ಆಧುನಿಕ ಫುಟ್‍ಬಾಲ್ ಜಗತ್ತಿನ ಮಹಾಗೋಡೆ. ತಂಡದ ನಂಬಿಕಸ್ಥ ಕಾವಲುಗಾರ. ಎದುರಾಳಿ ತಂಡಗಳ ರಣಬೇಟೆಗಾರರನ್ನೇ ತಡೆದು ನಿಲ್ಲಿಸುವ ಮಾಯಾವಿ. ಗೋಲು ಪೆಟ್ಟಿಗೆಯತ್ತ ಶರವೇಗದಲ್ಲಿ ನುಗ್ಗಿ ಬರುವ ಚೆಂಡನ್ನು ಕ್ಷಣ ಮಾತ್ರದಲ್ಲಿ ಹಿಡಿಯುವ ರಣಹದ್ದು. 8 ಅಡಿ ಎತ್ತರ, 24 ಅಡಿ ಉದ್ದವಿರುವÀ ಗೋಲು ಬಾಕ್ಸ್‍ನ ಸ್ಪೈ ಡರ್ ಮ್ಯಾನ್. ತಂಡದ ಡಿಫೆಂಡರ್‍ಗಳನ್ನು ಮುಂದಿಟ್ಟುಕೊಂಡು ಎದುರಾಳಿ ತಂಡಕ್ಕೆ ಚೆಕ್‍ಮೇಟ್ ನೀಡುವ ಗ್ರ್ಯಾಂಡ್ ಮಾಸ್ಟರ್. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವ ಮಹಾರಥಿ.
ಆತನ ಹೆಸರು – ಉನೈ ಸಿಮೋನ್ ಮೆಂಡಿಬಿಲ್..!🧤🇪🇸🛡️
ಆರು ಅಡಿ, ಮೂರು ಇಂಚಿನ ದೈತ್ಯ ಕಾಯ. ಸ್ಪೇನ್ ಫುಟ್‍ಬಾಲ್ ತಂಡದ ರಕ್ಷಾ ಕವಚ. ಫಿಫಾ ವಿಶ್ವಕಪ್ ಇತಿಹಾಸದ ಅದ್ಭುತ ಗೋಲು ಕೀಪರ್. ಐದು ವರ್ಷಗಳ ಹಿಂದೆ ಸ್ಪೇನ್ ಫುಟ್‍ಬಾಲ್ ಅಭಿಮಾನಿಗಳಿಗೆ ವಿಲನ್ ಆಗಿದ್ದ ಉನೈ ಸಿಮೋನ್ ಇದೀಗ ಫಿಫಾ ವಿಶ್ವಕಪ್‍ನ ಸೂಪರ್ ಹೀರೋ…!
ಹೌದು, ಫುಟ್‍ಬಾಲ್ ಪ್ರಪಂಚದಲ್ಲಿ ಗೋಲು ಹೊಡೆಯುವ ಆಟಗಾರರಿಗೆ ಇರುವಷ್ಟು ಬೆಲೆ, ಗೌರವ, ದುಡ್ಡು ಗೋಲು ಕೀಪರ್‍ಗಳಿಗೆ ಇರುವುದಿಲ್ಲ. ಇದು ಪರಮ ಸತ್ಯವೂ ಹೌದು. ಆದ್ರೆ ಈ ಕಟು ಸತ್ಯವನ್ನು ಸುಳ್ಳು ಮಾಡಿರುವ ಪ್ರತಿಭಾವಂತ ಗೋಲು ಕೀಪರ್ ಉನೈ ಸಿಮೋನ್.
ಸ್ಪೇನ್‍ನ ಹೆಮ್ಮೆಯ ಮಗ ಉನೈ ಸಿಮೋನ್..!🏆
ನಿಜ, ಉನೈ ಸಿಮೋನ್‍ಗೆ 2026ರ ಫಿಫಾ ವಿಶ್ವಕಪ್ ಎಂದೂ ಮರೆಯಲಾಗದ ಟೂರ್ನಿ. ಈಗಾಗಲೇ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಸ್ಪೇನ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೂ ಹೌದು. ಪ್ರಶಸ್ತಿ ಗೆಲ್ಲುವುದು ಸಿಮೋನ್‍ನ ಮೊದಲ ಗುರಿ. ಆದ್ರೆ ಟೂರ್ನಿಯ ಮಧ್ಯಂತರಲ್ಲೇ ಉನೈ ಸಿಮೋನ್ ಐತಿಹಾಸಿಕ ದಾಖಲೆ ಬರೆದಿದ್ದಾನೆ.
ಸದ್ಯ ಆಡಿರುವ ಐದು ಪಂದ್ಯಗಳಲ್ಲಿ ಸಿಮೋನ್ ಒಂದೇ ಒಂದು ಗೋಲನ್ನು ಬಿಟ್ಟುಕೊಟ್ಟಿಲ್ಲ. ಒಟ್ಟು 519 ನಿಮಿಷಗಳಲ್ಲಿ ಎದುರಾಳಿ ತಂಡಕ್ಕೆ ಗೋಲು ದಾಖಲಿಸುವ ಅವಕಾಶವನ್ನೇ ನೀಡಲಿಲ್ಲ. ಈ ಮೂಲಕ 36 ವರ್ಷಗಳ ಫಿಫಾ ದಾಖಲೆಯನ್ನು ಉನೈ ಸಿಮೋನ್ ತನ್ನ ಹೆಸರಿಗೆ ಬರೆದುಕೊಂಡಿದ್ದಾನೆ. ಈ ಹಿಂದೆ 1990ರಲ್ಲಿ ಇಟಲಿಯ ವಾಲ್ಟರ್ ಝೆಂಗಾ 517 ನಿಮಿಷಗಳಲ್ಲಿ ಗೋಲು ಬಿಟ್ಟು ಕೊಡದೆ ದಾಖಲೆ ನಿರ್ಮಿಸಿದ್ದ. ಇನ್ನು, 2022ರ ಕತಾರ್ ವಿಶ್ವಕಪ್‍ನಲ್ಲಿ ಜಪಾನ್ ವಿರುದ್ದ ಎರಡು ಗೋಲು ಬಿಟ್ಟುಕೊಟಿದ್ದ ಸಿಮೋನ್, ಮೊರಾಕ್ಕೋ ವಿರುದ್ದ ನಿಗದಿತ ಅವಧಿಯಲ್ಲಿ ಗೋಲು ಬಿಟ್ಟುಕೊಟ್ಟಿರಲಿಲ್ಲ. ಆದ್ರೆ ಪೆನಾಲ್ಟಿ ಶೂಟೌಟ್‍ನಲ್ಲಿ ಎಡವಿದ್ದ. ಆದ್ರೂ ನಿಗದಿತ ಅವಧಿಯ ಗೋಲು ಲೆಕ್ಕಚಾರದಲ್ಲಿ ಸಿಮೋನ್, ಸತತ ಆರು ಪಂದ್ಯಗಳಲ್ಲಿ ಗೋಲು ಬಿಟ್ಟುಕೊಡದ ದಾಖಲೆಗೆ ಪಾತ್ರನಾಗಿದ್ದಾನೆ. ಇದೆಲ್ಲವನ್ನು ಸೇರಿಸಿದ್ರೆ ಗೋಲು ಬಿಟ್ಟು ಕೊಡದ ಅವಧಿಯು ಬರೋಬ್ಬರಿ 678 ನಿಮಿಷಗಳು. ಇದು ಕೂಡ ಫಿಫಾ ವಿಶ್ವಕಪ್‍ನಲ್ಲಿ ಅಪರೂಪದ ದಾಖಲೆಯಾಗಿದೆ.
ಉನೈ ಸಿಮೋನ್ ಎಂಬ ಮಾಯಾವಿ ಗೋಲಿ ಯಾರು..?
ಸ್ಪೇನ್‍ನ ಬಾಸ್ಕ್ ಪ್ರದೇಶದ ವಿಟೋರಿಯಾ -ಗಾಸ್ಟೀಜ್ ಉನೈ ಸಿಮೋನ್‍ನ ಹುಟ್ಟೂರು. ಖ್ಯಾತ ಅಥ್ಲೆಟಿಕ್ ಕ್ಲಬ್‍ನ ಲೆಜಾಮಾ ಅಕಾಡೆಮಿಯ ಅದ್ಭುತ ಪ್ರತಿಭೆ. 40 ವರ್ಷಗಳ ಬಳಿಕ ಅಥ್ಲೆಟಿಕ್ ಕ್ಲಬ್‍ಗೆ ಪ್ರತಿಷ್ಠಿತ ಕೋಪಾ ಡೆಲ್ ರೇ ಪ್ರಶಸ್ತಿ ಮುಡಿಗೇರಿಸುವಲ್ಲಿ ಈತನ ಕೊಡುಗೆ ಅನನ್ಯವಾಗಿತ್ತು. ಹಾಗೇ ಸ್ಪೇನ್ ಫುಟ್‍ಬಾಲ್ ತಂಡದ ಭದ್ರಕೋಟೆಯೂ ಹೌದು. 2022ರ ನಂತರ ಸ್ಪೇನ್ ತಂಡದ ಪ್ರಮುಖ ಗೋಲು ಕೀಪರ್ ಆಗಿರುವ ಸಿಮೋನ್ ಹಲವಾರು ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದ. 2022-23ನೇ ಸಾಲಿನ ಯುಇಎಫ್‍ಎ ನೇಷನ್ ಲೀಗ್ ಹಾಗೂ 2024ರ ಯುಇಎಫ್‍ಎ ಯೂರೋ ಚಾಂಪಿಯನ್‍ಶಿಪ್‍ನ ಗೆಲುವಿನ ರೂವಾರಿಯಾಗಿದ್ದ.
ಸೀಮೋನ್ ಕೇವಲ ಗೋಲು ಕೀಪರ್ ಅಲ್ಲ.. ಚೆಸ್ ಮಾಸ್ಟರ್..! 🧠
ಅಂದ ಹಾಗೇ, ಉನೈ ಸಿಮೋನ್ ಕೇವಲ ಗೋಲ್ ಕೀಪರ್ ಮಾತ್ರವಲ್ಲ. ತಂಡದ ಚೆಸ್ ಮಾಸ್ಟರ್ ಕೂಡ. ಆರಡಿ ಮೂರು ಇಂಚಿನ ಎತ್ತರವೇ ಆತನಿಗೆ ಪ್ಲಸ್ ಪಾಯಿಂಟ್. ಜೊತೆಗೆ ವೇಗವಾಗ ಸ್ಪಂದಿಸುವ ಚುರುಕುತನ. ಕಾಲಿನಿಂದಲೇ ನಿಖರವಾದ ಪಾಸ್ ನೀಡುವ ಕಲೆ. ಗಾಲಿಯಲ್ಲಿ ತೇಲಾಡಿ ಚೆಂಡನ್ನು ಹಿಡಿಯುವ ಸಾಮಥ್ರ್ಯ. ಎದುರಾಳಿ ಆಟಗಾರರ ತಂತ್ರಗಳನ್ನು ಅರಿತುಕೊಳ್ಳುವ ಬುದ್ಧಿ. ಡಿಫೆಂಡರ್‍ಗಳ ಜೊತೆಗೆ ಉತ್ತಮ ಹೊಂದಾಣಿಕೆ. ಅದಕ್ಕಿಂತ ಹೆಚ್ಚಾಗಿ ಆತ್ಮವಿಶ್ವಾಸ, ಮಾನಸಿಕ ದೃಢತೆ ಹಾಗೂ ಒತ್ತಡದಲ್ಲೂ ಕೂಲ್ ಆಗಿಯೇ ಪರಿಸ್ಥಿತಿಯನ್ನು ನಿಭಾಯಿಸುವ ರೀತಿಯೇ ಉನೈ ಸಿಮೋನ್ ಗೋಲು ಕೀಪಿಂಗ್‍ನ ವಿಶೇಷತೆ.
ಒಂದು ಎಡವಟ್ಟಿನಿಂದ ಪಾಠ ಕಲಿತ ಉನೈ ಸಿಮೋನ್..! 🛡️
ಕೆಲವೊಂದು ಬಾರಿ ಎಷ್ಟೇ ಚೆನ್ನಾಗಿ ಅಡಿದ್ರೂ ಒಂದು ಸಣ್ಣ ಎಡವಟ್ಟು ಮಾರಕವಾಗಿ ಪರಿಣಮಿಸುತ್ತದೆ. ಉನೈ ಸಿಮೋನ್ ಬದುಕಿನಲ್ಲೂ ಅದೇ ರೀತಿಯ ಒಂದು ಘಟನೆ ನಡೆದಿತ್ತು. ಅದು 2021ರ ಯುಇಎಫ್‍ಎ ಯೂರೋ ಕಪ್‍ನ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯ. ಸ್ಪೇನ್ ಆಟಗಾರ ಪೆಡ್ರಿ, ಗೋಲು ಕೀಪರ್‍ನತ್ತ ಚೆಂಡನ್ನು ಪಾಸ್ ನೀಡಿದ್ದ. ಸುಲಭವಾಗಿ ಕೈಯಿಂದ ಹಿಡಿಯಬಹುದಾಗಿದ್ದ ಚೆಂಡನ್ನು ಸಿಮೋನ್ ತನ್ನ ಕಾಲಿನಿಂದ ನಿಯಂತ್ರಿಸಿ ಪಾಸ್ ನೀಡುವ ಯೋಚನೆಯಲ್ಲಿದ್ದ. ಆದ್ರೆ ಚೆಂಡಿನ ವೇಗ ಮತ್ತು ದಿಕ್ಕನ್ನು ಸರಿಯಾಗಿ ಅಂದಾಜಿಸಲು ವಿಫಲನಾಗಿದ್ದ. ಹೀಗಾಗಿ ಚೆಂಡು ಗೋಲು ಪೆಟ್ಟಿಗೆಯೊಳಗೆ ಸೇರಿಕೊಂಡಿತ್ತು. ಇದರಿಂದ ಕುಪಿತಗೊಂಡ ಅಭಿಮಾನಿಗಳು ಸಿಮೋನ್ ವಿರುದ್ದ ತಿರುಗಿ ಬಿದ್ದರು. ಅಲ್ಲದೆ ವಿಲನ್ ರೀತಿಯಲ್ಲೇ ಬಿಂಬಿಸಿದ್ರು. ಈ ಪಂದ್ಯದಲ್ಲಿ ಸ್ಪೇನ್ ಗೆದ್ರೂ ಸಿಮೋನ್ ಮೇಲಿನ ಸಿಟ್ಟು ಕಡಿಮೆಯಾಗಲಿಲ್ಲ. ಆದ್ರೆ ಸಿಮೋನ್ ತನ್ನ ಅದ್ಭುತದ ಆಟದಿಂದಲೇ ಎಲ್ಲದಕ್ಕೂ ಉತ್ತರ ನೀಡಿದ್ದ. ಒಂದು ಸಣ್ಣ ತಪ್ಪಿನ ಎಡವಟ್ಟು ಸಿಮೋನ್ ಬದುಕಿಗೆ ಒಳ್ಳೆಯ ಪಾಠ ಕಲಿಸಿತ್ತು.
ಒಟ್ಟಿನಲ್ಲಿ ಉನೈ ಸಿಮೋನ್ ಟೀಕೆಗಳಿಗೆ ಕುಗ್ಗಲಿಲ್ಲ. ಬದಲಾಗಿ ಟೀಕೆ, ಆರೋಪಗಳನ್ನೇ ಯಶಸ್ಸಿನ ಮೆಟ್ಟಿಲಾಗಿಸಿಕೊಂಡ. ಒಂದು ಸಣ್ಣ ತಪ್ಪು ಆತನ ವೃತ್ತಿ ಬದುಕನ್ನೇ ಸರ್ವನಾಶ ಮಾಡುತ್ತಿತ್ತು. ಆದ್ರೆ ಆತನ ಪ್ರತಿಭೆ, ಸಾಮಥ್ರ್ಯವನ್ನು ನಂಬಿದ್ದ ತಂಡ ಆತನ ಕೈಬಿಡಲಿಲ್ಲ. ಹೀಗಾಗಿಯೇ ಇವತ್ತು ಸ್ಪೇನ್ ಫುಟ್‍ಬಾಲ್ ತಂಡದ ಗೋಲು ಕೀಪರ್ ಆಗಿ ಅಭೂತಪೂರ್ವ ಸಾಧನೆ ಮಾಡಲು ಸಾಧ್ಯವಾಯ್ತು. ಕೆಲವೊಂದು ತಪ್ಪುಗಳ ಪಾಠ ಬದುಕಿನ ಚಿತ್ರಣವನ್ನೇ ಬದಲಾಯಿಸುತ್ತೆ ಅನ್ನೋದು ಸುಳ್ಳಲ್ಲ. ಫುಟ್‍ಬಾಲ್ ಅಂಗಣದಲ್ಲಿ ಸಾಲು ಸಾಲು ಗೋಲು ದಾಖಲಿಸಿ ಕೆಲವರು ಚರಿತ್ರೆ ಬರೆಯುತ್ತಾರೆ. ಮತ್ತೆ ಕೆಲವರು ಗೋಲು ತಡೆದು ಹೆಗ್ಗುರುತು ಮೂಡಿಸಿ ಇತಿಹಾಸದ ಪುಟ ಸೇರುತ್ತಾರೆ. ಇದು ಉನೈ ಸಿಮೋನ್ ಎಂಬ ಗೋಲಿಯ ಯಶೋಗಾಥೆ..!⚽🌟
ಸನತ್ ರೈ








