ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್‌ಗಳಲ್ಲಿ ಚಿಲ್ಲರೆ ಇಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕರನ್ನು ಬಸ್ಸಿನಿಂದ ಕೆಳಗಿಳಿಸುವಂತಿಲ್ಲ ಎಂದು ಸಂಸ್ಥೆಯು ತನ್ನ ಸಿಬ್ಬಂದಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಸಾರಿಗೆ ಸಚಿವ ಭೈರತಿ ಸುರೇಶ್ ಅವರು ಸಾಮಾನ್ಯ ಪ್ರಯಾಣಿಕನಂತೆ ವೇಷ ಬದಲಿಸಿ ಬಸ್ ಹತ್ತಿದಾಗ ನಡೆದ ಕಹಿ ಘಟನೆಗಳ ಹಿನ್ನೆಲೆಯಲ್ಲಿ ಈ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ.
ಸಚಿವರಿಗೇ ಶಾಕ್ ನೀಡಿದ್ದ ಕಂಡಕ್ಟರ್ ಗಳು
ಸಾರಿಗೆ ಸಚಿವ ಭೈರತಿ ಸುರೇಶ್ ಅವರು ಇತ್ತೀಚೆಗೆ ಮಾಸ್ಕ್ ಧರಿಸಿ ಯಾರೂ ಗುರುತು ಹಿಡಿಯದಂತೆ ನಗರದ ಹತ್ತಕ್ಕೂ ಹೆಚ್ಚು ಬಿಎಂಟಿಸಿ ಮಾರ್ಗಗಳಲ್ಲಿ ಪ್ರಯಾಣಿಸಿ ರಿಯಾಲಿಟಿ ಚೆಕ್ ನಡೆಸಿದ್ದರು. ಈ ಸಂದರ್ಭದಲ್ಲಿ ಅವರಿಗೆ ಕಂಡಕ್ಟರ್‌ಗಳ ಅಸಭ್ಯ ವರ್ತನೆಯ ನೇರ ಅನುಭವವಾಗಿದೆ. ಕೆಲವು ನಿರ್ವಾಹಕರು ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ಮಾರು ವೇಷದಲ್ಲಿದ್ದ ಸಚಿವರಿಗೇ ಬಸ್ಸಿನಿಂದ ಇಳಿಯುವಂತೆ ದಬಾಯಿಸಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ಕರ್ತವ್ಯ ಲೋಪ ಎಸಗಿದ ಒಬ್ಬ ಚಾಲಕ ಮತ್ತು ನಿರ್ವಾಹಕನ ಅಮಾನತಿಗೆ ಶಿಫಾರಸು ಮಾಡಿದ್ದಲ್ಲದೆ, ಇಡೀ ವ್ಯವಸ್ಥೆಯನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಚಿಲ್ಲರೆ ಸಮಸ್ಯೆಗೆ ಡಿಜಿಟಲ್ ಪಾವತಿ ಮದ್ದು
ಚಿಲ್ಲರೆ ಸಮಸ್ಯೆಯನ್ನು ಸಂಪೂರ್ಣವಾಗಿ ತೊಡೆದುಹಾಕಲು ನಿರ್ವಾಹಕರು ಈಗ ಇಟಿಎಂ ಯಂತ್ರಗಳಲ್ಲಿ ಲಭ್ಯವಿರುವ ಡೈನಾಮಿಕ್ ಕ್ಯೂಆರ್ ಕೋಡ್ ಆಧಾರಿತ ಯುಪಿಐ ಪಾವತಿಯನ್ನು ಬಳಸಲು ಪ್ರಯಾಣಿಕರನ್ನು ಉತ್ತೇಜಿಸಬೇಕು. ಚಿಲ್ಲರೆ ಹಣದ ಕೊರತೆ ಇದೆ ಎಂಬ ಕಾರಣಕ್ಕೆ ಯಾವುದೇ ಪ್ರಯಾಣಿಕರಿಗೆ ಪ್ರಯಾಣ ನಿರಾಕರಿಸಬಾರದು ಅಥವಾ ಬಸ್ಸಿನಿಂದ ಇಳಿಯುವಂತೆ ಒತ್ತಾಯಿಸಬಾರದು ಎಂದು ಬಿಎಂಟಿಸಿ ತನ್ನ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.
ಸಿಬ್ಬಂದಿಗೆ ಸೌಜನ್ಯದ ಪಾಠ
ಹೊಸ ಮಾರ್ಗಸೂಚಿಗಳ ಪ್ರಕಾರ ಪ್ರಯಾಣಿಕರ ಜೊತೆಗೆ ಚಾಲಕರು ಮತ್ತು ನಿರ್ವಾಹಕರು ಅತ್ಯಂತ ಗೌರವ ಹಾಗೂ ಸೌಜನ್ಯದಿಂದ ವರ್ತಿಸಬೇಕು. ಬಸ್‌ಗಳನ್ನು ನಿಗದಿತ ನಿಲ್ದಾಣಗಳಲ್ಲಿ ಮಾತ್ರ ನಿಲ್ಲಿಸಬೇಕು. ಒಂದು ವೇಳೆ ಪ್ರಯಾಣಿಕರಿಂದ ಪದೇ ಪದೇ ದೂರುಗಳು ಬಂದರೆ ಅಂತಹ ಸಿಬ್ಬಂದಿಯನ್ನು ವಡ್ಡರಹಳ್ಳಿಯ ತರಬೇತಿ ಕೇಂದ್ರಕ್ಕೆ ಕಳುಹಿಸಿ ಸಾಫ್ಟ್ ಸ್ಕಿಲ್ ತರಬೇತಿ ನೀಡಲು ನಿರ್ಧರಿಸಲಾಗಿದೆ. ಇಟಿಎಂ ವ್ಯವಸ್ಥೆಯಲ್ಲಿ ದಾಖಲಾಗದ ಬಸ್ ಶೆಲ್ಟರ್‌ಗಳನ್ನು ಗುರುತಿಸಿ ಅವುಗಳನ್ನು ಸೇರಿಸುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಮೂಲಕ ಬಿಎಂಟಿಸಿ ಪ್ರಯಾಣಿಕರ ಸುರಕ್ಷತೆ ಮತ್ತು ಉತ್ತಮ ಸಂಚಾರ ಅನುಭವಕ್ಕೆ ಆದ್ಯತೆ ನೀಡುತ್ತಿದೆ.








