ದಾರೆ. ಈಗ ಚೆಂಡು ಡಿ.ಕೆ. ಶಿವಕುಮಾರ್ ಅವರ ಅಂಗಳದಲ್ಲಿದ್ದು, ಅವರು ಈ ಆಹ್ವಾನಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.








