ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವ ಗ್ರಾಹಕರಿಗೆ ಇಂಧನ ಇಲಾಖೆಯು ಮಹತ್ವದ ಎಚ್ಚರಿಕೆಯೊಂದನ್ನು ನೀಡಿದೆ. ಇನ್ನು ಮುಂದೆ ಮನೆ ಮನೆಗೆ ಬರುವ ಸಮೀಕ್ಷಾ ತಂಡಕ್ಕೆ ತಮ್ಮ ವೈಯಕ್ತಿಕ ದಾಖಲೆಗಳನ್ನು ನೀಡಲು ನಿರಾಕರಿಸುವ ಗ್ರಾಹಕರಿಗೆ ಸಿಗುತ್ತಿದ್ದ ಉಚಿತ ವಿದ್ಯುತ್ ಸೌಲಭ್ಯವು ತಕ್ಷಣದಿಂದಲೇ ಸ್ಥಗಿತಗೊಳ್ಳಲಿದೆ.
ಆಪ್ಟ್ ಔಟ್ ಆಯ್ಕೆಯೊಂದಿಗೆ ಹೊಸ ನಿಯಮ ಜಾರಿ
ಗೃಹ ಜ್ಯೋತಿ ಯೋಜನೆಯ ಅರ್ಹತೆಯನ್ನು ಮರು ಪರಿಶೀಲಿಸಲು ಇಂಧನ ಇಲಾಖೆಯು ಮನೆ ಮನೆ ಸಮೀಕ್ಷೆ ನಡೆಸುತ್ತಿದೆ. ಈ ಪರಿಶೀಲನಾ ನಮೂನೆಯಲ್ಲಿ ಆಪ್ಟ್ ಔಟ್ (ಹೊರಗುಳಿಯುವ) ಎಂಬ ಹೊಸ ಆಯ್ಕೆಯನ್ನು ಸೇರಿಸಲಾಗಿದೆ. ಇದರ ಪ್ರಕಾರ, ಯಾವುದೇ ಗ್ರಾಹಕರು ತಮ್ಮ ವೈಯಕ್ತಿಕ ಮಾಹಿತಿಯನ್ನು ನೀಡಲು ಇಷ್ಟವಿಲ್ಲದಿದ್ದರೆ ಈ ಆಯ್ಕೆಯನ್ನು ಬಳಸಿಕೊಳ್ಳಬಹುದು. ಆದರೆ, ಈ ರೀತಿ ಮಾಹಿತಿ ನೀಡಲು ನಿರಾಕರಿಸುವ ಗ್ರಾಹಕರು ಸರ್ಕಾರ ನೀಡುತ್ತಿರುವ ಉಚಿತ ವಿದ್ಯುತ್ ಸೌಲಭ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ.
ದಾಖಲೆ ನೀಡಲು ಸಾರ್ವಜನಿಕರ ಹಿಂಜರಿಕೆ
ಸಮೀಕ್ಷೆಯ ವೇಳೆ ಮೀಟರ್ ರೀಡರ್ಗಳು ಮನೆಗೆ ಬಂದಾಗ, ಸಾರ್ವಜನಿಕರು ತಮ್ಮ ಆಧಾರ್ ಕಾರ್ಡ್, ವೋಟರ್ ಐಡಿ ಸೇರಿದಂತೆ ಪ್ರಮುಖ ದಾಖಲೆಗಳನ್ನು ನೀಡಲು ತೀವ್ರ ಹಿಂಜರಿಕೆ ವ್ಯಕ್ತಪಡಿಸುತ್ತಿದ್ದರು. ಖಾಸಗಿತನದ ಭದ್ರತೆಯ ದೃಷ್ಟಿಯಿಂದ ಜನರು ಮಾಹಿತಿ ಹಂಚಿಕೊಳ್ಳಲು ಹಿಂದೇಟು ಹಾಕುತ್ತಿರುವುದನ್ನು ಗಮನಿಸಿದ ಇಂಧನ ಇಲಾಖೆ, ಈಗ ನಮೂನೆಯಲ್ಲಿ ಭಾಗ 2 ಎಂಬ ಹೊಸ ಕಾಲಂ ಸೇರಿಸಿದೆ. ಮಾಹಿತಿ ನೀಡಲು ನಿರಾಕರಿಸುವವರು ಈ ಭಾಗದಲ್ಲಿ ಸಹಿ ಮಾಡಬೇಕಾಗುತ್ತದೆ.
ಸ್ವಯಂ ಘೋಷಣೆಯೇ ಸೌಲಭ್ಯಕ್ಕೆ ಕುತ್ತು
ಮಾಹಿತಿ ನೀಡದ ಗ್ರಾಹಕರು ಸಹಿ ಮಾಡಬೇಕಾದ ಫಾರ್ಮ್ನಲ್ಲಿ ಒಂದು ಕಠಿಣ ಸ್ವಯಂ ಘೋಷಣೆ ಇರಲಿದೆ. ನಾನು ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿದ ಸಮೀಕ್ಷೆಯಲ್ಲಿ ಭಾಗವಹಿಸಲು ಇಷ್ಟಪಡುವುದಿಲ್ಲ. ನನ್ನ ಮನೆಗೆ ಒದಗಿಸಲಾದ ವಿದ್ಯುತ್ ಸಂಪರ್ಕಕ್ಕೆ ಗೃಹ ಜ್ಯೋತಿ ಯೋಜನೆಯಡಿ ಸಿಗುವ ಸೌಲಭ್ಯಗಳನ್ನು ಸ್ಥಗಿತಗೊಳಿಸಲು ನನ್ನ ಯಾವುದೇ ಅಭ್ಯಂತರವಿಲ್ಲ ಎಂದು ಗ್ರಾಹಕರು ಒಪ್ಪಿಗೆ ನೀಡಬೇಕಾಗುತ್ತದೆ. ಈ ಮೂಲಕ ಉಚಿತ ವಿದ್ಯುತ್ ಬೇಡ ಎನ್ನುವವರು ಮಾತ್ರ ದಾಖಲೆ ನೀಡದೆ ಇರಲು ಅವಕಾಶವಿದೆ.
ಪರಿಶೀಲನಾ ನಮೂನೆಯಲ್ಲಿ ಒಟ್ಟು 11 ಪ್ರಮುಖ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಅವುಗಳೆಂದರೆ:
1. ಎಸ್ಕಾಂ ಹೆಸರು
2. ವಿದ್ಯುತ್ ಸಂಪರ್ಕದ ಖಾತೆ ಐಡಿ (Account ID)
3. ಫಲಾನುಭವಿಯ ಆಧಾರ್ ಸಂಖ್ಯೆ
4. ಆಧಾರ್ನಲ್ಲಿರುವಂತೆ ಹೆಸರು
5. ನೋಂದಾಯಿತ ಮೊಬೈಲ್ ಸಂಖ್ಯೆ
6. ಮಾಲೀಕರು ಅಥವಾ ಬಾಡಿಗೆದಾರರ ವಿವರ
7. ಪಡಿತರ ಚೀಟಿ ವರ್ಗ (APL/BPL)
8. ಮತದಾರರ ಗುರುತಿನ ಚೀಟಿ ಸಂಖ್ಯೆ (EPIC)
9. ಜಾತಿ ವರ್ಗ (ಐಚ್ಛಿಕ)
10. ಪ್ಯಾನ್ ಸಂಖ್ಯೆ (ಆದಾಯ ತೆರಿಗೆ ಪಾವತಿದಾರರಾಗಿದ್ದರೆ)
11. ವೃತ್ತಿಯ ವಿವರ
ಗಮನಿಸಬೇಕಾದ ಅಂಶವೆಂದರೆ, ಈ ಹಿಂದೆ ಕೇವಲ ಜಾತಿ ವಿವರಗಳನ್ನು ನೀಡಲು ಮಾತ್ರ ನಿರಾಕರಿಸುವ ಆಯ್ಕೆ ಇತ್ತು. ಆದರೆ ಈಗ ಇಡೀ ಸಮೀಕ್ಷೆಯಿಂದಲೇ ಹೊರಗುಳಿಯುವ ಆಯ್ಕೆಯನ್ನು ನೀಡಲಾಗಿದೆ. ಆದರೆ ಉಚಿತ ವಿದ್ಯುತ್ ಸೌಲಭ್ಯವನ್ನು ಮುಂದುವರಿಸಲು ಬಯಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಈ ಎಲ್ಲಾ ದಾಖಲೆಗಳನ್ನು ಒದಗಿಸುವುದು ಅನಿವಾರ್ಯವಾಗಿದೆ. ಒಂದು ವೇಳೆ ದಾಖಲೆ ನೀಡಲು ನಿರಾಕರಿಸಿದರೆ ಅಂತಹವರ ಖಾತೆಗಳಿಗೆ ಗೃಹ ಜ್ಯೋತಿ ಯೋಜನೆ ಅನ್ವಯವಾಗುವುದಿಲ್ಲ ಮತ್ತು ಅವರು ಪೂರ್ಣ ಪ್ರಮಾಣದ ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತದೆ.








