ಒಂದು ಕ್ಷಣ ಕಣ್ಣುಮುಚ್ಚಿ.. ಆಮೇಲೆ ಓದಿ ನೋಡಿ.. ಆಗ ನಿಮ್ಮಲ್ಲೂ ಮೂಡಬಹುದೊಂದು ಭಾವನೆ.. ಹೀಗೂ ಇದೆಯಾ ಅನ್ನೋ ಯೋಚನೆ..! 🚀🔥⚽
ಇದು ಒಂದು ಸಣ್ಣ ಹಳ್ಳಿಯ ಕೆಳ ಮಧ್ಯಮ ವರ್ಗದ ಸಾಮಾನ್ಯ ಬಾಲಕನ ಭವಿಷ್ಯದ ಆಲೋಚನೆ. ಗ್ರಾಮೀಣ ಸೊಗಡಿನ ಊರಿನಲ್ಲಿ ಬೆಳೆದ ಈ ಹುಡುಗನಿಗೆ ಫುಟ್‍ಬಾಲ್ ಆಟದ ಮೇಲೆ ಅದಮ್ಯ ಆಕರ್ಷಣೆ. ಧೂಳು ತುಂಬಿದ್ದ ಕವಲು ದಾರಿಯ ರಸ್ತೆಗಳಲ್ಲಿ ಚೆಂಡಿನ ಜೊತೆ ದಿನವೂ ಈತನ ಬದುಕಿನ ಆಲಾಪನೆ. ಸುಡುವ ಬಿಸಿಲು, ಸುರಿಯುವ ಮಳೆಯಲ್ಲೂ ಚೆಂಡಿನೊಂದಿಗೆ ನಡೆಯುತ್ತಿತ್ತು ಒಲವಿನ ಆರಾಧನೆ…!
ನಂತರ ಶುರುವಾಯ್ತು ಕನಸಿನ ಪ್ರೀತಿಯನ್ನು ಪಡೆಯುವ ನಿರಂತರ ಅನ್ವೇಷಣೆ. ಪ್ರತಿ ದಿನ 9 ಗಂಟೆಗಳ ಬಸ್ ಪ್ರಯಾಣದಲ್ಲಿ ತನ್ನ ನೆಚ್ಚಿನ ಸಂಗಾತಿಯ ಜೊತೆಗಿನ ಮೌನ ಸಂಭಾಷಣೆ. ಮೈದಾನದಲ್ಲಿ ಚೆಂಡಿನ ಜೊತೆ ಸರಸವಾಡುತ್ತಿದ್ದ ಇವನಿಗೆ ರೊನಾಲ್ಡೊ, ಜಿದಾನೆಯೇ ಪ್ರೇರಣೆ. ಮೈದಾನದಲ್ಲಿ ತರಬೇತುದಾರರ ಮಾರ್ಗದರ್ಶನಕ್ಕೆ ಈತನದ್ದು ಶಿಸ್ತಿನ ಸ್ಪಂದನೆ. ತಾನೂ ಗೋಲು ಗಳಿಸುವುದಲ್ಲದೆ, ಸಹ ಆಟಗಾರರಿಗೂ ಗೋಲು ದಾಖಲಿಸಲು ಕೈ- ಕಾಲಿನಲ್ಲೇ ನೀಡುತ್ತಿದ್ದ ಸನ್ನೆ. ಒಬ್ಬ ಅದ್ಭುತ ನಾಯಕನಾಗಿ ತಂಡ ಗೆಲುವಿಗಾಗಿ ಕೊಡುತ್ತಿದ್ದ ಖಡಕ್ ಸೂಚನೆ. ಬದುಕು ರೂಪಿಸಿದ್ದ ದೇಶ ಹಾಗೂ ಕ್ಲಬ್‍ಗಳಿಗೆ ಕಲ್ಮಶವಿಲ್ಲದ ಈತನ ನೈಜ ಆಟವೆಲ್ಲವೂ ಸಮರ್ಪಣೆ. ಯಶಸ್ಸಿನ ನಡುವೆಯೂ ತನ್ನ ಹುಟ್ಟೂರಿನ ಜನರ ಕಷ್ಟಗಳಿಗೆ ಮಿಡಿಯುತ್ತಿದೆ ಇವನ ಮಮತೆಯ ಭಾವ ಸಂವೇದನೆ. ಫುಟ್‍ಬಾಲ್ ಜಗತ್ತಿನ ಅತಿರಥ – ಮಹಾರಥರ ಜೊತೆ ಗುದ್ದಾಡಿ ಮಾಡಿಕೊಂಡಿದ್ದ ತನ್ನದೇ ಸಾಮ್ರಾಜ್ಯ ಸ್ಥಾಪನೆ..!
ಹಾದಲ್ವಾ..ನಿಮಗೂ ಅನ್ನಿಸಿರಬಹುದು.. ಒಬ್ಬ ಫುಟ್‍ಬಾಲ್ ಆಟಗಾರನ ಬಗ್ಗೆ ಇಷ್ಟೆಲ್ಲಾ ಬೇಕಾ ವರ್ಣನೆ..? ಹಾಗಂತ ಇದು ಈ ಆಟಗಾರನ ಬಗ್ಗೆ ವರ್ಣನೆಯೂ ಅಲ್ಲ.. ಒಬ್ಬ ಆಟಗಾರರನ್ನು ಸುಮ್ಮನೆ ಮೆಚ್ಚಿಸುವ ಬಣ್ಣ ಬಣ್ಣದ ಪದಗಳ ಬಣ್ಣನೆಯೂ ಅಲ್ಲ. ಒಬ್ಬ ಸಾಮಾನ್ಯ ಹುಡುಗನ ಬದುಕಿನ ಯಶೋಗಾಥೆಯನ್ನು ಹೂವಿನ ಮಾಲೆಯಂತೆ ಅಲಂಕರಿಸುವಾಗ ಸಿಕ್ಕ ಅಕ್ಷರಗಳ ಜೋಡಣೆ. ಯಶಸ್ಸಿನ ಎತ್ತರಕ್ಕೆ ಏರಿದ್ರೂ ತನ್ನ ಪ್ರೀತಿಯ ಆಟದ ಮೂಲಕ ತನ್ನೂರಿನ ಜನರ ಏಳಿಗೆಗಾಗಿ ಶ್ರಮಿಸುತ್ತಿರುವ ಒಬ್ಬ ಹೃದಯವಂತ ಆಟಗಾರನಿಗೆ ಒಳ ಮನಸ್ಸಿಂದ ಮೂಡಿ ಬಂದ ಪದಗಳ ಭಾವ ಸಂತರ್ಪಣೆ.
⚽ ಈತನ ಹೆಸರು… ಮಹಮ್ಮದ್ ಸಲಾಹ್ ಹಮೀದ್ ಮಹ್ರೂಸ್ ಘಾಲಿ..! ಈಜಿಪ್ಟ್ ಫುಟ್‍ಬಾಲ್ ತಂಡದ ನಾಯಕ..! 🇪🇬🔥
ಪ್ರಕೃತಿಯ ಸೊಬಗಿನಲ್ಲಿ ಚಿಗುರಿದ ಫುಟ್‍ಬಾಲ್ ಕನಸು..! 🌾⚡
ಈಜಿಪ್ಟ್ ನ ನಾಗ್ರಿಗ ಎಂಬ ಹುಟ್ಟ ಹಳ್ಳಿಯೇ ಮಹಮ್ಮದ್ ಸಲಾಹ್‍ನ ತವರೂರು. ನೈಲ್ ನದಿಯಿಂದ ಅಲ್ ಕಾಸೆದ್ ಕಾಲುವೆ ಮೂಲಕ ಹರಿಯುವ ನೀರು ನಾಗ್ರಿಗ ಹಳ್ಳಿಯ ಜನರ ಜೀವನಾಡಿ. ಫಲವತ್ತತೆಯ ಭೂಮಿಯ ಹಚ್ಚ ಹಸಿರಿನ ಒಡಲಿನಲ್ಲಿ ಹುಟ್ಟಿ ಬೆಳೆದ ಹುಡುಗ ಮೊಹಮ್ಮದ್ ಸಲಾಹ್‍ಗೆ ಫುಟ್‍ಬಾಲ್ ಆಟವೇ ಉಸಿರು. ತನ್ನೂರು ಹಸಿರಿನಿಂದ ಕಂಗೊಳಿಸುತ್ತಿದ್ರೂ ತನ್ನ ಬದುಕು ಮಾತ್ರ ಹಸಿರಾಗಿರಲಿಲ್ಲ. ಹಾಗಾಗಿ, ಪ್ರೀತಿಯ ಫುಟ್‍ಬಾಲ್ ಆಟದ ತರಬೇತಿಗೆ ಬೇಕಾಗುವಷ್ಟು ದುಡ್ಡು ಈತನ ಬಳಿ ಇರಲಿಲ್ಲ. ಕೆಳ ಮಧ್ಯಮ ವರ್ಗದ ಕುಟುಂಬದ ಸಲಾಹ್‍ಗೆ ಬಡತನವೇ ಶಾಪವಾಗಿ ಕಾಡುತ್ತಿತ್ತು. ಆದ್ರೂ ಸಲಾಹ್ ಹೆತ್ತವರು ಮಗನ ಫುಟ್‍ಬಾಲ್ ಪ್ರೀತಿಯನ್ನು ಕಿತ್ತುಕೊಳ್ಳಲಿಲ್ಲ. ಕಷ್ಟಪಟ್ಟು ಮಗನ ಫುಟ್‍ಬಾಲ್ ಪ್ರೀತಿಗೆ ಸರ್ವಸ್ವವನ್ನು ಧಾರೆ ಎರೆದಿದ್ರು. ಹಾಗಾಗಿಯೇ ಇಂದು ಮಹಮ್ಮದ್ ಸಲಾಹ್ ಎಂಬ ಹೆಸರು ಫುಟ್‍ಬಾಲ್ ಜಗತ್ತಿನಲ್ಲಿ ರಾರಾಜಿಸುತ್ತಿದೆ.
ಯುರೋಪ್ ಅಂಗಣಕ್ಕೆ ಎಂಟ್ರಿಯಾದ ಈಜಿಪ್ಟ್ ಚಿರತೆ..! 🏃♂️ / 🐆
ಫುಟ್‍ಬಾಲ್ ಆಟಗಾರನಾಗಬೇಕು ಎಂದು ಕನಸು ಕಾಣುತ್ತಿದ್ದ ಸಲಾಹ್, ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಕೈರೋ ನಗರದಲ್ಲಿರುವ ಎಲ್ ಮೊಕಾವ್ಲೂನ್ ಫುಟ್‍ಬಾಲ್ ಕ್ಲಬ್. ಆದ್ರೆ ತನ್ನೂರಿಂದ ಕೈರೋ ನಗರಕ್ಕೆ ಹೋಗಿಬರಲು 9 ಗಂಟೆಗಳ ಬಸ್ ಪ್ರಯಾಣ. ಆಯಾಸ, ಹಸಿವಿದ್ರೂ ಫುಟ್‍ಬಾಲ್ ಪ್ರೀತಿಗೋಸ್ಕರ ಎಲ್ಲವನ್ನೂ ಅರ್ಪಣೆ ಮಾಡಲು ಸಿದ್ಧನಿದ್ದ ಸಲಾಹ್, ಹಿಂತಿರುಗಿ ನೋಡುವ ಯೋಚನೆಯನ್ನೇ ಮಾಡಲಿಲ್ಲ. ಕಠಿಣ ತರಬೇತಿ, ಬದ್ಧತೆ, ಪರಿಶ್ರಮದಿಂದಲೇ ಫುಟ್‍ಬಾಲ್ ಆಟದ ಕೌಶಲ್ಯಗಳನ್ನು ಕರಗತ ಮಾಡಿಕೊಂಡಿದ್ದ. ಆದ್ರೆ 2012ರಲ್ಲಿ ಈಜಿಪ್ಟ್ ಲೀಗ್ ಪಂದ್ಯಾವಳಿಗಳು ಸ್ಥಗಿತಗೊಂಡಾಗ ಸಲಾಹ್‍ಗೆ ಆಸರೆಯಾಗಿದ್ದು ಸ್ವಿಜರ್‍ಲೆಂಡ್‍ನ ಬಾಸೆಲ್ ಕ್ಲಬ್. ಯುರೋಪಿಯನ್ ಲೀಗ್‍ನಲ್ಲಿ ಚಿರತೆಯಂತೆ ಓಡಾಡಿಕೊಂಡು ಆಟವಾಡುತ್ತಿದ್ದ ಸಲಾಹ್, ಇಂಗ್ಲೆಂಡ್‍ನ ಪ್ರತಿಷ್ಠಿತ ಚೆಲ್ಸಿಯಾ ಕ್ಲಬ್‍ನ ಕಣ್ಣಿಗೆ ಬಿದ್ದ. ಆದ್ರೆ ಚೆಲ್ಸಿಯಾ ಕ್ಲಬ್‍ನಲ್ಲಿ ಸಲಾಹ್‍ಗೆ ಸರಿಯಾದ ಅವಕಾಶಗಳು ಸಿಗಲಿಲ್ಲ. ಆದ್ರೂ ಸಲಾಹ್ ಎದೆಗುಂದಲಿಲ್ಲ. ಬಳಿಕ ಇಟಲಿಯ ಫಿಯೊರೆಂಟಿನಾ ಮತ್ತು ರೋಮಾ ಕ್ಲಬ್‍ಗಳ ಪರ ಅದ್ಭುತ ಆಟವಾಡಿ ತನ್ನ ಸಾಮಥ್ರ್ಯವನ್ನು ಏನು ಎಂಬುದನ್ನು ತೋರಿಸಿಕೊಟ್ಟಿದ್ದ.
ಬದುಕಿನ ಚಿತ್ರಣವನ್ನೇ ಬದಲಾಯಿಸಿದ ಲಿವರ್‌ಪೂಲ್ ಕ್ಲಬ್..!🔴🥅🏆
ಮಹಮ್ಮದ್ ಸಲಾಹ್‍ನ ನಿಜವಾದ ಆಟದ ವೈಖರಿ ಮತ್ತು ಸಾಮಥ್ರ್ಯ ಅನಾವರಣಗೊಂಡಿದ್ದು ಪ್ರತಿಷ್ಠಿತ ಲಿವರ್‌ಪೂಲ್ ಕ್ಲಬ್‍ನಲ್ಲಿ. ಪ್ರತಿಷ್ಠಿತ ಕ್ಲಬ್ ಟೂರ್ನಿಗಳಲ್ಲಿ ಸಲಾಹ್ ಹೊಸ ಅಧ್ಯಾಯವನ್ನೇ ಬರೆಯಲು ಶುರು ಮಾಡಿದ್ದ. 2017ರಿಂದ 2026ರವರೆಗೆ ಲಿವರ್‌ಪೂಲ್ ನ ಪ್ರಮುಖ ಆಟಗಾರನಾಗಿದ್ದ ಸಲಾಹ್ ದಾಖಲೆಗಳ ಮೇಲೆ ದಾಖಲೆ ಬರೆದು ಚರಿತ್ರೆಯನ್ನೇ ಸೃಷ್ಟಿಸಿದ್ದ. 30 ವರ್ಷಗಳ ಬಳಿಕ ಲಿವರ್‌ಪೂಲ್ ಕ್ಲಬ್‍ಗೆ ಪ್ರತಿಷ್ಠಿತ ಪ್ರೀಮಿಯರ್ ಲೀಗ್ ಕಿರೀಟ ತೊಡಿಸಿದ್ದ. ಅಲ್ಲದೆ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಗೆಲ್ಲುವಲ್ಲಿ ಕೂಡ ಸಲಾಹ್ ಪ್ರಮುಖ ಪಾತ್ರ ವಹಿಸಿದ್ದ. ಯುರೋಪಿಯನ್ ಅಂಗಳದಲ್ಲಿ ತನ್ನ ಅದ್ಭುತ ಆಟದಿಂದಲೇ ಗಮನ ಸೆಳೆದಿದ್ದ ಮಹಮ್ಮದ್ ಸಲಾಹ್‍ನನ್ನು ಅಭಿಮಾನಿಗಳು ಪ್ರೀತಿಯಿಂದ ಈಜಿಪ್ಟ್‍ನ ಕಿಂಗ್ ಅಂತ ಕೊಂಡಾಡುತ್ತಾರೆ.
ಈಜಿಪ್ಟ್ ಕಿಂಗ್‍ನ ಬತ್ತಳಿಕೆಯ ಪ್ರಮುಖ ಅಸ್ತ್ರಗಳು..! ⚽👑🇪🇬 🐆
ಹೌದು, ಮಹಮ್ಮದ್ ಸಲಾಹ್‍ನ ಬಲಗಾಲಿಗಿಂತ ಹೆಚ್ಚು ಎಡಗಾಲು ತುಂಬಾನೇ ಅಪಾಯಕಾರಿ. ಶರವೇಗದಲ್ಲಿ ಓಡಾಡಿಕೊಂಡು ಬಲಗಾಲಿನಿಂದ ಚೆಂಡನ್ನು ನಾಟ್ಯ ಮಾಡಿಸುತ್ತಾ, ಎಡಗಾಲಿನಿಂದ ಗೋಲು ಹೊಡೆಯುವ ಶೈಲಿಯೇ ಸಲಾಹ್ ಆಟದ ಪ್ರಮುಖ ಬ್ರಹ್ಮಾಸ್ತ್ರ. ಚೆಂಡನ್ನು ನಿಯಂತ್ರಣದಲ್ಲಿಟ್ಟುಕೊಂಡು ಚಿರತೆಯಂತೆ ಮುನ್ನುಗ್ಗುವ ವೈಖರಿಗೆ ಡಿಫೆಂಡರ್‍ಗಳು ತಬ್ಬಿಬ್ಬುಗೊಳ್ಳುತ್ತಾರೆ. ತನ್ನ ಡ್ರಿಬ್ಲಿಂಗ್ ಜಾದೂ ಮೂಲಕವೂ ಎದುರಾಳಿ ಆಟಗಾರರ ಕಣ್ತಪ್ಪಿಸುವ ಕಲೆಯೂ ಸಲಾಹ್‍ಗೆ ಕರಗತವಾಗಿದೆ. ಅಷ್ಟೇ ಅಲ್ಲ, ತಾಳ್ಮೆ ಹಾಗೂ ನಾಜೂಕಿನಿಂದ ಚೆಂಡನ್ನು ಗೋಲುಪೆಟ್ಟಿಗೆಯೊಳಗೆ ಸೇರಿಸುವ ಚತುರ ಆಟಗಾರನೂ ಹೌದು.
ಲಿವರ್‌ಪೂಲ್ ಕ್ಲಬ್‍ನ ಹೀರೋ.. ಮುಂದೇನು..? 👟
ಲಿವರ್‌ಪೂಲ್ ತಂಡದ ಪರವಾಗಿ 2025-26ರ ಸಾಲಿನಲ್ಲಿ ಏಳು ಗೋಲುಗಳನ್ನು ದಾಖಲಿಸಿದ್ದಾನೆ. ಅಲ್ಲದೆ ಮೂರನೇ ಬಾರಿ ಎಫ್‍ಡಬ್ಲ್ಯು ಎ ವರ್ಷದ ಫುಟ್‍ಬಾಲ್ ಆಟಗಾರನಾಗಿ ಹೊರಹೊಮ್ಮಿದ್ದಾನೆ. ಕಳೆದ 9 ವರ್ಷಗಳಿಂದ ಲಿವರ್‌ಪೂಲ್ ತಂಡದ ಪರವಾಗಿ 441 ಪಂದ್ಯಗಳನ್ನು ಆಡಿರುವ ಸಲಾಹ್ 257 ಗೋಲುಗಳನ್ನು ದಾಖಲಿಸಿದ್ದಾನೆ. ಇಂಗ್ಲೀಷ್ ಪ್ರೀಮಿಯರ್ ಲೀಗ್‍ನಲ್ಲಿ 191 ಹಾಗೂ ಯುಇಎಫ್‌ಎ ಚಾಂಪಿಯನ್ಸ್ ಲೀಗ್‍ನಲ್ಲಿ 48 ಗೋಲುಗಳನ್ನು ದಾಖಲಿಸಿರುವ ಆಫ್ರಿಕಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಈತನಿಗಿದೆ. ಹಾಗಂತ ಸಲಾಹ್ ಬರೀ ತಾನು ಮಾತ್ರ ಗೋಲು ಗಳಿಸುವುದಲ್ಲ. ತನ್ನ ನಿಖರವಾದ ಪಾಸ್‍ಗಳ ಮೂಲಕ ಸಹ ಆಟಗಾರರಿಗೂ ಗೋಲು ದಾಖಲಿಸಲು ನೆರವಾಗುತ್ತಾನೆ. ಹೀಗಾಗಿ ಸಲಾಹ್ ಒಬ್ಬ ಟೀಮ್ ಪ್ಲೇಯರ್ ಅಂತನೂ ಗುರುತಿಸಿಕೊಂಡಿದ್ದಾನೆ. 123 ಬಾರಿ ಪಾಸ್‍ಗಳನ್ನು ನೀಡಿ ಸಹ ಆಟಗಾರರ ಗೋಲಿನ ಸಂಭ್ರಮದ ಪಾಲುದಾರನಾಗಿದ್ದಾನೆ. 34 ವರ್ಷದ ಸಲಾಹ್ ಈಗ ಲಿವರ್‌ಪೂಲ್ ತಂಡವನ್ನು ತೊರೆಯುವ ನಿರ್ಧಾರ ತೆಗೆದುಕೊಂಡಿದ್ದಾನೆ. ಇದೀಗ ಅನೇಕ ಪ್ರತಿಷ್ಠಿತ ಕ್ಲಬ್‍ಗಳು ಸಲಾಹ್ ಬೆನ್ನು ಬಿದ್ದಿವೆ.
ಈಜಿಪ್ಟ್ ಫುಟ್‍ಬಾಲ್ ತಂಡದ ಕಿಂಗ್..! 👑 / 🤴
ಯೂರೋಪಿಯನ್ ಕ್ಲಬ್‍ಗಳಲ್ಲಿ ಸಂಚಲನ ಮೂಡಿಸಿದ್ದ ಮಹಮ್ಮದ್ ಸಲಾಹ್ ತನ್ನ ತಾಯ್ನಾಡಿನ ತಂಡದ ಯಶಸ್ಸಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದಾನೆ. ಇಲ್ಲಿಯವರೆಗೆ ಈಜಿಪ್ಟ್ ಪರ 68 ಗೋಲುಗಳನ್ನು ದಾಖಲಿಸಿದ್ದಾನೆ. ದೇಶದ ಸಾರ್ವಕಾಲಿಕ ಅತೀ ಹೆಚ್ಚು ಗೋಲು ದಾಖಲಿಸಿದ್ದ ದಾಖಲೆಯನ್ನು ಅಳಿಸಿ ಹಾಕಲು ಒಂದು ಗೋಲಿನ ಅವಶ್ಯಕತೆ ಇದೆ. ಹೊಸಾಮ್ ಹಸನ್ 69 ಗೋಲು ದಾಖಲಿಸಿ ಅಗ್ರ ಸ್ಥಾನದಲ್ಲಿದ್ದಾನೆ. ಅಷ್ಟೇ ಅಲ್ಲ, 1990ರ ನಂತ್ರ ಅಂದ್ರೆ 28 ವರ್ಷಗಳ ಬಳಿಕ 2018ರಲ್ಲಿ ಮೊದಲ ಬಾರಿ ಫಿಫಾ ವಿಶ್ವಕಪ್‍ನಲ್ಲಿ ಈಜಿಪ್ಟ್ ದೇಶದ ಧ್ವಜವನ್ನು ಫಿಫಾ ಮೈದಾನದಲ್ಲಿ ಹಾರಾಡುವಂತೆ ಮಾಡಿದ್ದಾನೆ. ಆದ್ರೆ 2022ರ ಕತಾರ್ ಫಿಫಾ ವಿಶ್ವಕಪ್‍ನಲ್ಲಿ ಈಜಿಪ್ಟ್ ತಂಡ ಅರ್ಹತೆ ಪಡೆಯುವಂತೆ ಮಾಡಲು ಸಲಾಹ್ ವಿಫಲನಾಗಿದ್ದ. ಆದ್ರೂ ಈ ಬಾರಿ 2026ರ ಫಿಫಾ ವಿಶ್ವಕಪ್‍ನಲ್ಲಿ ಈಜಿಪ್ಟ್ ತಂಡವನ್ನು ಮುನ್ನಡೆಸಿದ್ದ ಸಲಾಹ್ ಅದ್ಭುತ ಪ್ರದರ್ಶನವನ್ನೇ ನೀಡಿದ್ದ. ಗೋಲು ಗಳಿಕೆಯಲ್ಲಿ ಹಿನ್ನಡೆ ಅನುಭವಿಸಿದ್ರೂ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಇದೀಗ ಪ್ರೀ ಕ್ವಾರ್ಟರ್ ಫೈನಲ್‍ನಲ್ಲಿ ಅರ್ಜೆಂಟಿನಾ ವಿರುದ್ದ ಸೋತ ಈಜಿಪ್ಟ್ ಟೂರ್ನಿಯಿಂದ ನಿರ್ಗಮಿಸಿದೆ. ಅಂಪೈರ್‍ಗಳ ಹಲವು ವಿವಾದಾತ್ಮಕ ತೀರ್ಪು ಈಜಿಪ್ಟ್ ತಂಡದ ನಾಯಕನಿಗೆ ನಿರಾಸೆಯನ್ನುಂಟು ಮಾಡಿದೆ. ಆದ್ರೂ ಸಲಾಹ್ ಟೀಮ್ ಸ್ಪಿರಿಟ್ ಮತ್ತು ತನ್ನ ಅದ್ಭುತ ಆಟದಿಂದಲೇ ನೆಚ್ಚಿನ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾನೆ.
ಮಹಾ ಮಾನವತಾವಾದಿ ಈಜಿಪ್ಟ್ ನ ಕಿಂಗ್ ಮಹಮ್ಮದ್ ಸಲಾಹ್..! ❤️ / 💖
ನಿಜ, ತನ್ನ ಅದ್ಭುತ ಪ್ರತಿಭೆ ಮತ್ತು ಮ್ಯಾಜಿಕ್ ಆಟದ ಮೂಲಕವೇ ಯಶಸ್ಸಿನ ಶಿಖರವೇರಿದ್ದ ಆಟಗಾರ ಸಲಾಹ್. ಆದ್ರೆ ದುಡ್ಡು, ಸಾಧನೆ, ಐಷಾರಾಮಿ ಜೀವನ ಸಲಾಹ್ ಬದುಕಿನಲ್ಲಿ ಮದವೇರುವಂತೆ ಮಾಡಲಿಲ್ಲ. ತಾನು ಬಾಲ್ಯದಲ್ಲಿ ಪಟ್ಟ ಕಷ್ಟ, ಬಡತನದ ಜೀವನವನ್ನು ಮರೆಯಲಿಲ್ಲ. ಹುಟ್ಟೂರಿನ ಜನರ ಕಷ್ಟಗಳಿಗೆ ಸದಾ ಮೀಡಿಯುತ್ತಿರುವ ಹೃದಯ ಸಲಾಹ್‍ನದ್ದು. ತನ್ನ ಸಂಪಾದನೆಯ ಬಹುತೇಕ ಹಣವನ್ನು ತನ್ನ ಹುಟ್ಟೂರಿನ ನಾಗ್ರಿಕ ಹಳ್ಳಿಯ ಜನರಿಗೆ ಧಾರೆ ಎರೆದಿದ್ದಾನೆ. ಅತ್ಯಾಧುನಿಕ ಆಸ್ಪತ್ರೆ, ಹೆಣ್ಣು ಮಕ್ಕಳ ಶಿಕ್ಷಣ, ಶಾಲೆ, ಕೀಡಾ ಸಂಕೀರ್ಣ, ಶುದ್ಧ ಕುಡಿಯುವ ನೀರು, ಆಂಬ್ಯುಲೆನ್ಸ್, ಒಳಚರಂಡಿ ಸೇರಿದಂತೆ ನೂರಾರು ಕುಟುಂಬಗಳಿಗೆ ಆರ್ಥಿಕ ನೆರವು ನೀಡುತ್ತಿದ್ದಾನೆ. ತನ್ನ ತಂದೆಯ ಪರ್ಸ್ ಕದ್ದ ಒಬ್ಬ ಕಳ್ಳನಿಗೂ ಶಿಕ್ಷೆ ತಪ್ಪಿಸಿ ಆರ್ಥಿಕ ಸಹಾಯ ಮಾಡಿದ್ದ ಸಹೃದಯಿ. ಜೊತೆಗೆ ದೇಶದ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಕೋಟಿ ಕೋಟಿ ಹಣನ್ನು ರಾಷ್ಟ್ರೀಯ ನಿಧಿಗೆ ದೇಣಿಗೆ ಕೊಟ್ಟ ದಾನಶೂರ..
ಸಲಾಹ್ ಬದುಕಿನ ಚಿತ್ರಣವೇ ಯುವ ಆಟಗಾರರಿಗೆ ಮಾದರಿ..! 🤝 / 🙌
ಅಂದ ಹಾಗೇ, ಮಹಮ್ಮದ್ ಸಲಾಹ್ ಎಂಬ ಆಟಗಾರನ ವ್ಯಕ್ತಿತ್ವದ ಬಗ್ಗೆ ಕೋಚ್‍ಗಳು ಹೆಮ್ಮೆಯಿಂದ ಮಾತನಾಡುತ್ತಾರೆ. ಸಲಾಹ್ ಮೈದಾನದಲ್ಲಿ ಗೋಲು ಹೊಡೆಯುವ ಯಂತ್ರ. ಮೈದಾನದ ಹೊರಗಡೆ ಬಡವರ ಪಾಲಿನ ಬೆಳಕು ಅಂತ ಲಿವರ್‌ಪೂಲ್ ಮಾಜಿ ಕೋಚ್ ಜುರ್ಗನ್ ಕ್ಲೋಪ್ ಸಲಾಹ್ ವ್ಯಕ್ತಿತ್ವವನ್ನು ಬಣ್ಣಿಸುತ್ತಾರೆ. ಇನ್ನು ಬಾಲ್ಯದ ಕೋಚ್ ಬೋಬ್ ಬ್ರಾಡ್ಲಿ ಹೇಳುವುದು ಹೀಗೆ.. “ಬಡತನದ ಕಷ್ಟಗಳ ನಡುವೆಯೂ ಆತನ ಕಣ್ಣಲ್ಲಿ ಜಗತ್ತನ್ನೇ ಗೆಲ್ಲುವ ಹಸಿವಿತ್ತು. ಮೊದಲ ನೋಟದಲ್ಲೇ ಆತನ ಪ್ರತಿಭೆಯನ್ನು ನಾನು ಗುರುತಿಸಿದ್ದೆ. ಈತ ಈಜಿಪ್ಟ್ ದೇಶದ ಭವಿಷ್ಯದ ಆಟಗಾರನಾಗುತ್ತೇನೆ ಎಂದು ಅಂದುಕೊಂಡಿದ್ದೆ. ಅದು ಈಗ ನಿಜವಾಗಿದೆ ಎಂದು ಶಿಷ್ಯನ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ತರಬೇತಿಗೆ ಅರ್ಧಗಂಟೆ ಮೊದಲೇ ಹಾಜರಾಗುವ ಸಲಾಹ್, ಬದುಕಿನ ಶಿಸ್ತು, ಪರಿಶ್ರಮ, ಬದ್ಧತೆ, ಆತ್ಮವಿಶ್ವಾಸವೇ ಯುವ ಆಟಗಾರರಿಗೆ ಮಾದರಿ.
ನಿಮ್ಮ ಆರಂಭ ಎಲ್ಲಿ ಎಂಬುದು ಮುಖ್ಯವಲ್ಲ. ನೀವು ನಡೆದು ಬಂದ ಹಾದಿಯಲ್ಲಿ ಎದುರಾಗುವಂತಹ ಸವಾಲುಗಳನ್ನು ಮೆಟ್ಟಿ ನಿಲ್ಲುವುದೇ ಜೀವನ. ಶಿಸ್ತು ಮತ್ತು ಕಲ್ಮಶವಿಲ್ಲದ ಮನಸ್ಸು ನಿಮ್ಮನ್ನು ಇನ್ನಷ್ಟು ಎತ್ತರಕ್ಕೇರಿಸುತ್ತದೆ. ಈ ನಂಬಿಕೆಯೇ ಮಹಮ್ಮದ್ ಸಲಾಹ್ ನ ಯಶಸ್ಸಿನ ಗುಟ್ಟು.
ಈಜಿಪ್ಟ್ ಫುಟ್‍ಬಾಲ್‍ನ ಜೀವಂತ ದಂತಕಥೆ..!✨ / 💎
ಒಂದಂತೂ ಸತ್ಯ. ಸಲಾಹ್ ಗೆದ್ದಿರುವ ಟ್ರೋಫಿ, ಪ್ರಶಸ್ತಿಗಳು ಇಂದಲ್ಲ ನಾಳೆಯಾದ್ರೂ ಧೂಳು ಹಿಡಿದು ಮಂಕಾಗಬಹುದು. ಆದ್ರೆ ಮಹಮ್ಮದ್ ಸಲಾಹ್ ಎಂಬ ಹೆಸರು ವಜ್ರದಂತೆ ಸದಾ ಹೊಳೆಯುತ್ತಿರುತ್ತದೆ. ಯಾಕಂದ್ರೆ ಫುಟ್‍ಬಾಲ್ ರಂಗದಲ್ಲಿ ಸಲಾಹ್ ಒಬ್ಬ ಅದ್ಭುತ ಆಟಗಾರ. ಕೋಚ್‍ಗಳಿಗೆ ಶಿಸ್ತಿನ ಹಾಗೂ ಪ್ರೀತಿಯ ಶಿಷ್ಯ. ಈಜಿಪ್ಟ್ ಫುಟ್‍ಬಾಲ್ ತಂಡಕ್ಕೆ ಅದ್ಭುತ ನಾಯಕ. ಆದ್ರೆ ನಾಗ್ರಿಗ ಊರಿನ ಜನ ಮಾತ್ರ ಈತನನ್ನು ಕೇವಲ ಫುಟ್‍ಬಾಲ್ ಆಟಗಾರನಾಗಿ ಗುರುತಿಸುವುದಿಲ್ಲ. ತಮ್ಮೂರಿನ ಅಪರೂಪದ ಮಾಣಿಕ್ಯ ಅಂತ ಬಣ್ಣಿಸುತ್ತಾರೆ. ಇದು ಈಜಿಪ್ಟ್ ಫುಟ್‍ಬಾಲ್ ತಂಡದ ನಾಯಕ.ಮಹಮ್ಮದ್ ಸಲಾಹ್ ಎಂಬ ಜೀವಂತ ದಂತಕಥೆಯ ಯಶೋಗಾಥೆ. 🚀🔥
ಸನತ್ ರೈ







