ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ರಾಜ್ಯ ಸರ್ಕಾರದ ನಡುವಿನ ಸೈದ್ಧಾಂತಿಕ ಸಂಘರ್ಷ ಈಗ ಹೊಸ ತಿರುವು ಪಡೆದುಕೊಂಡಿದೆ. ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ಕಡ್ಡಾಯ ಎಂದು ಹೇಳಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ದೇಶಭಕ್ತರನ್ನು ಕಟ್ಟಿಹಾಕಿ ನುಸುಳುಕೋರರಿಗೆ ಮಣೆ ಹಾಕಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದೆ.
ಕಲಬುರಗಿಯಲ್ಲಿ ಮಾತನಾಡಿದ್ದ ಪ್ರಿಯಾಂಕ್ ಖರ್ಗೆ ಅವರು, ನಾನು ಗೃಹ ಸಚಿವನಾಗಿ ಇರುವವರೆಗೂ ರಾಜ್ಯದ ಯಾವುದೇ ಮೂಲೆಯಲ್ಲಿ ಆರ್‌ಎಸ್‌ಎಸ್ ಪಥಸಂಚಲನ ನಡೆಸಬೇಕಾದರೆ ಪೊಲೀಸ್ ಇಲಾಖೆಯ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಕಾನೂನು ಎಲ್ಲರಿಗೂ ಒಂದೇ ಎಂದು ಗುಡುಗಿದ್ದರು. ಈ ಹೇಳಿಕೆಯು ಬಿಜೆಪಿಯನ್ನು ಕೆರಳಿಸಿದ್ದು, ಗೃಹ ಸಚಿವರ ವಿರುದ್ಧ ಸರಣಿ ಪೋಸ್ಟ್ ಗಳ ಮೂಲಕ ಬಿಜೆಪಿ ವಾಗ್ದಾಳಿ ನಡೆಸಿದೆ.
ದೇಶದ ಭದ್ರತೆಗಾಗಿ ದುಡಿಯುವ ದೇಶಭಕ್ತ ಸಂಘಟನೆಯ ನಡಿಗೆಗೆ ಪರ್ಮಿಷನ್ ಕೇಳುವ ನೀವು, ರಾಜ್ಯದೊಳಗೆ ಅಕ್ರಮವಾಗಿ ನುಸುಳಿರುವ ಬಾಂಗ್ಲಾದೇಶಿಗಳಿಗೆ ಯಾವ ಕಾನೂನಿನ ಅಡಿಯಲ್ಲಿ ರೇಷನ್ ಕಾರ್ಡ್ ಮತ್ತು ಮತದಾನದ ಹಕ್ಕು ನೀಡುತ್ತಿದ್ದೀರಿ ಎಂದು ಬಿಜೆಪಿ ಪ್ರಶ್ನಿಸಿದೆ. ದೇಶಭಕ್ತರಿಗೆ ನಿರ್ಬಂಧದ ಬೇಲಿ ಹಾಕುವ ಕಾಂಗ್ರೆಸ್ ಸರ್ಕಾರ, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅಕ್ರಮ ನುಸುಳುಕೋರರಿಗೆ ಸ್ವಾಗತದ ರಂಗೋಲಿ ಹಾಕುತ್ತಿದೆ ಎಂದು ಬಿಜೆಪಿ ಟೀಕಿಸಿದೆ.
ರಾಜ್ಯದಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರಿದ್ದಾರೆ ಎಂಬ ಅಂದಾಜಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ಗೃಹ ಸಚಿವರಿಗಿದೆಯೇ ಎಂದು ಬಿಜೆಪಿ ಸವಾಲು ಹಾಕಿದೆ. ಆರ್‌ಎಸ್‌ಎಸ್ ನೋಂದಣಿ ವಿಚಾರದಿಂದ ಆರಂಭವಾದ ಈ ವಾಕ್ಸಮರ, ಈಗ ದೇಶಭಕ್ತಿ ಮತ್ತು ನುಸುಳುಕೋರರ ವಿಚಾರದವರೆಗೆ ಬಂದು ನಿಂತಿದ್ದು, ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಒಂದು ಕಡೆ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಸಂಘವನ್ನು ಎದುರಿಸಲು ಪ್ರಿಯಾಂಕ್ ಖರ್ಗೆ ಸಿದ್ಧರಾಗಿದ್ದರೆ, ಇನ್ನೊಂದೆಡೆ ಹಿಂದುತ್ವ ಮತ್ತು ರಾಷ್ಟ್ರೀಯತೆಯ ಅಸ್ತ್ರದ ಮೂಲಕ ಬಿಜೆಪಿ ಪ್ರತ್ಯುತ್ತರ ನೀಡುತ್ತಿದೆ.
https://x.com/BJP4Karnataka/status/2074512261746450708?ref_src=twsrc%5Etfw%7Ctwcamp%5Etweetembed%7Ctwterm%5E2074512261746450708%7Ctwgr%5E0c6267b2d0bb36d47c85fe7eff5389a889f3e3e5%7Ctwcon%5Es1_c10&ref_url=https%3A%2F%2Fapi-news.dailyhunt.in%2F








