ಬೆಂಗಳೂರು: ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದು, ಬಿಜೆಪಿಯ ದೊಡ್ಡ ನಾಯಕರ ಮಕ್ಕಳು ಯಾರು ಕೂಡ ಆರ್‌ಎಸ್‌ಎಸ್‌ನಲ್ಲಿ ಪೂರ್ಣಕಾಲಿಕ ಪ್ರಚಾರಕರಾಗಿ ಕೆಲಸ ಮಾಡುತ್ತಿಲ್ಲ ಎಂದು ನೇರ ಸವಾಲು ಹಾಕಿದ್ದಾರೆ.
ಧರ್ಮ ರಕ್ಷಣೆಯ ಹೆಸರಿನಲ್ಲಿ ಕೇವಲ ಬಡವರ ಮಕ್ಕಳನ್ನು ಮಾತ್ರ ಮುಂದೆ ತಳ್ಳಿ ಬಲಿಪಶು ಮಾಡಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಲೆ ಪ್ರಕರಣಗಳಲ್ಲಿ ಜೈಲು ಸೇರಿರುವ ಯುವಕರಿಗೆ ಸಂಘ ಪರಿವಾರದಿಂದ ಯಾವುದೇ ಸಹಾಯ ಸಿಗುತ್ತಿಲ್ಲ ಎಂಬ ಹಿಂದೂ ಸಂಘಟನೆಗಳ ಆರೋಪಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ನಾಯಕರ ಮಕ್ಕಳು ಎಲ್ಲಿದ್ದಾರೆ?
ಶಾಲೆ, ಗೋಶಾಲೆ ಮತ್ತು ಧರ್ಮ ರಕ್ಷಣೆಯ ಹೆಸರಿನಲ್ಲಿ ಬಿಜೆಪಿ ನಾಯಕರು ಬಡವರ ಮಕ್ಕಳನ್ನು ಕೋಮು ಗಲಭೆಗಳ ಮುಂಚೂಣಿಗೆ ತಳ್ಳುತ್ತಾರೆ. ಆದರೆ ಬಿಜೆಪಿಯ ಒಬ್ಬ ನಾಯಕನ ಮಗನೂ ಸಂಘದ ಪೂರ್ಣಾವಧಿ ಪ್ರಚಾರಕನಾಗಿಲ್ಲ. ವಿಜಯದಶಮಿಯಂದು ಕೇವಲ ಒಂದು ದಿನ ಗಣವೇಷ ಧರಿಸಿ ಫೋಟೋಗೆ ಫೋಸ್ ನೀಡುವುದರಿಂದ ಯಾರೂ ಪೂರ್ಣ ಪ್ರಚಾರಕರಾಗುವುದಿಲ್ಲ. ನಿಮ್ಮ ನಾಯಕರ ಮಕ್ಕಳು ಇಂತಹ ಗಲಭೆಗಳಲ್ಲಿ ಭಾಗಿಯಾಗುತ್ತಾರೆಯೇ ಅಥವಾ ಜೈಲಿಗೆ ಹೋಗುತ್ತಾರೆಯೇ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಕೋಮು ಗಲಭೆಗಳಲ್ಲಿ ಬಲಿಯಾಗುತ್ತಿರುವುದು ಸಾಮಾನ್ಯ ಯುವಕರು
ಪರೇಶ್ ಮೆಸ್ತಾ ಪ್ರಕರಣದ ಹೆಸರಿನಲ್ಲಿ ಭಾವನಾತ್ಮಕವಾಗಿ ಜನರನ್ನು ಕೆರಳಿಸಿ ಚುನಾವಣೆ ಗೆದ್ದವರು, ಆ ನಂತರ ಆ ಕುಟುಂಬವನ್ನು ಮರೆತೇ ಬಿಟ್ಟರು. ರಾಜ್ಯದಲ್ಲಿ ಕೋಮು ಗಲಭೆಗಳಿಗೆ ಸಿಲುಕಿ 22 ರಿಂದ 28 ವರ್ಷದ ಅನೇಕ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಇವರ ಕುಟುಂಬಗಳ ನೆರವಿಗೆ ಬಿಜೆಪಿ ಅಥವಾ ಸಂಘ ಪರಿವಾರದ ನಾಯಕರು ಬಂದಿಲ್ಲ. ದಲಿತರು ಮತ್ತು ಹಿಂದುಳಿದ ವರ್ಗದ ಯುವಕರನ್ನು ಕೇವಲ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಯುವಕರಿಗೆ ಕಿವಿಮಾತು
ಯುವಕರು ಇಂತಹ ಪ್ರಚೋದನೆಗಳಿಗೆ ಬಲಿಯಾಗಬಾರದು ಎಂದು ಕರೆ ನೀಡಿರುವ ಪ್ರಿಯಾಂಕ್ ಖರ್ಗೆ, ಕೋಮು ಗಲಭೆಗಳಿಗೆ ನಿಮ್ಮನ್ನು ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ. ಇವುಗಳಿಂದ ದೂರವಿದ್ದು ಉತ್ತಮ ಉದ್ಯೋಗ ಹುಡುಕಿ ನಿಮ್ಮ ಕುಟುಂಬಕ್ಕೆ ಆಸರೆಯಾಗಿ ನಿಲ್ಲಿ. ಆರ್‌ಎಸ್‌ಎಸ್ ಸಂಘಟನೆಯು ರೈತರ ಪರವಾಗಿ, ಬೆಲೆ ಏರಿಕೆ ವಿರುದ್ಧ ಅಥವಾ ನಿರುದ್ಯೋಗದಂತಹ ಜನಪರ ವಿಷಯಗಳ ಬಗ್ಗೆ ಯಾವಾಗಲಾದರೂ ಪ್ರತಿಭಟನೆ ನಡೆಸಿದೆಯೇ? ಇಂತಹ ವಿಷಯಗಳಲ್ಲಿ ಮೌನವಾಗಿರುವ ಅವರು ಕೇವಲ ಕೋಮು ಉದ್ವಿಗ್ನತೆ ಸೃಷ್ಟಿಸುವ ಕೆಲಸ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.
ತಮಗೆ ಬೆದರಿಕೆ ಹಾಕಿದ ಯುವಕನ ಉದಾಹರಣೆ ನೀಡಿದ ಸಚಿವರು, ನನಗೆ ಬೆದರಿಕೆ ಹಾಕಿದ್ದ ಯುವಕ ಜೈಲು ಸೇರಿದಾಗ ಆತನಿಗೆ ವಕೀಲರನ್ನು ಒದಗಿಸಲು ಕೂಡ ಸಂಘ ಪರಿವಾರದವರು ಬರಲಿಲ್ಲ. ಕೊನೆಗೆ ಆತನ ತಾಯಿ ಕಣ್ಣೀರು ಹಾಕುತ್ತಾ ನನಗೆ ಕರೆ ಮಾಡಿದಾಗ ನಾನೇ ಸಹಾಯ ಮಾಡಬೇಕಾಯಿತು. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯುವಕರ ಬದುಕು ಹಾಳು ಮಾಡುವ ಇವರ ಸತ್ಯವನ್ನು ಯುವ ಸಮೂಹ ಎಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತದೆಯೋ ಅಷ್ಟು ಒಳ್ಳೆಯದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.








