ಪಾಕಿಸ್ತಾನದ ಅಧಿಕಾರಿಗಳೊಂದಿಗೆ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಈಗ ಕಾನೂನು ಸಂಕಷ್ಟ ಎದುರಾಗಿದೆ. ಈ ಸಂಬಂಧ ಬಿಜೆಪಿ ಚುನಾವಣಾ ಉಸ್ತುವಾರಿ ಮತ್ತು ಆರ್ ಎಸ್ ಎಸ್ ಮುಖಂಡ ರಾಮ್ ಮಾಧವ್ ಅವರು ಹರಿಪ್ರಸಾದ್ ಅವರಿಗೆ ಲೀಗಲ್ ನೋಟಿಸ್ ನೀಡಿದ್ದಾರೆ. ತಮ್ಮ ಘನತೆ ಮತ್ತು ಖ್ಯಾತಿಗೆ ಕಳಂಕ ತರುವ ಉದ್ದೇಶದಿಂದ ಇಂತಹ ಸುಳ್ಳು ಹೇಳಿಕೆ ನೀಡಲಾಗಿದೆ ಎಂದು ರಾಮ್ ಮಾಧವ್ ಆಕ್ರೋಶ ವ್ಯಕ್ತಪಡಿಸಿದ್ದು, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 356ರ ಅಡಿಯಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಹರಿಪ್ರಸಾದ್ ಅವರು ತಮ್ಮ ಹೇಳಿಕೆಗೆ ಕೂಡಲೇ ಕ್ಷಮೆಯಾಚಿಸಬೇಕು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಬಿ ಕೆ ಹರಿಪ್ರಸಾದ್, ರಾಮ್ ಮಾಧವ್ ಅವರ ವಿರುದ್ಧ ಅತ್ಯಂತ ಗಂಭೀರವಾದ ಆರೋಪಗಳನ್ನು ಮಾಡಿದ್ದರು. ಕೊಲಂಬೋ ಮತ್ತು ಲಂಡನ್ ನ ಹಿಲ್ಟನ್ ಹೋಟೆಲ್ ನಲ್ಲಿ ರಾಮ್ ಮಾಧವ್ ಅವರು ಪಾಕಿಸ್ತಾನದ ಐಎಸ್ಐ ಮಾಜಿ ಮೇಜರ್ ಜನರಲ್ ಜೊತೆಗೆ ಒಟ್ಟು ನಾಲ್ಕು ಬಾರಿ ರಹಸ್ಯ ಸಭೆಗಳನ್ನು ನಡೆಸಿದ್ದಾರೆ ಎಂದು ಹರಿಪ್ರಸಾದ್ ದೂರಿದ್ದರು. ಈ ಸಭೆಗಳಲ್ಲಿ ಯಾವ ವಿಷಯಗಳ ಬಗ್ಗೆ ಚರ್ಚೆಯಾಗಿದೆ ಎಂಬುದನ್ನು ರಾಮ್ ಮಾಧವ್ ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದ್ದರು.
ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಸೂಚನೆಯ ಮೇರೆಗೆ ಪಾಕ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ ಎಂದು ಹರಿಪ್ರಸಾದ್ ಆರೋಪಿಸಿದ್ದರು. ಆಪರೇಷನ್ ಸಿಂಧೂರ್ ನಡೆದ ಕೆಲವೇ ತಿಂಗಳುಗಳಲ್ಲಿ ರಾಮ್ ಮಾಧವ್ ವಿದೇಶಕ್ಕೆ ಹಾರಿ ಇಂತಹ ಸಭೆಗಳನ್ನು ನಡೆಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂಬುದು ಹರಿಪ್ರಸಾದ್ ಅವರ ವಾದವಾಗಿತ್ತು.
ಅಧಿಕಾರದ ಪ್ರಶ್ನೆ ಎತ್ತಿದ್ದ ಹರಿಪ್ರಸಾದ್
ಸಭೆಯ ಕುರಿತು ಪ್ರಶ್ನಿಸಿದ್ದ ಹರಿಪ್ರಸಾದ್, ರಾಮ್ ಮಾಧವ್ ಅವರು ಸರ್ಕಾರದ ಯಾವುದೇ ಅಧಿಕೃತ ಹುದ್ದೆಯಲ್ಲಿ ಇಲ್ಲದಿದ್ದರೂ ಸಭೆ ನಡೆಸಲು ಅಧಿಕಾರ ನೀಡಿದವರು ಯಾರು ಎಂದು ಪ್ರಶ್ನಿಸಿದ್ದರು. ರಾಮ್ ಮಾಧವ್ ಅವರು ಸಚಿವರೂ ಅಲ್ಲ, ಸಂಸದರೂ ಅಲ್ಲ ಅಥವಾ ಶಾಸಕರೂ ಅಲ್ಲ, ಕೇವಲ ಒಬ್ಬ ಆರ್ ಎಸ್ ಎಸ್ ಪ್ರಚಾರಕ ಅಷ್ಟೆ. ಹೀಗಿರುವಾಗ ವಿದೇಶಾಂಗ ಸಚಿವಾಲಯ ಮಾಡಬೇಕಾದ ಕೆಲಸವನ್ನು ಇವರು ಯಾವ ಆಧಾರದ ಮೇಲೆ ಮಾಡುತ್ತಿದ್ದಾರೆ? ರಹಸ್ಯ ಸಭೆಗಳನ್ನು ನಡೆಸಲು ಇವರಿಗೆ ಪರವಾನಗಿ ಕೊಟ್ಟವರು ಯಾರು ಎಂದು ಹರಿಪ್ರಸಾದ್ ಬಿಜೆಪಿ ನಾಯಕರನ್ನು ನೇರವಾಗಿ ಪ್ರಶ್ನಿಸಿದ್ದರು.
ಈಗ ರಾಮ್ ಮಾಧವ್ ಅವರು ನೀಡಿದ ಲೀಗಲ್ ನೋಟಿಸ್ ನಿಂದಾಗಿ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ವಾಕ್ಸಮರ ಶುರುವಾಗಿದ್ದು, ಈ ಕಾನೂನು ಹೋರಾಟ ಯಾವ ಹಂತಕ್ಕೆ ತಲುಪಲಿದೆ ಎಂಬುದು ಕುತೂಹಲ ಮೂಡಿಸಿದೆ.






