ಮೈಸೂರು: ಮುಖ್ಯಮಂತ್ರಿ ಸ್ಥಾನ ಎಂಬುದು ಶಾಶ್ವತವಲ್ಲ, ಅದು ಬಂದು ಹೋಗುವಂತದ್ದು. ಆದರೆ ಜನರ ಹೃದಯದಲ್ಲಿ ಪಡೆಯುವ ಸ್ಥಾನ ಎಂದಿಗೂ ಅಳಿಯದ ಶಾಶ್ವತ ಆಸ್ತಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅತ್ಯಂತ ಭಾವನಾತ್ಮಕವಾಗಿ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ. ರಾಜ್ಯದ ಆಡಳಿತ ಚುಕ್ಕಾಣಿ ಬಿಟ್ಟ ನಂತರ ಮೊದಲ ಬಾರಿಗೆ ತಮ್ಮ ತವರು ಜಿಲ್ಲೆಯಾದ ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಿಕ್ಕ ಅಭೂತಪೂರ್ವ ಸ್ವಾಗತ ಕಂಡು ಸಿದ್ದರಾಮಯ್ಯ ಅಭಿಮಾನದಿಂದ ಪೋಸ್ಟ್ ಮಾಡಿದ್ದಾರೆ.
ಜನರ ಪ್ರೀತಿ ಕಂಡು ಮೂಕವಿಸ್ಮಿತರಾದ ಸಿದ್ದರಾಮಯ್ಯ
ಕೇರಳದಲ್ಲಿ ಕೆಲ ದಿನಗಳ ವಿಶ್ರಾಂತಿಯ ನಂತರ ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ರಾಜಾತಿಥ್ಯದ ಸ್ವಾಗತ ಕೋರಿದರು. ಈ ಭವ್ಯ ಸ್ವಾಗತದ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡಿರುವ ಅವರು, ಅಧಿಕಾರ ಎನ್ನುವುದು ಕೇವಲ ಜನರ ಸೇವೆ ಮಾಡಲು ಸಿಗುವ ಒಂದು ಅವಕಾಶವಷ್ಟೇ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರವೂ ಜನರು ನನ್ನ ಮೇಲೆ ತೋರುತ್ತಿರುವ ಪ್ರೀತಿ ಮತ್ತು ವಿಶ್ವಾಸವನ್ನು ನೋಡಿದರೆ, ಅಧಿಕಾರದಲ್ಲಿದ್ದಾಗ ನಾನು ಮಾಡಿದ ಜನಸೇವೆ ಸಾರ್ಥಕವಾಯಿತು ಎಂಬ ಭಾವನೆ ಮೂಡುತ್ತಿದೆ ಎಂದು ಬರೆದುಕೊಂಡಿದ್ದಾರೆ.
ನನ್ನನ್ನು ಅಲ್ಲಿಂದ ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ
ರಾಜಕೀಯ ವಿರೋಧಿಗಳಿಗೆ ಟಾಂಗ್ ನೀಡುವ ರೀತಿಯಲ್ಲಿ ಮಾತನಾಡಿರುವ ಅವರು, ಮುಖ್ಯಮಂತ್ರಿಯ ಸಿಂಹಾಸನ ನಶ್ವರ, ಆದರೆ ಜನತೆಯ ಹೃದಯ ಸಿಂಹಾಸನ ಶಾಶ್ವತ. ಅಲ್ಲಿ ಒಮ್ಮೆ ಕುಳಿತ ಮೇಲೆ ನನ್ನನ್ನು ಯಾರೂ ಕೆಳಗಿಳಿಸಲು ಸಾಧ್ಯವಿಲ್ಲ. ಇದು ನನ್ನ ಮತ್ತು ನನ್ನನ್ನು ನಂಬುವ ಜನರ ನಡುವಿನ ಶಾಶ್ವತ ಒಪ್ಪಂದ. ಅಧಿಕಾರ ಮತ್ತು ಸಂಪತ್ತು ಸಮಯಕ್ಕೆ ತಕ್ಕಂತೆ ಬದಲಾಗಬಹುದು ಅಥವಾ ಕಳೆದುಹೋಗಬಹುದು, ಆದರೆ ಜನರ ಪ್ರೀತಿ ನಿರಂತರವಾದುದು. ನನ್ನ ಸಾರ್ವಜನಿಕ ಜೀವನದಲ್ಲಿ ನಾನು ಸಂಪಾದಿಸಿದ ಅತಿ ದೊಡ್ಡ ಆಸ್ತಿ ಎಂದರೆ ಈ ದೊಡ್ಡ ಜನಸಮೂಹ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಮೈಸೂರಿನಲ್ಲಿ ಜನಸಾಗರದ ಅದ್ಧೂರಿ ಮೆರವಣಿಗೆ
ಸಿದ್ದರಾಮಯ್ಯ ಮೈಸೂರಿಗೆ ಆಗಮಿಸುತ್ತಿದ್ದಂತೆ ಇಡೀ ನಗರವೇ ಸಂಭ್ರಮದಲ್ಲಿ ಮುಳುಗಿತ್ತು. ಹೈವೆ ಸರ್ಕಲ್ ಬಳಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಅವರಿಗೆ ಬೃಹತ್ ಸೇಬಿನ ಹಾರ ಹಾಕಿ ಬರಮಾಡಿಕೊಂಡರು. ಪೂರ್ಣಕುಂಭ ಹೊತ್ತ ಮಹಿಳೆಯರು, ಡೊಳ್ಳು ಕುಣಿತ ಮತ್ತು ವೀರಗಾಸೆ ಕಲೆಗಳ ಮೂಲಕ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ತೆರೆದ ವಾಹನದಲ್ಲಿ ಸಿದ್ದರಾಮಯ್ಯ ಅವರ ಜೊತೆ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಕೂಡ ಇದ್ದರು. ಈ ಸಂಭ್ರಮದ ವಾತಾವರಣ ಸಿದ್ದರಾಮಯ್ಯ ಅವರ ಜನಪ್ರಿಯತೆ ಅಧಿಕಾರ ಹೋದ ಮೇಲೂ ಕುಗ್ಗಿಲ್ಲ ಎಂಬುದಕ್ಕೆ ಸಾಕ್ಷಿಯಾಗಿತ್ತು.








