ಬೆಂಗಳೂರು: ರಾಜಧಾನಿಯ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮುಕ್ತಗೊಳಿಸಿ, ಸಿಲಿಕಾನ್ ಸಿಟಿಯನ್ನು ಪಾದಚಾರಿಗಳಿಗೆ ಸುರಕ್ಷಿತವಾಗಿಸಲು ಪಣತೊಟ್ಟಿರುವ ಸಚಿವ ಕೃಷ್ಣ ಬೈರೇಗೌಡರ ಬೆಂಬಲಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಧಾವಿಸಿದೆ. ಯಾವುದೇ ಒತ್ತಡ ಅಥವಾ ರಾಜಕೀಯ ವಿರೋಧಗಳಿಗೆ ಮಣಿಯದೆ ಕಾರ್ಯಾಚರಣೆ ಮುಂದುವರಿಸಿ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರು ಸಚಿವರಿಗೆ ಧೈರ್ಯ ತುಂಬಿದ್ದಾರೆ.
ಇದು ಕೋಟ್ಯಂತರ ಬೆಂಗಳೂರಿಗರ ಸುರಕ್ಷತೆಯ ಪ್ರಶ್ನೆ
ಸೋಷಿಯಲ್ ಮೀಡಿಯಾ ಮೂಲಕ ಸಚಿವರ ಕಾರ್ಯವೈಖರಿಯನ್ನು ಶ್ಲಾಘಿಸಿರುವ ನಾರಾಯಣಗೌಡರು, ಪಾದಚಾರಿ ಮಾರ್ಗಗಳ ತೆರವು ಕಾರ್ಯಾಚರಣೆ ಕೇವಲ ಸೌಂದರ್ಯೀಕರಣಕ್ಕಾಗಿ ಮಾತ್ರವಲ್ಲ, ಇದು ಜನರ ಜೀವ ಉಳಿಸುವ ಕೆಲಸ ಎಂದು ಬಣ್ಣಿಸಿದ್ದಾರೆ. ಫುಟ್‌ಪಾತ್‌ಗಳಲ್ಲಿ ಅಂಗಡಿ-ಮುಂಗಟ್ಟುಗಳು ನೆಲೆ ನಿಂತಿರುವುದರಿಂದ ಪಾದಚಾರಿಗಳು ರಸ್ತೆಯ ಮೇಲೆ ನಡೆಯುವ ಅನಿವಾರ್ಯತೆ ಎದುರಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಪಾದಚಾರಿಗಳ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ, ಸಚಿವರ ಈ ಕ್ರಮವು ಅತ್ಯಂತ ಜನಪರ ಮತ್ತು ಸಮಯೋಚಿತವಾದುದು ಎಂದು ಅವರು ಹೇಳಿದ್ದಾರೆ.
ವ್ಯಾಪಾರ ವಿರೋಧಿ ಕ್ರಮವಲ್ಲ, ನಗರದ ಹಿತದೃಷ್ಟಿಯ ನಿರ್ಧಾರ
ಈ ತೆರವು ಕಾರ್ಯಾಚರಣೆಯನ್ನು ವ್ಯಾಪಾರ ವಿರೋಧಿ ಕ್ರಮ ಎಂದು ಬಿಂಬಿಸುತ್ತಿರುವವರ ವಿರುದ್ಧ ಕರವೇ ಕಿಡಿಕಾರಿದೆ. ನಗರದ ಪ್ರಮುಖ ರಸ್ತೆಗಳ ಪೈಕಿ ಕೇವಲ ಶೇ 10ರಿಂದ 20ರಷ್ಟು ರಸ್ತೆಗಳಲ್ಲಿ ಮಾತ್ರ ಈ ಕಠಿಣ ಕ್ರಮ ಜರುಗಿಸಲಾಗುತ್ತಿದೆ. ಉಳಿದ ಕಡೆ ವ್ಯಾಪಾರಕ್ಕೆ ಅವಕಾಶವಿದೆ. ಇದು ಯಾವುದೇ ನಿರ್ದಿಷ್ಟ ವ್ಯಕ್ತಿ ಅಥವಾ ವ್ಯಾಪಾರಿಯನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ಕೆಲಸವಲ್ಲ. ಆದರೆ, ಬಡ ವ್ಯಾಪಾರಿಗಳ ಬಗ್ಗೆ ಸರ್ಕಾರಕ್ಕೆ ಮಾನವೀಯತೆ ಇರಲಿ, ಅವರಿಗೆ ಪರ್ಯಾಯ ಸ್ಥಳಗಳನ್ನು ಗುರುತಿಸಿಕೊಡುವ ಬಗ್ಗೆಯೂ ಚಿಂತಿಸಲಿ ಎಂದು ಅವರು ಸಲಹೆ ನೀಡಿದ್ದಾರೆ.
ರಾಜಕೀಯ ಒತ್ತಡಕ್ಕೆ ಅಂಜಬೇಡಿ, ನಮ್ಮ ಬೆಂಬಲ ನಿಮಗಿದೆ
ಬೆಂಗಳೂರನ್ನು ವಿಶ್ವಮಟ್ಟದ ನಗರವನ್ನಾಗಿ ಮಾಡುವ ಹಾದಿಯಲ್ಲಿ ಇಂತಹ ಕಠಿಣ ನಿರ್ಧಾರಗಳು ಅನಿವಾರ್ಯ. ಸಚಿವ ಕೃಷ್ಣ ಬೈರೇಗೌಡರು ಯಾವ ಇಲಾಖೆ ವಹಿಸಿಕೊಂಡರೂ ಅಲ್ಲಿ ಪಾರದರ್ಶಕತೆ ಮತ್ತು ಕ್ರಿಯಾಶೀಲತೆ ತೋರುತ್ತಾರೆ. ಕೆರೆಗಳು, ರಾಜಕಾಲುವೆಗಳು ಮತ್ತು ಸರ್ಕಾರಿ ಭೂಮಿಯ ಒತ್ತುವರಿ ತೆರವುಗೊಳಿಸುವ ವಿಚಾರದಲ್ಲಿಯೂ ಅವರು ತೋರುತ್ತಿರುವ ಬದ್ಧತೆ ಮೆಚ್ಚುವಂತದ್ದು. ರಾಜಕೀಯ ಅಜೆಂಡಾ ಇಲ್ಲದೆ ಸಾರ್ವಜನಿಕ ಹಿತಾಸಕ್ತಿಯಿಂದ ಕೆಲಸ ಮಾಡುತ್ತಿರುವ ಸಚಿವರಿಗೆ ಕರವೇ ಸಂಪೂರ್ಣವಾಗಿ ಬೆಂಬಲ ನೀಡಲಿದೆ ಎಂದು ನಾರಾಯಣಗೌಡರು ಭರವಸೆ ನೀಡಿದ್ದಾರೆ.
ಬೀಡಾಡಿ ವಾಹನಗಳ ತೆರವಿಗೂ ಜೈ ಅಂದ ಕರವೇ
ರಸ್ತೆ ಬದಿಯಲ್ಲಿ ತುಕ್ಕು ಹಿಡಿದು ನಿಂತಿರುವ ನಿಷ್ಪ್ರಯೋಜಕ ವಾಹನಗಳನ್ನು ತೆರವುಗೊಳಿಸುತ್ತಿರುವ ಸರ್ಕಾರದ ಕ್ರಮಕ್ಕೂ ಕರವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಇಂತಹ ವಾಹನಗಳು ನಗರದ ಸ್ವಚ್ಛತೆ ಮತ್ತು ಸಂಚಾರಕ್ಕೆ ಅಡ್ಡಿಯಾಗುತ್ತಿವೆ. ಒಟ್ಟಾರೆಯಾಗಿ ನಾಡಪ್ರಭು ಕೆಂಪೇಗೌಡರು ಕಟ್ಟಿದ ಈ ನಗರವನ್ನು ವ್ಯವಸ್ಥಿತವಾಗಿ ರೂಪಿಸಲು ಇಚ್ಛಾಶಕ್ತಿಯಿಂದ ಮುನ್ನುಗ್ಗುತ್ತಿರುವ ಸಚಿವರಿಗೆ ಈ ಮೂಲಕ ನಾಡಿನ ಅತಿದೊಡ್ಡ ಕನ್ನಡ ಪರ ಸಂಘಟನೆಯ ಬೆಂಬಲ ಸಿಕ್ಕಂತಾಗಿದೆ.








