ಬಡವರ ಮಕ್ಕಳ ಕಾಲ್ಚಳಕ.. ಲಕ್ಷ್ಮೀ ಪುತ್ರರ ಆಟ.. ಶ್ರೀಮಂತರ ಮೋಜಿನ ಮಹಾ ವೇದಿಕೆ.. ಏನಿದು ಫುಟ್‍ಬಾಲ್ ಕ್ರೀಡೆಯ ಲೀಲೆ..! ⚽🔥
ಫುಟ್‍ಬಾಲ್ ಅಂದ್ರೆ ಬಡವರ ಮಕ್ಕಳ ಆಟ ಅನ್ನೋ ಮಾತಿದೆ. ಹಾಗಂತ ಈ ಮಾತು ಸುಳ್ಳಲ್ಲ…! ಬೇಕಿದ್ರೆ ನೋಡಿ..ವಿಶ್ವ ಫುಟ್‍ಬಾಲ್‍ನ ಸಾರ್ವಕಾಲಿಕ ಆಟಗಾರರ ಬದುಕು ರೂಪುಗೊಂಡಿದ್ದು ಕಡುಬಡತನದಲ್ಲೇ. ಕಸದ ರಾಶಿ, ಗಲ್ಲಿ, ಬೀದಿ, ರಸ್ತೆಗಳಲ್ಲಿ ಆಡಿಕೊಂಡು ಬೆಳೆದ ಮಕ್ಕಳೇ ಫುಟ್‍ಬಾಲ್ ಜಗತ್ತನ್ನು ಆಳಿರೋದು ಎಂಬುದು ಪರಮಸತ್ಯ..!
ಈ ಮಾತಿಗೆ ಇವತ್ತಿಗೂ ನಮ್ಮ ಮುಂದೆ ಸಾಕಷ್ಟು ಜೀವಂತ ನಿದರ್ಶನಗಳಿವೆ. ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದವರು, ತರಬೇತಿಗೆ ದುಡ್ಡಿಲ್ಲದೆ ಒದ್ದಾಟ ಮಾಡಿಕೊಂಡಿದ್ದವರು, ಕನಿಷ್ಠ ಸೌಕರ್ಯಗಳು ಇಲ್ಲದೆ ನೋವು ಅನುಭವಿಸಿದ್ದವರು.. ಹೀಗೆ ಬಡತನದ ಬೇಗೆಯಲ್ಲೇ ಅರಳಿದ್ದ ಹಲವಾರು ಆಟಗಾರರು ಫುಟ್‍ಬಾಲ್ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದಾರೆ. ಅಷ್ಟೇ ಅಲ್ಲ ತಾವು ಕೋಟಿ ಕೋಟಿ ಹಣ ಸಂಪಾದನೆ ಮಾಡಿದ್ದಲ್ಲದೆ, ಫುಟ್‍ಬಾಲ್ ಆಟವನ್ನು ವಿಶ್ವದ ಶ್ರೀಮಂತ ಕ್ರೀಡೆಯನ್ನಾಗಿ ಮಾಡಿದ್ದಾರೆ.
ಅಬ್ಬಾ..! ಈ ಫುಟ್‍ಬಾಲ್ ಆಟದಲ್ಲಿ ಒಂಥರಾ ಮಾಂತ್ರಿಕ ಶಕ್ತಿ ಇದೆ. ಒಂದು ಬಾರಿ ಈ ಆಟದ ಮೇಲೆ ಆಕರ್ಷಣೆ ಮೂಡಿದ್ರೆ ಸಾಕು. ಪ್ರತಿಭೆ, ಸಾಮಥ್ರ್ಯ, ಅದೃಷ್ಟದÀ ಜೊತೆಗೆ ಕಠಿಣ ಪರಿಶ್ರಮದ ತಪಸ್ಸು ಮಾಡಿದ್ರೆ ಬದುಕನ್ನು ಬಂಗಾರವನ್ನಾಗಿಸಬಹುದು.( ಎಲ್ಲರಿಗೂ ಅನ್ವಯ ಆಗಲ್ಲ) ಆದ್ರೆ ಆಟದಲ್ಲಿ ಬಡವ – ಶ್ರೀಮಂತ ಎಂಬ ಭೇದಭಾವಗಳಿರಲ್ಲ.
ಆದ್ರೂ ಬಹುತೇಕ ಬಡವರ ಮಕ್ಕಳ ಕಾಲ್ಚಳಕದಿಂದಲೇ ಈ ಆಟ ಇಷ್ಟೊಂದು ಜನಪ್ರಿಯತೆ ಪಡೆದುಕೊಂಡಿರುವುದು. ಇಷ್ಟೊಂದು ಶ್ರೀಮಂತಗೊಂಡಿರುವುದು. ವಿಪರ್ಯಾಸ ಅಂದ್ರೆ ಬಡವರ ಮಕ್ಕಳ ಸಿರಿವಂತಿಕೆಯ ಆಟವನ್ನು ಕಣ್ಣಾರೆ ನೋಡುವ ಸೌಭಾಗ್ಯ ಬಡವರ ಮಕ್ಕಳಿಗೆ ಇಲ್ಲ. ಏನಿದ್ರೂ ದುಡ್ಡು ಇದ್ದವರು ಮಾತ್ರ ಮೈದಾನದ ಗ್ಯಾಲರಿಯಲ್ಲಿ ಬಿಂದಾಸ್ ಆಗಿ ಎಂಜಾಯ್ ಮಾಡ್ಕೊಂಡು ಪಂದ್ಯವನ್ನು ನೋಡ್ತಾರೆ. ಅದೇ ಬಡವರ ಮಕ್ಕಳು ಟಿವಿಯಲ್ಲಿ ಆಟ ನೋಡಿ ತಮ್ಮ ನೆಚ್ಚಿನ ಆಟಗಾರರ ಶೈಲಿಯನ್ನು ಅನುಕರಣೆ ಮಾಡ್ಕೊಂಡು ಆಟ ಕಲಿಯುತ್ತಾರೆ. ಅದು ಬಡವನೇ ಆಗಿರಲಿ.. ಶ್ರೀಮಂತನೇ ಆಗಿರಲಿ.. ಫುಟ್‍ಬಾಲ್ ಎಂಬ ಕ್ರೀಡೆಯ ಮೇಲಿನ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.
💸 ದುಬಾರಿ ದುನಿಯಾ… ಈ ಬಾರಿಯ ಫಿಫಾ ವಿಶ್ವಕಪ್..!
ಅದರಲ್ಲೂ ಈ ಬಾರಿಯ ಫಿಫಾ ವಿಶ್ವಕಪ್ ಪಂದ್ಯಗಳನ್ನು ಗ್ಯಾಲರಿಯಲ್ಲಿ ಕುಳಿತು ನೋಡಬೇಕಾದ್ರೆ ನಿಮ್ಮ ಜೇಬಲ್ಲಿ ಲಕ್ಷ ಹಣ ಇರಬೇಕು. ಹೈಫೈ ಸೌಲಭ್ಯಗಳ ಸೀಟ್‍ನಲ್ಲಿ ಕೂತು ನೋಡಬೇಕಾದ್ರೆ ಕೋಟಿ ರೂಪಾಯಿ ಆಕೌಂಟ್‍ನಲ್ಲಿರಬೇಕು. ಗ್ರೂಪ್ ಹಂತದ ಪಂದ್ಯಗಳ ಟಿಕೆಟ್ ದರ 8,300ರಿಂದ 25ಸಾವಿರವಿತ್ತು. ಉದ್ಘಾಟನಾ ಪಂದ್ಯದ ಟಿಕೆಟ್ ದರ ಸುಮಾರು 2.25ಲಕ್ಷದಿಂದ 5.4 ಲಕ್ಷ ರೂ. ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳ ಟಿಕೆಟ್ ಬೆಲೆ 1.3 ಲಕ್ಷದಿಂದ 9 ಲಕ್ಷ. ರೂ.
ಫೈನಲ್ ಪಂದ್ಯದ ಸಾಮಾನ್ಯ ಟಿಕೆಟ್‍ಗಳ ದರ 6.1 ಲಕ್ಷದಿಂದ 7.3 ಲಕ್ಷ ರೂ. ವಿವಿಐಪಿ ಮತ್ತು ಪ್ರೀಮಿಯಂ ಪ್ಯಾಕೇಜ್‍ಗಳ ರೇಟ್ 31.5 ಲಕ್ಷದಿಂದ 1.3 ಕೋಟಿ. ಇನ್ನು ಫಿಫಾ ವಿಶ್ವಕಪ್‍ನ ಫೈನಲ್ ಮ್ಯಾಚ್‍ನ ವಿಶೇಷ ಟಿಕೆಟ್ ಬೆಲೆ 7,598 ಡಾಲರ್. ಇದು ಸರಾಸರಿ ಭಾರತೀಯರ 20 ತಿಂಗಳ ಆದಾಯವಾಗಿದೆ. ಈ ಎಲ್ಲಾ ಅಂಕಿ ಅಂಶಗಳು ಒಂದು ಅಂದಾಜು ಟಿಕೆಟ್ ಬೆಲೆಯಷ್ಟೇ. ಬೇಡಿಕೆಗೆ ತಕ್ಕಂತೆ ಟಿಕೆಟ್‍ಗಳ ದರಗಳು ಬದಲಾವಣೆಯಾಗುತ್ತವೆ.
🛑 ಬಡವರ ಕ್ರೀಡೆ.. ಶ್ರೀಮಂತರ ಲೀಲೆ..!
ಒಂದಂತೂ ನಿಜ, ಟ್ರಂಪ್ ಅಧ್ಯಕ್ಷತೆಯ ಅಮೆರಿಕಾ, ಫುಟ್‍ಬಾಲ್ ಆಟದಲ್ಲೂ ಹಣವನ್ನು ಲೂಟಿ ಮಾಡುತ್ತಿದೆ. ಹಾಗೇ ನೋಡಿದ್ರೆ ಈ ಹಿಂದಿನ ವಿಶ್ವಕಪ್‍ನಲ್ಲಿ ಟಿಕೆಟ್‍ಗಳ ಬೆಲೆ ಇಷ್ಟೊಂದು ದುಬಾರಿ ಆಗಿರಲಿಲ್ಲ. ಆದ್ರೆ ಈ ಬಾರಿಯಂತೂ ಸಿಕ್ಕಾಪಟ್ಟೆ ಕಾಸ್ಟ್ಲಿಯಾಗಿದೆ. ಎಷ್ಟೇ ಹೈಫೈ ಸೌಲಭ್ಯಗಳಿದ್ರೂ ಜನಸಾಮಾನ್ಯರು ಫಿಫಾ ವಿಶ್ವಕಪ್ ಪಂದ್ಯಗಳನ್ನು ನೋಡಲು ಸಾಧ್ಯನಾ…? ಅದಕ್ಕೆ ಅನ್ನೋದು ಫುಟ್‍ಬಾಲ್ ಅಂದ್ರೆ ಬಡವರ ಕ್ರೀಡೆ..!. ಶ್ರೀಮಂತರ ಲೀಲೆ..!
💰ಫಿಫಾ ವಿಶ್ವಕಪ್‍ನ ಪ್ರತಿಯೊಂದು ತಂಡಗಳಿಗೂ ಕೋಟಿ ಕೋಟಿ ರೂಪಾಯಿ.!
ನಿಜ, ಫಿಫಾ ವಿಶ್ವಕಪ್ ಅಂದ್ರೆ, ಪ್ರತಿ ಕ್ಷಣ, ಪ್ರತಿ ನಿಮಿಷ, ಪ್ರತಿ ಗಂಟೆ, ಪ್ರತಿ ದಿನ, ಪ್ರತಿ ಪಂದ್ಯ. ಬರೀ ದುಡ್ಡು.. ದುಡ್ಡು.. ದುಡ್ಡು..! ಕುರುಡು ಕಾಂಚಾಣಾ ಮನಸ್ಸಿಗೆ ಬಂದಂಗೆ ಕುಣಿಯುತ್ತಿರುತ್ತದೆ.
ಅಂದ ಹಾಗೇ, 2026ರ ಫಿಫಾ ವಿಶ್ವಕಪ್ ಐತಿಹಾಸಿಕ ಟೂರ್ನಿಯಾಗಿದೆ. ಇಲ್ಲಿ ಭಾಗವಹಿಸಿದ್ದ ತಂಡಗಳಿಗೆ ಬಂಪರ್ ಲಾಟ್ರಿ. ಟೂನಿಯಲ್ಲಿ ಆಡಿದ್ದ 48 ತಂಡಗಳಿಗೆ ವಿತರಿಸುವ ಹಣ ಬರೊಬ್ಬರಿ 871 ಮಿಲಿಯನ್ ಡಾಲರ್. ಅಂದ್ರೆ ಭಾರತೀಯ ರೂಪಾಯಿಗಳಲ್ಲಿ ಅಂದಾಜು 8,244ಕೋಟಿ. .
🏆ವಿಶ್ವಕಪ್ ಗೆಲ್ಲುವ ತಂಡದ ಬಹುಮಾನ ಮೊತ್ತ – 51 ಮಿಲಿಯನ್ ಡಾಲರ್ – 433 ಕೋಟಿ ರೂ.
🥈ರನ್ನರ್ ಅಪ್ ತಂಡಕ್ಕೆ – 34 ಮಿಲಿಯನ್ ಡಾಲರ್ – 289 ಕೋಟಿ ರೂ.
🥉 ಮೂರನೇ ಸ್ಥಾನ ಪಡೆಯುವ ತಂಡಕ್ಕೆ – 30 ಮಿಲಿಯನ್ – 255 ಕೋಟಿ ರೂ.
🏅 ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ – 28 ಮಿಲಿಯನ್ – 238 ಕೋಟಿ ರೂ.
ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ತಂಡಗಳಿಗೆ ಸಿಗುವ ಹಣ – 20 ಮಿಲಿಯನ್ ಡಾಲರ್ – 170 ಕೋಟಿ ರೂ.
ಪ್ರೀ ಕ್ವಾರ್ಟರ್ ಫೈನಲ್ ಹಂತದ ತಂಡಗಳಿಗೆ ಸಿಗುವ ಹಣ – 16 ಮಿಲಿಯನ್ ಡಾಲರ್ – 136 ಕೋಟಿ ರೂ.
ನಾಕೌಟ್ ಹಂತ ಪ್ರವೇಶಿಸುವ ತಂಡಗಳಿಗೆ ಸಿಗುವ ಹಣ – 12 ಮಿಲಿಯನ್ ಡಾಲರ್ – 102 ಕೋಟಿ ರೂ.
ಲೀಗ್ ಹಂತದ ತಂಡಗಳಿಗೆ ಸಿಗುವ ಹಣ – 10 ಮಿಲಿಯನ್ ಡಾಲರ್ – 85 ಕೋಟಿ
ಟೂರ್ನಿಯಲ್ಲಿ ಭಾಗವಹಿಸುವ 48 ತಂಡಗಳಿಗೆ ಹೆಚ್ಚುವರಿಯಾಗಿ ಮೀಸಲಿಟ್ಟಿರುವ ಹಣ – 168 ಮಿಲಿಯನ್ ಡಾಲರ್ -1,445 ಕೋಟಿ ರೂ.
ಪ್ರತಿ ತಂಡಗಳ ಪ್ರಯಾಣ, ತರಬೇತಿ, ಸಿದ್ದತೆಗಾಗಿ ಮೀಸಲಿಟ್ಟಿರುವ ಹಣ – 2.5 ಮಿಲಿಯನ್ ಡಾಲರ್ – 22 ಕೋಟಿ ರೂ.
ಟೂರ್ನಿಯಲ್ಲಿ ಭಾಗವಹಿಸುವ ತಂಡಗಳಿಗೆ ಸಿಗುವ ಒಟ್ಟು ಹಣ – 12.5 ಮಿಲಿಯನ್ – 106 ಕೋಟಿ ರೂ.
🏟️ ಫುಟ್‍ಬಾಲ್ ಆಟದ ಯಶಸ್ಸಿನ ಹಿಂದಿನ ಶಕ್ತಿಯೇ ಕ್ಲಬ್ ಲೀಗ್ ಟೂರ್ನಿ..!
ಆದರೆ ಒಂದು ನೆನಪಿಟ್ಟುಕೊಳ್ಳಬೇಕು. ಫಿಫಾ ಇಂದು ದುಡ್ಡಿನ ಜೊತೆ ಚೆಲ್ಲಾಟವಾಡಿಕೊಂಡು ಇರಬಹುದು. ಆತಿಥ್ಯ ವಹಿಸಿದ್ದ ದೇಶಗಳ ಮೂಲಸೌಕರ್ಯಗಳನ್ನು ಹೆಚ್ಚಿಸಲು ನೆರವು ನೀಡಿರಬಹುದು. ಆಟಗಾರರಿಗೆ ದೊಡ್ಡ ವೇದಿಕೆ ಕಲ್ಪಿಸಿರಬಹುದು. ಫುಟ್‍ಬಾಲ್ ಆಟದ ಸುಧಾರಣೆಗೆ ನಾನಾ ಯೋಜನೆಗಳನ್ನು ಹಾಕಿಕೊಂಡಿರಬಹುದು. ಆದ್ರೆ ಫುಟ್‍ಬಾಲ್ ಈ ಮಟ್ಟಕ್ಕೆ ಬೆಳೆಯಲು ಪ್ರಮುಖ ಕಾರಣ ಕ್ಲಬ್ ಲೀಗ್ ಸಂಸ್ಕøತಿ. ಪ್ರತಿಷ್ಠಿತ ಕ್ಲಬ್‍ಗಳು ಸ್ಪರ್ಧೆಗೆ ಬಿದ್ದು ಯುವ ಪ್ರತಿಭಾವಂತ ಆಟಗಾರರ ಪ್ರತಿಭೆ, ಸಾಮಥ್ರ್ಯಗಳನ್ನು ಅನಾವರಣಗೊಳಿಸದೇ ಇರುತ್ತಿದ್ರೆ ಫುಟ್‍ಬಾಲ್ ಪ್ರಪಂಚ ಇಷ್ಟೊಂದು ವಿಸ್ತಾರವಾಗುತ್ತಿರಲಿಲ್ಲ.
⚔️ ಆಟಗಾರರಿಗೆ ಕ್ಲಬ್ ಮುಖ್ಯನೋ..? ದೇಶ ಮುಖ್ಯನೋ..?
ಹಾಗೇ ನೋಡಿದ್ರೆ ಫಿಫಾಗಿಂತಲೂ ಹೆಚ್ಚು ಹಣವನ್ನು ಬಹುತೇಕ ಆಟಗಾರರು ಪ್ರತಿಷ್ಠಿತ ಕ್ಲಬ್‍ಗಳಲ್ಲಿ ಸಂಭಾವಣೆ ಪಡೆಯುತ್ತಿದ್ದಾರೆ. ಹೀಗಾಗಿ ಕೆಲವೊಂದು ಬಾರಿ ದೇಶಕ್ಕಿಂತಲೂ ಕ್ಲಬ್ ತಂಡವೇ ಕೆಲವು ಆಟಗಾರರಿಗೆ ಮುಖ್ಯವಾಗಿರುತ್ತದೆ. ಕೆಲವು ಆಟಗಾರರು ಈ ಆರೋಪಕ್ಕೂ ಗುರಿಯಾಗಿದ್ದಾರೆ. ಅದೇನೇ ಇರಲಿ, ಕ್ಲಬ್‍ನಲ್ಲಿ ದುಡ್ಡು, ಖ್ಯಾತಿ ಎಲ್ಲವೂ ಸಿಗುತ್ತಿದ್ರೂ ದೇಶದ ಪರ ಆಡುವ ಖುಷಿ, ಹೆಮ್ಮೆ ಬೇರೆಯದ್ದೇ ರೀತಿಯಲ್ಲಿರುತ್ತದೆ.
🏁 ಒಟ್ಟಿನಲ್ಲಿ ಫುಟ್‍ಬಾಲ್ ಬಡ ಮಕ್ಕಳ ಕ್ರೀಡೆಯಾದ್ರೂ ಲಕ್ಷ್ಮೀ ಪುತ್ರರ ಆಟವಾಗಿದೆ. ದುಡ್ಡು ಕೊಟ್ಟು ಪಂದ್ಯ ನೋಡುವ ಶ್ರೀಮಂತರಿಗೆ ಮನರಂಜನೆಯ ಮಹಾ ವೇದಿಕೆಯಾಗಿದೆ. ಯಾಕಂದ್ರೆ ಫುಟ್‍ಬಾಲ್ ಎಂಬ ಕಾಲ್ಚೆಂಡಿನ ಆಟದ ಲೀಲೆಯೇ ಅಂತಹುದ್ದು..! ಈಗ ಹೇಳಿ ಫುಟ್‍ಬಾಲ್ ಬಡವರ ಆಟವೋ..? ಶ್ರೀಮಂತರ ಆಟವೋ..?
✍️ಸನತ್ ರೈ








