ಚಿಕ್ಕಬಳ್ಳಾಪುರ: ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಕಿಡಿಗೇಡಿಗಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ಹೊಸ ತಿರುವು ಪಡೆದಿದೆ. ಶಾಸಕರು ಸಂಕಷ್ಟದಲ್ಲಿದ್ದಾಗ ಮತ್ತು ಅವರ ವಿರುದ್ಧ ಗಲಾಟೆ ನಡೆಯುತ್ತಿದ್ದಾಗ ವೇದಿಕೆಯಲ್ಲಿದ್ದ ಸ್ವಪಕ್ಷೀಯರೇ ಆದ ಕಾಂಗ್ರೆಸ್ ಮುಖಂಡರು ಮೌನಕ್ಕೆ ಶರಣಾಗಿದ್ದು, ಅಂತರ ಕಾಯ್ದುಕೊಂಡಿರುವುದು ಈಗ ಚರ್ಚೆಗೆ ಕಾರಣವಾಗಿದೆ.
ವೇದಿಕೆಯಲ್ಲಿದ್ದರೂ ತುಟಿ ಬಿಚ್ಚದ ಕೈ ನಾಯಕರು
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕರು, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ ಪ್ರಾಧಿಕಾರಗಳ ಪ್ರಮುಖರು ವೇದಿಕೆಯಲ್ಲಿ ಆಸೀನರಾಗಿದ್ದರು. ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಪ್ರತಿಭಟನೆ ಮತ್ತು ಗದ್ದಲ ಜೋರಾದಾಗ ಈ ಯಾವೊಬ್ಬ ನಾಯಕರೂ ಶಾಸಕರ ಪರವಾಗಿ ನಿಲ್ಲಲಿಲ್ಲ ಅಥವಾ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಲಿಲ್ಲ. ಬಹುತೇಕ ನಾಯಕರು ಈ ಇಡೀ ಪ್ರಸಂಗದಿಂದ ದೂರವುಳಿದು ಸುಮ್ಮನೆ ಕುಳಿತಿದ್ದರು.
ವೇದಿಕೆಯಿಂದ ಕಾಲ್ಕಿತ್ತ ಅಧ್ಯಕ್ಷರು
ಸಭಾಂಗಣದಲ್ಲಿ ಗದ್ದಲ ಮತ್ತು ಕಿರುಚಾಟ ಹೆಚ್ಚಾಗುತ್ತಿದ್ದಂತೆ ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಕೆಲ ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ ಮುಖಂಡರು ವೇದಿಕೆಯಿಂದಲೇ ನಿರ್ಗಮಿಸಿದರು. ಬೆರಳೆಣಿಕೆಯಷ್ಟು ಮಂದಿ ಕಾರ್ಯಕರ್ತರು ಮಾತ್ರ ಪ್ರದೀಪ್ ಈಶ್ವರ್ ಪರ ಘೋಷಣೆ ಕೂಗಿದರಾದರೂ, ಹಿರಿಯ ಮುಖಂಡರ ಮೌನ ಶಾಸಕರಿಗೆ ಮುಜುಗರ ತಂದಿತು.
ಗೈರಾದ ಬೆಂಬಲದ ದನಿ
ವೇದಿಕೆಯಲ್ಲಿ ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ, ಮಾರುಕಟ್ಟೆ ನಿಗಮದ ಅಧ್ಯಕ್ಷ ಡಾ. ಬಿ.ಸಿ. ಮುದ್ದು ಗಂಗಾಧರ್, ಬೀಜ ನಿಗಮದ ಅಧ್ಯಕ್ಷ ಆಂಜಿನಪ್ಪ, ಕೈಮಗ್ಗ ಮಹಾ ಮಂಡಳಿಯ ಬಿ.ಜೆ. ಗಣೇಶ್ ಸೇರಿದಂತೆ ಜಿಲ್ಲೆಯ ಪ್ರಮುಖ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು. ಇಷ್ಟೊಂದು ಸಂಖ್ಯೆಯಲ್ಲಿ ಪಕ್ಷದ ಪದಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇದ್ದರೂ, ಶಾಸಕ ಪ್ರದೀಪ್ ಈಶ್ವರ್ ಅವರನ್ನು ಸಮರ್ಥಿಸಿಕೊಳ್ಳಲು ಯಾರೂ ಮುಂದಾಗದಿರುವುದು ಕಾಂಗ್ರೆಸ್ ಪಾಳಯದಲ್ಲಿನ ಆಂತರಿಕ ಭಿನ್ನಾಭಿಪ್ರಾಯವನ್ನು ಎತ್ತಿ ತೋರಿಸುತ್ತಿದೆ.








