ಬೆಂಗಳೂರು: ಬಿಜೆಪಿ ಶಾಸಕ ಬಿಪಿ ಹರೀಶ್ ಅವರ ಮೇಲೆ ನಡೆದ ಮೊಟ್ಟೆ ಎಸೆತ ಪ್ರಕರಣ ಈಗ ರಾಜ್ಯ ರಾಜಕೀಯದಲ್ಲಿ ಹೊಸ ಕಿಚ್ಚು ಹಚ್ಚಿದೆ. ಈ ಘಟನೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. ಈ ವೇಳೆ ಅವರು ನೀಡಿರುವ ಹೇಳಿಕೆಗಳು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿವೆ.
ಮೊಟ್ಟೆ ಸಂಸ್ಕೃತಿಯ ಹರಿಕಾರರು ಯಾರು?
ಮೊಟ್ಟೆ ಎಸೆಯುವ ಸಂಸ್ಕೃತಿಯ ಬಗ್ಗೆ ಮಾತನಾಡಿರುವ ಹರಿಪ್ರಸಾದ್, ಮೊಟ್ಟೆ ಮತ್ತು ಚಪ್ಪಲಿ ಎಸೆಯುವ ಸಂಸ್ಕೃತಿಯನ್ನು ರಾಜ್ಯಕ್ಕೆ ಪರಿಚಯಿಸಿದ್ದೇ ಬಿಜೆಪಿ ಎಂದು ಕಿಡಿಕಾರಿದ್ದಾರೆ. ಹಿಂದೆ ಮಡಿಕೇರಿಯಲ್ಲಿ ನಾಡಿನ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದವರು ಯಾರು? ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆದವರು ಯಾರು? ಈ ಪಟ್ಟಿಯನ್ನು ಬಿಡುಗಡೆ ಮಾಡಿದರೆ ಬಿಜೆಪಿಯ ಅಸಲಿ ಮುಖ ಬಯಲಾಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.
ಬ್ಲಾಕ್ ಟಿಕೆಟ್ ಹಿಸ್ಟರಿ ಮತ್ತು ಬಿರಿಯಾನಿ ಹೋಟೆಲ್
ಬಿಜೆಪಿ ನಾಯಕರ ಭೂತಕಾಲವನ್ನು ಕೆದಕಿದ ಹರಿಪ್ರಸಾದ್, ಹಿಂದೆ ಎಚ್ಎಂಟಿ ಕಾರ್ಖಾನೆ ಬಳಿಯ ಚಿತ್ರಮಂದಿರಗಳಲ್ಲಿ ಬ್ಲಾಕ್ ಟಿಕೆಟ್ ಮಾರಿ ಜೀವನ ಸಾಗಿಸುತ್ತಿದ್ದವರೆಲ್ಲಾ ಇಂದು ಬಿಜೆಪಿ ನಾಯಕರಾಗಿದ್ದಾರೆ ಎಂದು ಲೇವಡಿ ಮಾಡಿದರು. ಅಲ್ಲದೆ, ವಿದ್ಯಾಸಂಸ್ಥೆ ಕಟ್ಟುತ್ತೇವೆ ಎಂದು ಸರ್ಕಾರದಿಂದ ಜಾಗ ಪಡೆದು ಅಲ್ಲಿ ದಮ್ ಬಿರಿಯಾನಿ ಹೋಟೆಲ್ ತೆರೆದ ಸಂಸ್ಕೃತಿ ಬಿಜೆಪಿಯದ್ದು. ಆದರೆ ಕಾಂಗ್ರೆಸ್ ತನ್ನ ಸ್ವಂತ ಜಾಗದಲ್ಲಿ ಕಚೇರಿಗಳನ್ನು ನಿರ್ಮಿಸುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ಅವರು ವಿದೇಶಕ್ಕೆ ಹೋದರೆ ಅಲ್ಲಿನ ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ಭಾಷಣ ಮಾಡುತ್ತಾರೆ. ಆದರೆ ಪ್ರಧಾನಿ ಮೋದಿ ಅವರು ವಿದೇಶಕ್ಕೆ ಹೋದಾಗ ಯಾವ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಹರಿಪ್ರಸಾದ್ ಪ್ರಶ್ನಿಸಿದರು. ಬಿಜೆಪಿಯವರಿಗೆ ತುಕಡೆ ಗ್ಯಾಂಗ್ ಎನ್ನುವ ನೈತಿಕತೆ ಇಲ್ಲ ಎಂದು ಅವರು ಗುಡುಗಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರ ಬಗ್ಗೆ ಅತ್ಯಂತ ಕಟುವಾಗಿ ಮಾತನಾಡಿದ ಹರಿಪ್ರಸಾದ್, ಅಶೋಕ ಅವರಿಗೆ ಏನಾಗಿದೆ ಎಂದು ಗೊತ್ತಿಲ್ಲ. ಹಿಂದೆ ಕೊತ್ವಾಲ್ ರಾಮಚಂದ್ರನ ಶಿಷ್ಯನೊಬ್ಬ ಅಶೋಕ ಅವರಿಗೆ ಏಡ್ಸ್ ಇಂಜೆಕ್ಷನ್ ಚುಚ್ಚಿದ್ದ ಎನ್ನಲಾಗಿದೆ, ಆ ಕಾರಣಕ್ಕಾಗಿಯೇ ಅವರಿಗೆ ಬುದ್ಧಿ ಭ್ರಮಣೆಯಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಆರ್ಎಸ್ಎಸ್ ಮತ್ತು ಬಿಜೆಪಿ ಕಚೇರಿಗಳ ಬಗ್ಗೆಯೂ ಗಂಭೀರ ಆರೋಪ ಮಾಡಿರುವ ಬಿ ಕೆ ಹರಿಪ್ರಸಾದ್, ಕೇರಳದ ಕಣ್ಣೂರಿನಲ್ಲಿ ಬಿಜೆಪಿ ಮತ್ತು ಸಂಘದ ಕಚೇರಿಗಳಲ್ಲಿ ಬಾಂಬ್ ತಯಾರಿಕಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನಾನು ನೀಡಲು ಸಿದ್ಧನಿದ್ದೇನೆ. ಕಾಂಗ್ರೆಸ್ ಕಚೇರಿಯಲ್ಲಿ ಗಾಂಧಿ ಟೋಪಿ ಮತ್ತು ಬಾವುಟಗಳು ಮಾತ್ರ ಸಿಗುತ್ತವೆ, ಆದರೆ ಬಿಜೆಪಿ ಕಚೇರಿಗಳಲ್ಲಿ ಸಿಗುವುದೇ ಬೇರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಒಟ್ಟಿನಲ್ಲಿ ಬಿ ಕೆ ಹರಿಪ್ರಸಾದ್ ಅವರ ಈ ಸರಣಿ ವಾಗ್ದಾಳಿಗಳು ಈಗ ರಾಜ್ಯ ರಾಜಕೀಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿವೆ.







