ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಅತ್ಯಂತ ಕಠಿಣ ಪದಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ. ಅಪ್ರಾಪ್ತ ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವವರಿಂದ ಕಾಂಗ್ರೆಸ್ ಪಕ್ಷ ನೈತಿಕತೆಯ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಅವರು ಗುಡುಗಿದ್ದಾರೆ.
ಯಡಿಯೂರಪ್ಪ ಕುಟುಂಬದ ವಿರುದ್ಧ ಹರಿಪ್ರಸಾದ್ ಆಕ್ರೋಶ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಕೆ. ಹರಿಪ್ರಸಾದ್, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಬಗ್ಗೆ ಟೀಕೆ ಮಾಡುತ್ತಿರುವ ವಿಜಯೇಂದ್ರ ಅವರಿಗೆ ಖಾರವಾಗಿ ಪ್ರತಿಕ್ರಿಯಿಸಿದರು. ಚೆಕ್ ಮೂಲಕ ಲಂಚ ಪಡೆದು ಜೈಲು ಸೇರಿರುವ ಇತಿಹಾಸ ಯಡಿಯೂರಪ್ಪ ಅವರದ್ದು. ಈಗ ಅವರ ವಿರುದ್ಧ ಅಪ್ರಾಪ್ತ ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯದ ಗಂಭೀರ ಪ್ರಕರಣವಿದೆ. ಅಂತಹವರ ಮಗ ರಾಮಮಂದಿರದ ಹಣ ಲೂಟಿ ಮಾಡಿದವರ ಪರವಾಗಿ ಮಾತನಾಡುತ್ತಿರುವುದು ಆಶ್ಚರ್ಯವೇನಲ್ಲ ಎಂದು ವ್ಯಂಗ್ಯವಾಡಿದರು.
ಅಯೋಧ್ಯೆಯ ರಾಮಮಂದಿರದ ದೇಣಿಗೆ ಹಣದಲ್ಲಿ ದೊಡ್ಡ ಮಟ್ಟದ ಲೂಟಿ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ ಹರಿಪ್ರಸಾದ್, ಭಾರತದ ಇತಿಹಾಸದಲ್ಲಿ ದೇವಸ್ಥಾನಗಳನ್ನು ಲೂಟಿ ಮಾಡಿದವರು ಇಬ್ಬರೇ. ಒಬ್ಬ 12ನೇ ಶತಮಾನದ ಮೊಹಮ್ಮದ್ ಘಜ್ನಿ, ಇನ್ನೊಬ್ಬರು 21ನೇ ಶತಮಾನದ ಬಿಜೆಪಿ ಮತ್ತು ಆರ್ ಎಸ್‌ಎಸ್ ನಾಯಕರು ಎಂದು ಟೀಕಿಸಿದರು. ರಾಮಮಂದಿರದ ಹುಂಡಿ ಹಣ, ಬಂಗಾರ ಮತ್ತು ಬೆಳ್ಳಿ ಲೂಟಿಯಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಆರ್ ಎಸ್‌ಎಸ್ ಸಭೆಯ ಬಗ್ಗೆ ಪ್ರಸ್ತಾಪಿಸಿದ ಅವರು, ಈ ಹಿಂದೆ ಇಂತಹ ಸಭೆಗಳು ನಡೆದಾಗಲೇ ದಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಅವರ ಹತ್ಯೆಗಳಾಗಿದ್ದವು. ಈಗಿನ ಸಭೆಯಿಂದ ಮುಂದೆ ಏನೆಲ್ಲಾ ಅನಾಹುತಗಳಾಗುತ್ತವೆಯೋ ಎಂದು ಕಾದು ನೋಡಬೇಕಿದೆ ಎಂದು ಆತಂಕ ವ್ಯಕ್ತಪಡಿಸಿದರು. ಧಾರ್ಮಿಕ ಕ್ಷೇತ್ರದಲ್ಲೂ ಭ್ರಷ್ಟರನ್ನು ತುಂಬುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಅವರು ವಿಷಾದಿಸಿದರು.
ಅಕ್ರಮ ವಲಸಿಗರ ವಿಚಾರವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಬರೆದಿರುವ ಪತ್ರದ ಬಗ್ಗೆ ಕಿಡಿಕಾರಿದ ಹರಿಪ್ರಸಾದ್, ಕರ್ನಾಟಕಕ್ಕೂ ಬಾಂಗ್ಲಾದೇಶಕ್ಕೂ ಗಡಿ ಸಂಬಂಧವಿಲ್ಲ. ಅಕ್ರಮ ವಲಸಿಗರು 4 ಸಾವಿರ ಕಿಲೋಮೀಟರ್ ಕ್ರಮಿಸಿ ಕರ್ನಾಟಕಕ್ಕೆ ಬಂದಿದ್ದಾರೆ ಎಂದರೆ ಗೃಹ ಸಚಿವ ಅಮಿತ್ ಶಾ ಅವರು ಏನು ಮಾಡುತ್ತಿದ್ದಾರೆ? ನುಸುಳುಕೋರರನ್ನು ತಡೆಯಲು ವಿಫಲರಾದ ಅಮಿತ್ ಶಾ ಅವರನ್ನು ತಕ್ಷಣ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ರಾಷ್ಟ್ರಪತಿಗಳಿಗೆ ಪತ್ರ ಬರೆಯಲಿ ಎಂದು ಸವಾಲು ಹಾಕಿದರು. ಬಿಜೆಪಿಯು ರಾಜಕೀಯ ಲಾಭಕ್ಕಾಗಿ ಬಾಂಗ್ಲಾದೇಶಿಗರ ಹೆಸರನ್ನು ಬಳಸಿಕೊಳ್ಳುತ್ತಿದೆ ಮತ್ತು ಭಾರತದ ನೈಜ ಮತದಾರರನ್ನು ಕೈಬಿಡುವ ಕುತಂತ್ರ ಮಾಡುತ್ತಿದೆ ಎಂದು ಆರೋಪಿಸಿದರು.
ಬಿಬಿಎಂಪಿ ಚುನಾವಣೆ ಮತ್ತು ಮತದಾರರ ಪಟ್ಟಿಯ ಗೊಂದಲಗಳ ಬಗ್ಗೆ ಮಾತನಾಡಿದ ಅವರು, ಅಧಿಕಾರಿಗಳ ಕೊರತೆಯಿಂದ ಎಸ್‌ಐಆರ್ ಪ್ರಕ್ರಿಯೆ ವಿಳಂಬವಾಗುತ್ತಿದೆ. ನ್ಯಾಯಾಲಯದ ಆದೇಶದಂತೆ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ಯಾವುದೇ ಸಮನ್ವಯದ ಕೊರತೆ ಇಲ್ಲ, ಪಕ್ಷ ಸಂಘಟನೆ ಮತ್ತು ಸರ್ಕಾರದ ಕಾರ್ಯಗಳು ಸುಗಮವಾಗಿ ನಡೆಯುತ್ತಿವೆ ಎಂದು ತಿಳಿಸಿದರು.







