ಕೋಟ್ಯಂತರ ಖಾಸಗಿ ವಲಯದ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್ಒ) 2025-26ನೇ ಹಣಕಾಸು ವರ್ಷದ ವಾರ್ಷಿಕ ಬಡ್ಡಿ ಹಣವನ್ನು ಚಂದಾದಾರರ ಖಾತೆಗೆ ಜಮೆ ಮಾಡುವ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದೆ. ಈ ಬಾರಿ ಶೇಕಡಾ 8.25 ರಷ್ಟು ಬಡ್ಡಿದರವನ್ನು ನಿಗದಿಪಡಿಸಲಾಗಿದ್ದು ಸುಮಾರು 34 ಕೋಟಿಗೂ ಅಧಿಕ ಪಿಎಫ್ ಖಾತೆಗಳಿಗೆ ಈ ಹಣ ವರ್ಗಾವಣೆಯಾಗುತ್ತಿದೆ.
ಒಟ್ಟು 1.44 ಲಕ್ಷ ಕೋಟಿ ರೂಪಾಯಿ ಬಡ್ಡಿ ಹಣವನ್ನು ಅರ್ಹ ಚಂದಾದಾರರ ಖಾತೆಗಳಿಗೆ ಏಕಕಾಲದಲ್ಲಿ ಜಮೆ ಮಾಡಲಾಗುತ್ತಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ. ನಿಮ್ಮ ಪಿಎಫ್ ಖಾತೆಗೆ ಬಡ್ಡಿ ಹಣ ಬಂದಿದೆಯೇ ಎಂಬುದನ್ನು ತಿಳಿಯಲು ಇಲ್ಲಿವೆ 4 ಸುಲಭ ಮಾರ್ಗಗಳು.
ಇಪಿಎಫ್ಒ ಪೋರ್ಟಲ್ ಮೂಲಕ ಪರಿಶೀಲನೆ
ಮೊದಲು ಇಪಿಎಫ್ಒ ಅಧಿಕೃತ ಪಾಸ್ಬುಕ್ ಪೋರ್ಟಲ್ ಭೇಟಿ ನೀಡಿ ನಿಮ್ಮ 12 ಅಂಕಿಯ ಯುಎಎನ್ ಸಂಖ್ಯೆ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಿ. ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ಗೆ ಬರುವ ಒಟಿಪಿ ನಮೂದಿಸಿದ ನಂತರ ಲಾಗಿನ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಅಲ್ಲಿ ವ್ಯೂ ವಿಭಾಗದಲ್ಲಿ ಪಾಸ್ಬುಕ್ ಲೈಟ್ ಆಯ್ಕೆ ಮಾಡುವ ಮೂಲಕ ನಿಮ್ಮ ಖಾತೆಗೆ ಬಂದಿರುವ ಬಡ್ಡಿ ಮೊತ್ತದ ವಿವರವನ್ನು ನೀವು ನೋಡಬಹುದು.
ಉಮಾಂಗ್ ಆಪ್ ಮೂಲಕ ಸುಲಭ ಲಾಗಿನ್
ಸ್ಮಾರ್ಟ್ಫೋನ್ ಬಳಕೆದಾರರು ಸರ್ಕಾರದ ಅಧಿಕೃತ ಉಮಾಂಗ್ ಆಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕವೂ ಬ್ಯಾಲೆನ್ಸ್ ತಿಳಿಯಬಹುದು. ಆಪ್ನಲ್ಲಿ ಇಪಿಎಫ್ಒ ಆಯ್ಕೆ ಮಾಡಿ ಎಂಪ್ಲಾಯಿ ಸೆಂಟ್ರಿಕ್ ಸರ್ವಿಸಸ್ ಅಡಿಯಲ್ಲಿ ವ್ಯೂ ಪಾಸ್ಬುಕ್ ಕ್ಲಿಕ್ ಮಾಡಿ. ನಿಮ್ಮ ಯುಎಎನ್ ಸಂಖ್ಯೆ ನಮೂದಿಸಿ ಬರುವ ಒಟಿಪಿ ದಾಖಲಿಸಿದರೆ ಇಡೀ ಪಾಸ್ಬುಕ್ ನಿಮ್ಮ ಮೊಬೈಲ್ ಪರದೆಯ ಮೇಲೆ ಲಭ್ಯವಾಗುತ್ತದೆ.
ಮಿಸ್ಡ್ ಕಾಲ್ ನೀಡಿ ಬ್ಯಾಲೆನ್ಸ್ ತಿಳಿಯಿರಿ
ಇಂಟರ್ನೆಟ್ ಸೌಲಭ್ಯ ಇಲ್ಲದವರೂ ಸಹ ಕೇವಲ ಒಂದು ಮಿಸ್ಡ್ ಕಾಲ್ ಮೂಲಕ ಮಾಹಿತಿ ಪಡೆಯಬಹುದು. ನಿಮ್ಮ ಯುಎಎನ್ ಸಂಖ್ಯೆಗೆ ನೋಂದಾಯಿತವಾಗಿರುವ ಮೊಬೈಲ್ ಸಂಖ್ಯೆಯಿಂದ 9966044425 ಗೆ ಕರೆ ಮಾಡಿ. ಕರೆ ತಾನಾಗಿಯೇ ಕಡಿತಗೊಂಡ ಕೆಲವೇ ಸೆಕೆಂಡುಗಳಲ್ಲಿ ಇಪಿಎಫ್ಒನಿಂದ ನಿಮ್ಮ ಫೋನ್ಗೆ ಸಂದೇಶ ಬರಲಿದ್ದು ಅದರಲ್ಲಿ ನಿಮ್ಮ ಒಟ್ಟು ಪಿಎಫ್ ಬ್ಯಾಲೆನ್ಸ್ ವಿವರ ಇರುತ್ತದೆ.
ಎಸ್ಎಂಎಸ್ ಮೂಲಕ ಕನ್ನಡದಲ್ಲೇ ಮಾಹಿತಿ ಪಡೆಯಿರಿ
ಚಂದಾದಾರರು ತಮ್ಮ ಮೊಬೈಲ್ನ ಮೆಸೇಜ್ ಬಾಕ್ಸ್ನಲ್ಲಿ ಇಪಿಎಫ್ಒಎಚ್ಒ ಯುಎಎನ್ ಕೆಎಎನ್ (EPFOHO UAN KAN) ಎಂದು ಟೈಪ್ ಮಾಡಿ 7738299899 ಸಂಖ್ಯೆಗೆ ಕಳುಹಿಸಿದರೆ ಕನ್ನಡ ಭಾಷೆಯಲ್ಲೇ ನಿಮ್ಮ ಖಾತೆಯ ವಿವರಗಳು ದೊರೆಯುತ್ತವೆ.
ಬಡ್ಡಿ ಹಣ ಜಮೆಯಾಗಲು ತಾಂತ್ರಿಕ ಕಾರಣಗಳಿಂದ ವಿಳಂಬವಾದರೂ ಚಂದಾದಾರರು ಆತಂಕಪಡುವ ಅಗತ್ಯವಿಲ್ಲ ಎಂದು ಇಪಿಎಫ್ಒ ಸ್ಪಷ್ಟಪಡಿಸಿದೆ. ಹಣ ತಡವಾಗಿ ಖಾತೆಯಲ್ಲಿ ಪ್ರತಿಫಲಿಸಿದರೂ ಸಹ ನಿಮ್ಮ ಮಾಸಿಕ ಚಾಲ್ತಿ ಬ್ಯಾಲೆನ್ಸ್ ಆಧಾರದ ಮೇಲೆ ಪೂರ್ಣ ಬಡ್ಡಿ ಮೊತ್ತವು ಸುರಕ್ಷಿತವಾಗಿ ಜಮೆಯಾಗುತ್ತದೆ. ಪಿಎಫ್ ಖಾತೆದಾರರು ಕೂಡಲೇ ಮೇಲಿನ ವಿಧಾನಗಳ ಮೂಲಕ ತಮ್ಮ ಬ್ಯಾಲೆನ್ಸ್ ಪರಿಶೀಲಿಸಿಕೊಳ್ಳಬಹುದಾಗಿದೆ.








