ಬೆಂಗಳೂರು: ರಾಷ್ಟ್ರೀಯ ಭದ್ರತೆ ಮತ್ತು ದೇಶದ ಹಿತಾಸಕ್ತಿಯ ವಿಷಯ ಬಂದಾಗ ರಾಜ್ಯ ಸರ್ಕಾರವು ಯಾವಾಗಲೂ ಕೇಂದ್ರದ ಒಕ್ಕೂಟ ಸರ್ಕಾರದ ಪರವಾಗಿ ಇರುತ್ತದೆ. ಯಾವುದೇ ಕಾರಣಕ್ಕೂ ಕರ್ನಾಟಕವನ್ನು ದೇಶದ್ರೋಹಿಗಳ ಸ್ಲೀಪರ್ ಸೆಲ್ ಆಗಲು ಬಿಡುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಆಗಿ ತಿಳಿಸಿದ್ದಾರೆ.
ಅಯೋಧ್ಯೆ ಸ್ಫೋಟದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದ ದಾವಣಗೆರೆಯ ಯುವಕನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಮಾಹಿತಿ ಬಂದ ತಕ್ಷಣ ಪೊಲೀಸರು ಆತನನ್ನು ವಶಕ್ಕೆ ಪಡೆದು ವಾಟ್ಸ್‌ಆಪ್ ಚಾಟ್‌ಗಳನ್ನು ಪರಿಶೀಲಿಸಿದ್ದಾರೆ. ಈ ಪ್ರಕರಣವು ರಾಜ್ಯದ ವ್ಯಾಪ್ತಿ ಮೀರಿರುವುದರಿಂದ ಎನ್‌ಐಎ ತನಿಖೆ ನಡೆಸುತ್ತಿದೆ. ಕೇಂದ್ರ ತನಿಖಾ ಸಂಸ್ಥೆಯ ನಿರ್ದೇಶನದಂತೆ ರಾಜ್ಯ ಸರ್ಕಾರವು ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ವಿವರಿಸಿದರು.
ಇತ್ತೀಚಿನ ದಿನಗಳಲ್ಲಿ ಬಂಧನಕ್ಕೊಳಗಾಗುತ್ತಿರುವವರು ಮೂಲತಃ ಕರ್ನಾಟಕದವರಲ್ಲ. ನಮ್ಮ ರಾಜ್ಯದಲ್ಲಿ ಉದ್ಯೋಗಾವಕಾಶಗಳು ಹೆಚ್ಚಿವೆ ಎಂಬ ಕಾರಣಕ್ಕೆ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಿಂದ ಇಲ್ಲಿಗೆ ಬಂದು ನೆಲೆಸುತ್ತಿದ್ದಾರೆ. ಇಂತಹವರು ಇಲ್ಲಿ ಉದ್ಯೋಗ ಮಾಡುತ್ತಲೇ ಇಂತಹ ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂಬ ಸುಳಿವು ಸಿಗುವುದು ಕಷ್ಟಕರವಾಗಿದೆ. ಆದರೂ ಪೊಲೀಸರು ಇಂತಹ ವ್ಯಕ್ತಿಗಳ ಮೇಲೆ ನಿಗಾ ಇಟ್ಟಿದ್ದಾರೆ ಎಂದು ಅವರು ಹೇಳಿದರು.
ಇದೇ ವೇಳೆ ಪ್ರವಾಸಿ ತಾಣಗಳಲ್ಲಿ ನಡೆಯುತ್ತಿರುವ ಅವಘಡಗಳ ಬಗ್ಗೆ ಮಾತನಾಡಿದ ಸಚಿವರು, ಪ್ರವಾಸಿಗರು ಸೆಲ್ಫಿ ಮತ್ತು ರೀಲ್ಸ್ ಹೆಸರಿನಲ್ಲಿ ಪ್ರಾಣದ ಹಂಗು ತೊರೆದು ಹುಚ್ಚಾಟವಾಡುವುದು ಸರಿಯಲ್ಲ. ನಾನು 2017ರಲ್ಲಿ ಪ್ರವಾಸೋದ್ಯಮ ಸಚಿವನಿದ್ದಾಗಲೇ ಮುತ್ತತ್ತಿಯಂತಹ ಅಪಾಯಕಾರಿ ಸ್ಥಳಗಳಲ್ಲಿ ಇಂತಹ ಕೃತ್ಯಗಳನ್ನು ತಡೆಯಲು ಮಾರ್ಗಸೂಚಿ ಹೊರಡಿಸಿದ್ದೆ. ಪ್ರತಿಯೊಂದು ವಿಚಾರಕ್ಕೂ ಸರ್ಕಾರವನ್ನು ದೂಷಿಸುವುದು ಬಿಟ್ಟು ಸಾರ್ವಜನಿಕರೂ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಕಿವಿಮಾತು ಹೇಳಿದರು.







