ನವದೆಹಲಿ: ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ಸಿಡಿದೆದ್ದಿರುವ ಕಾಕ್ರೋಚ್ ಜನತಾ ಪಾರ್ಟಿ ಅಲಿಯಾಸ್ ಸಿಜೆಪಿ ನಡೆಸಿದ ನಿರಂತರ ಹೋರಾಟಕ್ಕೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಬಲಿಯಾಗಿದ್ದಾರೆ. ಸಚಿವರ ರಾಜೀನಾಮೆಯ ಬೆನ್ನಲ್ಲೇ ಇಡೀ ದೇಶದ ಗಮನ ಸೆಳೆದಿರುವ ಈ ವಿದ್ಯಾರ್ಥಿ ಸಂಘಟನೆಯ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ನುಡಿದಿರುವ ಸ್ಫೋಟಕ ಭವಿಷ್ಯ ಈಗ ಸಂಚಲನ ಮೂಡಿಸಿದೆ.
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೂರಕ್ಕೆ ನೂರರಷ್ಟು ರಾಜೀನಾಮೆ ನೀಡಲಿದ್ದಾರೆ ಎಂದು ವೇಣು ಸ್ವಾಮಿ ಈ ಮೊದಲೇ ಭವಿಷ್ಯ ನುಡಿದಿದ್ದರು. ಅದರಂತೆಯೇ ಇಂದು ಸಚಿವರು ತಮ್ಮ ಸ್ಥಾನಕ್ಕೆ ಬಿಡುಗಡೆ ಘೋಷಿಸಿರುವುದು ವೇಣು ಸ್ವಾಮಿ ಅವರ ಭವಿಷ್ಯಕ್ಕೆ ಪುಷ್ಟಿ ನೀಡಿದೆ. ಇದರ ಬೆನ್ನಲ್ಲೇ ಸಿಜೆಪಿ ಪಕ್ಷದ ಕುಂಡಲಿ ವಿಶ್ಲೇಷಿಸಿರುವ ಅವರು, ಮುಂಬರುವ ದಿನಗಳಲ್ಲಿ ಈ ಸಂಘಟನೆ ಆಡಳಿತಾರೂಢ ಬಿಜೆಪಿ ಮತ್ತು ಪ್ರಧಾನಿ ಮೋದಿಯವರಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ ಎಂದು ಹೇಳಿದ್ದಾರೆ.
ವೇಣು ಸ್ವಾಮಿ ಅವರ ವಿಶ್ಲೇಷಣೆಯ ಪ್ರಕಾರ, ಸಿಜೆಪಿ ಪಕ್ಷದ ಕುಂಡಲಿಯು ಸಿಂಹ ಲಗ್ನದಲ್ಲಿದೆ. ಸೂರ್ಯ ಮತ್ತು ಬುಧ ಏಳನೇ ಮನೆಯಲ್ಲಿ ಸೇರಿರುವುದರಿಂದ ಬುಧಾದಿತ್ಯ ಯೋಗ ಸೃಷ್ಟಿಯಾಗಿದೆ. ಇದೇ ಕಾರಣಕ್ಕೆ ಈ ಸಂಘಟನೆ ಅತ್ಯಂತ ಕಡಿಮೆ ಸಮಯದಲ್ಲಿ ದೇಶವ್ಯಾಪಿ ಇಷ್ಟೊಂದು ದೊಡ್ಡ ಮಟ್ಟದ ಕ್ರೇಜ್ ಪಡೆದುಕೊಂಡಿದೆ. ಅಕ್ಟೋಬರ್ 31, 2026 ರವರೆಗೆ ಈ ಸಂಘಟನೆಯ ಹವಾ ತೀವ್ರವಾಗಿರಲಿದ್ದು, ಹತ್ತನೇ ಮನೆಯಲ್ಲಿರುವ ರಾಹು ಪ್ರಬಲ ರಾಜಯೋಗವನ್ನು ಸೂಚಿಸುತ್ತಿದ್ದಾನೆ. ಇದು ಯಾವುದೇ ಪಕ್ಷವನ್ನು ಅಧಿಕಾರಕ್ಕೆ ತರುವ ಅಥವಾ ಅಧಿಕಾರದಿಂದ ಕೆಳಗಿಳಿಸುವ ಶಕ್ತಿಯನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ಸಿಜೆಪಿಯನ್ನು ಬಲವಂತವಾಗಿ ಅಥವಾ ಆಕ್ರಮಣಕಾರಿಯಾಗಿ ಹತ್ತಿಕ್ಕಲು ಪ್ರಯತ್ನಿಸಿದರೆ ಅದು ಸರ್ಕಾರಕ್ಕೇ ತಿರುಗುಬಾಣವಾಗಲಿದೆ ಎಂದು ವೇಣು ಸ್ವಾಮಿ ಎಚ್ಚರಿಸಿದ್ದಾರೆ. ರಾಹು ಮತ್ತು ಶನಿಯ ಸ್ಥಾನಗಳು ಈ ಸಂಘಟನೆಗೆ ಹೆಚ್ಚಿನ ಬಲ ನೀಡುತ್ತಿವೆ. ಆದರೆ, ಇದೇ ವೇಳೆ ಒಂದು ಆಘಾತಕಾರಿ ಭವಿಷ್ಯವನ್ನೂ ನುಡಿದಿರುವ ಅವರು, ಸಿಜೆಪಿಯ ಮೂವರು ಪ್ರಮುಖ ನಾಯಕರು ಜೈಲಿಗೆ ಹೋಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಅಲ್ಲದೆ, ಈ ಸಂಘಟನೆಯ ನಾಯಕರು ಧರ್ಮ ಮತ್ತು ಶಾಸ್ತ್ರಗಳ ವಿರುದ್ಧವಾಗಿ ನಡೆದುಕೊಳ್ಳುವ ಸಾಧ್ಯತೆ ಇದ್ದು, ಇದು ಆಡಳಿತ ಪಕ್ಷಕ್ಕೆ ದೊಡ್ಡ ಮಟ್ಟದ ರಾಜಕೀಯ ನಷ್ಟ ಉಂಟುಮಾಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಇನ್ನೊಂದೆಡೆ, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯಿಂದ ಸಿಜೆಪಿ ತೃಪ್ತವಾಗಿಲ್ಲ. ಪರೀಕ್ಷಾ ಅಕ್ರಮದ ಗೊಂದಲದಿಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಮತ್ತು ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ಎಸಗಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ತಮ್ಮ ಬಾಕಿ ಇರುವ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮುಂದುವರಿಸುವುದಾಗಿ ಸಿಜೆಪಿ ಘೋಷಿಸಿದೆ.
ಒಟ್ಟಾರೆಯಾಗಿ, ಒಂದೆಡೆ ವಿದ್ಯಾರ್ಥಿಗಳ ಹೋರಾಟ ಮತ್ತು ಇನ್ನೊಂದೆಡೆ ವೇಣು ಸ್ವಾಮಿ ಅವರ ಸ್ಫೋಟಕ ಭವಿಷ್ಯಗಳು ಕೇಂದ್ರ ಸರ್ಕಾರದ ನಿದ್ದೆಗೆಡಿಸಿವೆ.








