ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯ ಚರ್ಚೆ ಮತ್ತೆ ತೀವ್ರಗೊಂಡಿರುವ ನಡುವೆ, ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ್ ಅವರು ಸಚಿವ ಸ್ಥಾನಕ್ಕಾಗಿ ತಮ್ಮ ಆಕಾಂಕ್ಷೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ವಿಸ್ತರಣೆ ಕುರಿತ ಚರ್ಚೆಗಾಗಿ ದೆಹಲಿಗೆ ತೆರಳಿರುವ ಬೆನ್ನಲ್ಲೇ, ಸಚಿವ ಸ್ಥಾನಕ್ಕಾಗಿ ಹಲವು ಶಾಸಕರ ಲಾಬಿ ಚುರುಕುಗೊಂಡಿದೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ್ ಪಟ್ಟಣ್, ನಾನು ಸಚಿವ ಸ್ಥಾನದ ಆಕಾಂಕ್ಷಿ. ಈವರೆಗೆ ಜಾತಿ ಸಮೀಕರಣದ ಕಾರಣದಿಂದ ನನಗೆ ಅವಕಾಶ ಸಿಕ್ಕಿಲ್ಲ. ಈ ಬಾರಿ ನನಗೆ ಸಚಿವ ಸ್ಥಾನ ನೀಡಬೇಕು ಎಂದು ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ಸಚಿವ ಸಂಪುಟ ವಿಸ್ತರಣೆಯಲ್ಲಿ ಮೊದಲ ಆದ್ಯತೆಯಲ್ಲೇ ನನ್ನ ಹೆಸರನ್ನು ಪರಿಗಣಿಸುವಂತೆ ಕೇಳಿದ್ದೇನೆ. ಪಕ್ಷಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ನನ್ನ ಸೇವೆಯನ್ನು ಗುರುತಿಸಿ ಅವಕಾಶ ನೀಡುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಯಾವಾಗ ನಡೆಯಲಿದೆ ಮತ್ತು ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದರ ಕುರಿತು ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಆದರೆ, ಕಾಂಗ್ರೆಸ್ನಲ್ಲಿ ಸಚಿವ ಸ್ಥಾನಕ್ಕಾಗಿ ಹಲವು ಶಾಸಕರು ವರಿಷ್ಠರ ಭೇಟಿಯ ಮೂಲಕ ತಮ್ಮ ಬೇಡಿಕೆಯನ್ನು ಮುಂದಿರಿಸುತ್ತಿದ್ದು, ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ.







