ಬೆಂಗಳೂರು: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳುತ್ತಾರೆಯೇ ಎಂಬ ಚರ್ಚೆಗಳಿಗೆ ಈಗ ಸ್ವತಃ ಕುಮಾರಸ್ವಾಮಿ ಅವರೇ ಸ್ಪಷ್ಟನೆ ನೀಡಿದ್ದಾರೆ. ರಾಜ್ಯ ರಾಜಕಾರಣಕ್ಕೆ ಮರಳುವ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಅವರು, ಈ ಮೂಲಕ ಕರ್ನಾಟಕದ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ರಾಜ್ಯಕ್ಕೆ ಬರ್ತೀನಿ, ಆದರೆ ಈಗಲೇ ಅಲ್ಲ
ರಾಜ್ಯ ರಾಜಕಾರಣಕ್ಕೆ ಮರಳುವ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ನಾನು ರಾಜ್ಯಕ್ಕೆ ವಾಪಸ್ ಬರುತ್ತೇನೆ ಅಂದ ಕೂಡಲೇ ಅದು ಈಗಲೇ ಎಂದು ಅರ್ಥವಲ್ಲ. ಸದ್ಯಕ್ಕೆ ನಾನು ಕೇಂದ್ರ ಸಚಿವನಾಗಿದ್ದೇನೆ ಮತ್ತು ಇನ್ನೂ ಮೂರು ವರ್ಷಗಳ ಕಾಲ ಸಂಸದನಾಗಿ ನನ್ನ ಅಧಿಕಾರಾವಧಿ ಬಾಕಿ ಇದೆ. ಹಾಗಾಗಿ ನಾಳೆಯೇ ಬರುತ್ತೇನೆ ಎಂದಲ್ಲ. ಕೇಂದ್ರದಲ್ಲಿ ನನಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಲೇ, ರಾಜ್ಯದಲ್ಲಿ ಪಕ್ಷ ಸಂಘಟನೆಯನ್ನೂ ಮಾಡುತ್ತೇನೆ. ಕೇಂದ್ರ ಮತ್ತು ರಾಜ್ಯ ಎರಡೂ ಕಡೆಗಳಲ್ಲಿ ನಾನು ಸಕ್ರಿಯವಾಗಿ ಕೆಲಸ ಮಾಡಲಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.
ಹಿರಿಯೂರು ಉಪ ಚುನಾವಣೆಗೆ ಜೆಡಿಎಸ್ ಸಜ್ಜು
ಹಿರಿಯೂರು ಕ್ಷೇತ್ರದ ಉಪ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ. ಈ ಬಗ್ಗೆ ಈಗಾಗಲೇ ಎನ್‌ಡಿಎ ಹೈಕಮಾಂಡ್‌ಗೆ ಮನವಿ ಮಾಡಿದ್ದೇನೆ. ಅಲ್ಲಿ ನಮ್ಮ ಪಕ್ಷದ ಇಚ್ಛೆಯಂತೆ ಸ್ಪರ್ಧೆ ಮಾಡುವ ಬಗ್ಗೆ ಶೀಘ್ರದಲ್ಲೇ ಅಂತಿಮ ತೀರ್ಮಾನ ಹೊರಬೀಳಲಿದೆ ಎಂದರು.
ಈಶ್ವರ್ ಖಂಡ್ರೆ ವಿರುದ್ಧ ವಾಗ್ದಾಳಿ
ಇದೇ ವೇಳೆ ಹೆಚ್‌ಎಂಟಿ ಭೂಮಿಗೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ವಿರುದ್ಧ ಕುಮಾರಸ್ವಾಮಿ ತೀವ್ರವಾಗಿ ಕಿಡಿಕಾರಿದರು. ಹೆಚ್‌ಎಂಟಿ ಪಕ್ಕದಲ್ಲೇ ಏರ್ ಫೋರ್ಸ್ ಇದೆ, ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ. ಹೆಚ್‌ಎಂಟಿ ಭೂಮಿಯನ್ನು ಮುಟ್ಟಲು ಯಾರಿಗೂ ಸಾಧ್ಯವಿಲ್ಲ, ಏಕೆಂದರೆ ಅದಕ್ಕೆ ಕೋರ್ಟ್ ಸ್ಟೇ ನೀಡಿದೆ. ಈಶ್ವರ್ ಖಂಡ್ರೆ ಅವರು ಅರಣ್ಯ ಸಚಿವರಾಗಿ ಎರಡು ವರ್ಷಗಳಿಂದ ಎಲ್ಲೆಲ್ಲಿ ಭೂಮಿ ಉಳಿಸಿದ್ದಾರೆ ಎಂಬುದನ್ನು ಮೊದಲು ಹೇಳಲಿ. ಕೇವಲ ಹೆಚ್‌ಎಂಟಿ ಮತ್ತು ಕುದುರೆಮುಖ ಬಗ್ಗೆಯೂ ಯಾಕೆ ಮಾತನಾಡುತ್ತಿದ್ದಾರೆ? ಬೇರೆಯವರಿಗೆ ಕೊಟ್ಟ ಜಮೀನನ್ನು ವಾಪಸ್ ಪಡೆಯುವ ಕೆಲಸವನ್ನು ಮೊದಲು ರಾಜ್ಯ ಸರ್ಕಾರ ಮಾಡಲಿ ಎಂದು ಸವಾಲು ಹಾಕಿದರು.
ಬೆಂಗಳೂರು ಅಭಿವೃದ್ಧಿ ಬಗ್ಗೆ ವ್ಯಂಗ್ಯ
ಬೆಂಗಳೂರು ಅಭಿವೃದ್ಧಿಗೆ 1.5 ಲಕ್ಷ ಕೋಟಿ ರೂಪಾಯಿ ನೀಡುತ್ತೇವೆ ಎಂಬ ಸರ್ಕಾರದ ಘೋಷಣೆಯನ್ನು ಕುಮಾರಸ್ವಾಮಿ ಲೇವಡಿ ಮಾಡಿದರು. ಸರ್ಕಾರದಲ್ಲಿ ಹಣ ಎಲ್ಲಿದೆ? ಯಾರ ತಲೆ ಮೇಲೆ ಇಷ್ಟೊಂದು ಸಾಲ ಹೊರಿಸುತ್ತೀರಿ? ಜನರ ಮೇಲೆ ಸಾಲದ ಹೊರೆ ಹಾಕಿ ಬೆಂಗಳೂರು ಉದ್ದಾರ ಮಾಡುತ್ತೀರಾ ಎಂದು ಪ್ರಶ್ನಿಸಿದರು. ಸರ್ಕಾರದ 15 ಲಕ್ಷ ಸಸಿ ನೆಡುವ ಗಿನ್ನೆಸ್ ದಾಖಲೆಯ ಪ್ರಯತ್ನದ ಬಗ್ಗೆ ಕುಹಕವಾಡಿದ ಅವರು, 15 ಲಕ್ಷ ಸಸಿ ನೆಟ್ಟು ಚೊಂಬಿನಲ್ಲಿ ನೀರು ಬಿಡುತ್ತಿದ್ದಾರೆ. ಗಿನ್ನೆಸ್ ದಾಖಲೆ ಮಾಡಲು ಇವರು ಭತ್ತ ನೆಡುವವರನ್ನು ಕರೆದುಕೊಂಡು ಬಂದಿದ್ದರೇನೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಟೆಂಡರ್ ವಿಚಾರದಲ್ಲಿ ನಿಗೂಢ ಮೌನ:
ಸಿದ್ದರಾಮಯ್ಯ ಕಾಲದ ಟೆಂಡರ್ ಕ್ಯಾನ್ಸಲ್ ಮಾಡಿ ಡಿ ಕೆ ಶಿವಕುಮಾರ್ ಮರು ಟೆಂಡರ್ ಮಾಡಿರುವ ವಿಚಾರದ ಬಗ್ಗೆ ಈಗಲೇ ಪ್ರತಿಕ್ರಿಯಿಸಲು ನಿರಾಕರಿಸಿದ ಕುಮಾರಸ್ವಾಮಿ, ಈಗ ನಾನು ಈ ಬಗ್ಗೆ ಏನೂ ಮಾತನಾಡಲ್ಲ. ಅದಕ್ಕೆ ಸರಿಯಾದ ಸಮಯ ಬರಲಿ, ಆಗ ಎಲ್ಲವನ್ನೂ ದಾಖಲೆ ಸಮೇತ ಬಿಚ್ಚಿಡುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು. ಒಟ್ಟಾರೆಯಾಗಿ ಕುಮಾರಸ್ವಾಮಿ ಅವರು ದೆಹಲಿಯಲ್ಲಿದ್ದರೂ ಕರ್ನಾಟಕದ ಪ್ರತಿ ಬೆಳವಣಿಗೆಯ ಮೇಲೆ ಕಣ್ಣಿಟ್ಟಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಪ್ರಭಾವಶಾಲಿಯಾಗುವ ಮುನ್ಸೂಚನೆ ನೀಡಿದ್ದಾರೆ.







