ಏಳರ ಹರೆಯದಲ್ಲಿ ಶುರುವಾಗಿತ್ತು ಕ್ರಿಕೆಟ್ ಮೇಲಿನ ಆಕರ್ಷಣೆ. 17 ನೇ ಹರೆಯದವರೆಗೆÀ ಮಾಡಿದ್ದು ಬರೀ ಆಲೋಚನೆ. 23ರ ಪ್ರಾಯದ ತನಕ ಮಾಡ್ತಾ ಇದ್ದದ್ದು ಆರಾಧನೆ. 35 ವರ್ಷಗಳವರೆಗೆ ವಿಶ್ವ ಕ್ರಿಕೆಟ್ನಲ್ಲಿ ಮಾಡಿರುವುದು ಹಿತವಾದ ಆಲಾಪನೆ. ಇದೀಗ 38ನೇ ವಯಸ್ಸಿನಲ್ಲಿ ಮೂಡಿದ್ದು ವೃತ್ತಿ ಬದುಕಿಗೆ ವಿದಾಯ ಹೇಳುವ ಯೋಚನೆ. ಇತಿಹಾಸ ಪುಟಗಳಲ್ಲಿ ದಾಖಲಾಗಿದೆ 15 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ನ ಹೆಜ್ಜೆಗುರುತಿನ ಸಾಧನೆ
ಹೌದು, ಕ್ರಿಕೆಟ್ ಬದುಕಿನ ಪ್ರಮುಖ ಐದು ಘಟ್ಟಗಳನ್ನು ದಾಟಿ, ಈಗ ನಿವೃತ್ತಿ ಘೋಷಣೆ ಮಾಡಿದ್ದ ಆಟಗಾರನ ಹೆಸರು ಅಜಿಂಕ್ಯಾ ರಹಾನೆ.
ರಹಾನೆಗೆ ಬುದ್ಧಿ ಬರುವಾಗಲೇ ಭಾರತದಲ್ಲಿ ಕ್ರಿಕೆಟ್ ಅನ್ನೋದು ಧರ್ಮವಾಗಿ ಪಸರಿಸಿತ್ತು. ಆದ್ರೆ ಮುಂಬೈನ ಥಾಣೆಯ ಡೊಂಬಿವಲಿಯಲ್ಲಿ ಹುಟ್ಟಿ ಬೆಳೆದ ಅಜಿಂಕ್ಯಾ ರಹಾನೆಗೆ ಕ್ರಿಕೆಟಿಗನಾಗುವುದು ಗಗನ ಕುಸುಮವಾಗಿತ್ತು. ಆದ್ರೂ ಅಜಿಂಕ್ಯಾ ತಂದೆ ಬಾಬು ರಾವ್ ರಹಾನೆ ಮಗನ ಕ್ರಿಕೆಟ್ ಮೇಲಿನ ಪ್ರೀತಿಯನ್ನು ಚಿವುಟಿ ಹಾಕಲಿಲ್ಲ.
ಏಳರ ಹರೆಯದಲ್ಲೇ ಕ್ರಿಕೆಟ್ ಅಕಾಡೆಮಿಗೆ ಸೇರಿದಾಗ, ಅಜಿಂಕ್ಯಾ ರಹಾನೆಗೆ ಭವಿಷ್ಯದ ಟೀಮ್ ಇಂಡಿಯಾದ ಆಟಗಾರನಾಗಬೇಕು ಅನ್ನೋ ಆಸೆÉ ಮೂಡಿತ್ತು. ಆದ್ರೆ ರಹಾನೆಗೆ ಸರಿಯಾದ ಮಾರ್ಗದರ್ಶನ ಸಿಗಲಿಲ್ಲ. ಇದ್ರಿಂದ ಕ್ರಿಕೆಟಿಗನಾಗಬೇಕು ಅನ್ನೋ ಆಸೆ ಕೇವಲ ಆಕರ್ಷಣೆ ಹಾಗೂ ಆಲೋಚನೆಗೆ ಸೀಮಿತವಾಯ್ತು.
ಆದ್ರೆ ವಿಧಿ ಬರೆಹ ಬೇರೆನೇ ಇತ್ತು. 17ನೇ ಹರೆಯದಲ್ಲಿ ಅಜಿಂಕ್ಯಾ ರಹಾನೆಯ ಪ್ರತಿಭೆಯನ್ನು ಭಾರತದ ಮಾಜಿ ಆಟಗಾರ ಪ್ರವೀಣ್ ಆಮ್ರೆ ಗುರುತಿಸಿದ್ರು. ಜತೆಗೆ ತರಬೇತಿಯನ್ನು ನೀಡಿದ್ರು. ನಂತರ ಅಜಿಂಕ್ಯಾ ಹಿಂತಿರುಗಿ ನೋಡಲೇ ಇಲ್ಲ.
ದಿಗ್ಗಜರ ನೆರಳಿನಲ್ಲಿ ಪಳಗಿದ ರಹಾನೆ..!
ಕ್ರಿಕೆಟ್ ಆಟವನ್ನು ದಿನವಿಡಿ ಆರಾಧನೆ ಮಾಡಿದ್ರು. ಕ್ರಿಕೆಟ್ ದಿಗ್ಗಜರ ನೆರಳಿನಲ್ಲಿ ಹೆಜ್ಜೆಯನ್ನಿಟ್ಟುಕೊಂಡು ಮುನ್ನಡೆದ್ರು. ಅದ್ರಲ್ಲೂ ದ್ರಾವಿಡ್ ಮತ್ತು ಲಕ್ಷ್ಮಣ್ ಆಟದ ಶೈಲಿಯನ್ನು ಪರವಶ ಮಾಡಿಕೊಂಡ್ರು. 19 ವಯೋಮಿತಿ ತಂಡದಲ್ಲಿ ಸ್ಥಾನ ಪಡೆದು ಶತಕದ ಮೇಲೆ ಶತಕ ಸಿಡಿಸಿದ್ರು. ಪರಿಣಾಮ ಮುಂಬೈ ರಣಜಿ ತಂಡಕ್ಕೂ ಸೇರ್ಪಡೆಯಾದ್ರು.
2007ರ ರಣಜಿ ಋತುವಿನಲ್ಲಿ ಅಜಿಂಕ್ಯಾ ರಹಾನೆಯ ಆಟಕ್ಕೆ ದೇಸಿ ಬೌಲರ್ಗಳು ಕೂಡ ಮನ ಸೋತಿದ್ರು. ತಾಂತ್ರಿಕವಾಗಿ ಹಾಗೂ ರಕ್ಷಣಾತ್ಮಕ ಆಟದ ಮೂಲಕ ಗಮನ ಸೆಳೆದ ರಹಾನೆ, ದುಲೀಪ್ ಟ್ರೋಫಿ ಇರಾನಿ ಟ್ರೋಫಿ ಟೂರ್ನಿಗಳಲ್ಲಿ ರನ್ ಮಳೆ ಸುರಿಸಿದ್ರು.
ದೇಸಿ ಕ್ರಿಕೆಟ್ನಲ್ಲಿ ರನ್ ಮೆಷಿನ್ ಎಂದೇ ಖ್ಯಾತಿ ಪಡೆದಿದ್ದ ರಹಾನೆ, 2011ರ ಇಂಗ್ಲೆಂಡ್ ವಿರುದ್ಧದ ನ್ಯಾಟ್ವೆಸ್ಟ್ ಸರಣಿಗೆ ಆಯ್ಕೆಯಾದ್ರು. ಜತೆಗೆ ವೆಸ್ಟ್ ಇಂಡಿಸ್ ವಿರುದ್ಧದ ಟೆಸ್ಟ್ ಸರಣಿಗೂ ಆಯ್ಕೆಯಾದ್ರು. ಹೀಗೆ ಅಜಿಂಕ್ಯಾ ರಹಾನೆ, ಕ್ರಿಕೆಟ್ ಆಕರ್ಷಣೆ, ಆಲೋಚನೆ, ಆರಾಧನೆಯೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ರೂಪುಗೊಂಡ್ರು.
ಆದ್ರೆ ಅಜಿಂಕ್ಯಾ ರಹಾನೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಲಾಪನೆ ಮಾಡಲು ಸಾಕಷ್ಟು ಸಮಯಬೇಕಾಯ್ತು. ಹಿರಿಯ ಆಟಗಾರರ ಒಡ್ಡೋಲಗದಿಂದಾಗಿ ರಹಾನೆಗೆ ಹೆಚ್ಚು ಅವಕಾಶಗಳು ಸಿಗುತ್ತಿರಲಿಲ್ಲ. 11ರ ಬಳಗದಲ್ಲಿ ಕಾಣಿಸಿಕೊಳ್ಳುವುದು ಅಪರೂಪವೇ ಆಗಿತ್ತು. ಆದ್ರೂ ರಹಾನೆ ತಲೆಕೆಡಿಸಿಕೊಳ್ಳಲಿಲ್ಲ. ಹಿರಿಯ ಆಟಗಾರರ ಮಾರ್ಗದರ್ಶನ, ಸಲಹೆಗಳನ್ನು ಕೇಳಸಿಕೊಂಡ್ರು. ನೆಟ್ ಅಭ್ಯಾಸಗಳು ರಹಾನೆಯ ಮನೋಬಲವನ್ನು ಹೆಚ್ಚಿಸಿದ್ದವು. ಜತೆಗೆ ಟಿ-ಟ್ವೆಂಟಿ, ಐಪಿಎಲ್ ಟೂರ್ನಿಗಳು ರಹಾನೆಯ ಆತ್ಮ ವಿಶ್ವಾಸವನ್ನು ಇಮ್ಮಡಿಗೊಳಿಸಿದ್ದವು.
ಇನ್ನು, ದೇಸಿ ಪಂದ್ಯಗಳಲ್ಲಿ ಹಾಗೂ ಏಕದಿನ ಕ್ರಿಕೆಟ್ನಲ್ಲಿ ಗಮನ ಸೆಳೆದಿದ್ದ ಅಜಿಂಕ್ಯಾ ರಹಾನೆಗೆ ಕೊನೆಗೂ ಟೆಸ್ಟ್ ಕ್ಯಾಪ್ ಧರಿಸುವ ಅವಕಾಶ ಸಿಕ್ಕಿಬಿಟ್ಟಿತ್ತು, ಸುಮಾರು 16 ತಿಂಗಳ ಕಾಯುವಿಕೆಗೆ ಫಲ ಸಿಕ್ಕಿತ್ತು. 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ದೆಹಲಿಯಲ್ಲಿ ಅಜಿಂಕ್ಯಾ ರಹಾನೆ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ರು. ಆದ್ರೆ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ರಹಾನೆ ನಿರಾಸೆ ಮೂಡಿಸಿದ್ರು. ಆದ್ರೂ ರಹಾನೆ ಆತ್ಮವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ.
ಆರಂಭದಲ್ಲಿ 12ನೇ ಆಟಗಾರನಾಗಿ ಡ್ರಿಂಕ್ಸ್ ತೆಗೆದುಕೊಂಡು ಹೋಗುತ್ತಿದ್ದ ಆಟಗಾರ, ಡ್ರೆಸಿಂಗ್ ರೂಂನಲ್ಲೇ ಹೆಚ್ಚು ಸಮಯ ಕಾಲ ಕಳೆಯುತ್ತಿದ್ದ ಆಟಗಾರ, ನೆಟ್ಸ್ ಅಭ್ಯಾಸಕ್ಕೆ ಸೀಮಿತವಾಗಿದ್ದ ಆಟಗಾರನಾಗಿದ್ದ ರಹಾನೆ, 2013ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತದ ಮಾನ ಕಾಪಾಡಿದ್ರು.
ಸಿಕ್ಕ ಅವಕಾಶವನ್ನು ರಹಾನೆ ಬಳಸಿಕೊಂಡ ರೀತಿಗೆ ಕ್ರಿಕೆಟ್ ಜಗತ್ತು ಕೂಡ ಅಚ್ಚರಿಗೊಂಡಿತ್ತು. ಹರಿಣಗಳ ವೇಗದ ಪಿಚ್ನಲ್ಲಿ ಆಡಿದ ರೀತಿ ಕೂಡ ಕ್ರಿಕೆಟ್ ಪಂಡಿತರನ್ನು ಚಕಿತಗೊಳಿಸಿತ್ತು. ಹೀಗೆ ವಿದೇಶಿ ನೆಲದಲ್ಲಿ ತನ್ನ ಸವಾರಿಯನ್ನು ಆರಂಭಿಸಿದ್ದ ರಹಾನೆ ಪಂದ್ಯದಿಂದ ಪಂದ್ಯಕ್ಕೆ ಪರಿಪಕ್ವತೆಯನ್ನು ಪಡೆದುಕೊಂಡ್ರು.
2014ರಲ್ಲಿ ನ್ಯೂಜಿಲೆಂಡ್ನ ಬೌನ್ಸಿ ಪಿಚ್ನಲ್ಲೂ ಟೀಮ್ ಇಂಡಿಯಾದ ಮರ್ಯಾದೆ ಉಳಿಸಿದ್ದು ಕೂಡ ರಹಾನೆಯೇ. ವೆಲ್ಲಿಂಗ್ಟನ್ ಟೆಸ್ಟ್ ನಲ್ಲಿ ಚೊಚ್ಚಲ ಟೆಸ್ಟ್ ಶತಕದ ರುಚಿಕಂಡ್ರು. ನಂತ್ರ ಇಂಗ್ಲೆಂಡ್ ಸರಣಿಯ ವೇಳೆಯಲ್ಲೂ ಟೀಮ್ ಇಂಡಿಯಾ ಸಂಕಷ್ಟದಲ್ಲಿದ್ದಾಗ ಶತಕ ಸಿಡಿಸಿ ತಂಡಕ್ಕೆ ಚೇತರಿಕೆ ನೀಡಿದ್ರು. ಆನಂತರ 2015 ಲಂಕಾ ಸರಣಿಯಲ್ಲೂ ರಹಾನೆ ತನ್ನ ಬ್ಯಾಟ್ ಅನ್ನು ಝಳಪಿಸಿ, ಟೀಮ್ ಇಂಡಿಯಾದ ಆಪತ್ಭಾಂದವರಾದ್ರು.
ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ರನ್ ಗಳಿಸಲು ಒದ್ದಾಟ ನಡೆಸಿತ್ತು. ಆದ್ರೆ ದೆಹಲಿ ಟೆಸ್ಟ್ ಪಂದ್ಯದಲ್ಲಿ ಸತತ ಎರಡು ಇನ್ಸಿಂಗ್ಸ್ ಗಳಲ್ಲೂ ಶತಕ ಸಿಡಿಸಿದ್ದ ಭಾರತದ ಐದನೇ ಆಟಗಾರನಾಗಿ ಹೊರಹೊಮ್ಮಿದ್ರು.
ಅಂದ ಹಾಗೇ, ಅಜಿಂಕ್ಯಾ ರಹಾನೆ ಅದ್ಭುತ ಫೀಲ್ಡರ್ ಕೂಡ ಹೌದು. ಚಿಗರೆಯಂತೆ ಜಿಗಿದು ಕ್ಯಾಚ್ ಹಿಡಿಯುವ ರಹಾನೆ, ಲಂಕಾ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಏಳು ಕ್ಯಾಚ್ ಹಿಡಿದು ವಿಶ್ವ ದಾಖಲೆ ಕೂಡ ಬರೆದಿದ್ದಾರೆ. ಅದ್ರಲ್ಲೂ ಸ್ಲಿಪ್ ಮತ್ತು ಗಲ್ಲಿಗಳಲ್ಲಿ ಅದ್ಭುತ ಕ್ಷೇತ್ರ ರಕ್ಷಣೆ ಮಾಡುವ ರಹಾನೆ ಅಂದ್ರೆ ಕೊಹ್ಲಿಗೆ ಎಲ್ಲಿಲ್ಲದ ಅಕ್ಕರೆ. ಹಾಗಾಗಿಯೇ ರಹಾನೆ ನನ್ನ ಬೆಸ್ಟ್ ಟೆಸ್ಟ್ ಪಾಟ್ನರ್ ಅಂತ ಕೊಹ್ಲಿ ಹೇಳಿಕೊಂಡಿದ್ದಾರೆ.
ನಿಜ, ಲಕ್ಷ್ಮಣ್, ದ್ರಾವಿಡ್ ನಂತರ ಟೀಮ್ ಇಂಡಿಯಾದ ಕಲಾತ್ಮಕತೆಯ ಆಟಕ್ಕೆ ಅಜಿಂಕ್ಯಾ ರಹಾನೆ ಭರವಸೆಯ ಬೆಳಕಾಗಿದ್ರು. ಮಧ್ಯಮ ಕ್ರಮಾಂಕದಲ್ಲಿ ಪ್ರಖರವಾಗಿ ಹೊಳೆಯುವ ಬ್ಯಾಟ್ಸ್ಮೆನ್ ಆಗಿದ್ದರು. ಮೂರು ಮಾದರಿಯ ಆಟದಲ್ಲೂ ನಿಖರತೆಯನ್ನು ಕಾಯ್ದುಕೊಂಡಿರುವ ಆಟಗಾರನಾಗಿದ್ದರು. ಬದ್ಧತೆ, ಪರಿಶ್ರಮ, ಕ್ರಿಕೆಟ್ ಮೇಲಿನ ಪ್ರೀತಿಯಿಂದ ಅಜಿಂಕ್ಯಾ ರಹಾನೆ ವಿಶ್ವ ಕ್ರಿಕೆಟ್ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ರು.
.
ಏನೇ ಇರಲಿ, ಆಧುನಿಕ ಕ್ರಿಕೆಟ್ನಲ್ಲಿ ಅಜಿಂಕ್ಯಾ ರಹಾನೆಯ ಬ್ಯಾಟಿಂಗ್ನಲ್ಲಿ ಗತ ಕಾಲದ ಕಲಾತ್ಮಕತೆಯ ಬ್ಯಾಟಿಂಗ್ನ ವೈಖರಿ ಇತ್ತು. ದ್ರಾವಿಡ್ ಹಾಗೂ ಲಕ್ಷ್ಮಣ್ ತಾಂತ್ರಿಕತೆ ಹಾಗೂ ಕಲಾತ್ಮಕತೆ ರಹಾನೆಯ ಬ್ಯಾಟಿಂಗ್ನಲ್ಲಿತ್ತು. ಹೊಡಿಬಡಿಯ ಆಟದಲ್ಲಿ ಮೈಮರೆತಿರುವ ಯುವ ಆಟಗಾರರಿಗೆ ರಹಾನೆ ಬ್ಯಾಟಿಂಗ್ ಪಾಠವಾಗಿತ್ತು. ಯಾಕಂದ್ರೆ ರಹಾನೆ ಟೆಸ್ಟ್ ಕ್ರಿಕೆಟ್ನ ಸಂಪ್ರದಾಯವನ್ನು ಮುರಿದಿರಲಿಲ್ಲ. ಏಕದಿನ ಕ್ರಿಕೆಟ್ನ ವೇಗಕ್ಕೂ ದಕ್ಕೆಯನ್ನುಂಟು ಮಾಡಿರಲಿಲ್ಲ. ಟಿ-ಟ್ವೆಂಟಿ ಕ್ರಿಕೆಟ್ನ ಅಬ್ಬರಕ್ಕೂ ಕಮ್ಮಿ ಏನು ಇರಲಿಲ್ಲ.
ಸೋಲಿಲ್ಲದ ನಾಯಕ ಜಿಂಕ್ಸ್..!
ಅಜಿಂಕ್ಯಾ ರಹಾನೆ ಸೋಲಿಲ್ಲದ ನಾಯಕ. ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ಆರು ಬಾರಿ ಸಾರಥಿಯಾಗಿದ್ದರು. ಇದರಲ್ಲಿ 4 ಪಂದ್ಯಗಳಲ್ಲಿ ಗೆಲುವು ಹಾಗೂ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದರು. 2020-21ರಲ್ಲಿ ಆಸೀಸ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 36 ರನ್ಗೆ ಆಲೌಟ್ ಆಗಿತ್ತು. ಆ ಪಂದ್ಯವನ್ನು ಸೋತ ನಂತರ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು.
ನಂತರ ಪಂದ್ಯಗಳಲ್ಲಿ ಶತಕ ದಾಖಲಿಸಿ ಅದ್ಭುತ ಪ್ರದರ್ಶನವನ್ನೇ ನೀಡಿದ್ದರು. ಸಿಡ್ನಿ ಪಂದ್ಯವನ್ನು ಡ್ರಾ ಮಾಡಿಕೊಂಡು ಗಬ್ಬಾ ಟೆಸ್ಟ್ ಪಂದ್ಯದ ಐತಿಹಾಸಿಕ ಗೆಲುವು ರಹಾನೆಯ ನಾಯಕತ್ವಕ್ಕೆ ಹಿಡಿದ ಕೈಗನ್ನಡಿಯಾಗಿತ್ತು. ಅಲ್ಲದೆ 1988ರ ನಂತರ ಆಸೀಸ್ ನೆಲದಲ್ಲಿ ಸರಣಿ ಗೆದ್ದ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಟೀಮ್ ಇಂಡಿಯಾದ್ದಾಗಿತ್ತು. .
ಅಷ್ಟೇ ಅಲ್ಲ ನಾಯಕ ಹೇಗಿರಬೇಕು ಎಂಬುದನ್ನು ಕೂಡ ರಹಾನೆ ತೋರಿಸಿಕೊಟ್ಟಿದ್ದಾರೆ. ಎದುರಾಳಿ ಆಟಗಾರರಿಗೆ ಗೌರವ ನೀಡುವುದನ್ನು ಸಹ ಆಟಗಾರರಿಗೆ ಕಲಿಸಿಕೊಟ್ಟಿದ್ದಾರೆ. ತಂಡದಲ್ಲಿ ಶಿಸ್ತಿಗೆ ಮೊದಲ ಆದ್ಯತೆ ನೀಡುತ್ತಿದ್ದರು. 2022ರ ದುಲೀಪ್ ಟ್ರೋಫಿ ಫೈನಲ್ನಲ್ಲಿ ಪಶ್ವಿಮ ವಲಯ ತಂಡಕ್ಕೆ ಜಿಂಕ್ಸ್ ನಾಯಕನಾಗಿದ್ದರು. ಆಗ ಎದುರಾಳಿ ತಂಡದ ವಿರುದ್ಧ ಯಶಸ್ವಿ ಜೈಸ್ವಾಲ್ ಸ್ಲೆಡ್ಜಿಂಗ್ ಮಾಡುತ್ತಿದ್ದರು. ಇದನ್ನು ಗಮನಿಸಿದ್ದ ಜಿಂಕ್ಸ್, ಜೈಸ್ವಾಲ್ನನ್ನು ಮೈದಾನದಿಂದಲೇ ಹೊರಗೆ ಕಳುಹಿಸಿದ್ದರು.
ಇನ್ನು ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದು ಬಂದ ನಂತರ ಮುಂಬೈನಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದರು. ಅಭಿಮಾನಿಗಳು ವಿಶೇಷ ಮಾದರಿಯ ಕೇಕ್ ತಯಾರಿಸಿದ್ದರು. ಇದನ್ನು ಗಮನಿಸಿದ್ದ ರಹಾನೆ, ವಿಶೇಷ ಕೇಕ್ ಮೇಲಿದ್ದ ಕಾಂಗರೂ ಆಕೃತಿಯನ್ನು ತೆಗೆದ್ರೆ ಮಾತ್ರ ಕಟ್ ಮಾಡುವುದಾಗಿ ಹೇಳಿದ್ದರು. ಇಲ್ಲಿ ರಹಾನೆಯ ವ್ಯಕಿತ್ವದ ಪರಿಚಯವಾಗಿತ್ತು. ಕಾಂಗರೂ ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿ. ಆಸೀಸ್ ವಿರುದ್ಧ ಗೆದ್ರೂ ಆ ದೇಶದ ರಾಷ್ಟ್ರೀಯ ಸಂಕೇತವಾಗಿರುವ ಕಾಂಗರೂಗೆ ಅಗೌರವ ನೀಡಲಿಲ್ಲ.
ಹೀಗೆ ರಹಾನೆ ಟೀಮ್ ಇಂಡಿಯಾದ ಪರ ಅದ್ಭುತ ಇನಿಂಗ್ಸ್ಗಳನ್ನು ಆಡಿದ್ದಾರೆ. ಅದ್ಭುತ ಗೆಲುವಿನಲ್ಲೂ ಪಾಲುದಾರನಾಗಿದ್ದಾರೆ. ತಂಡದ ಮಧ್ಯಮ ಕ್ರಮಾಂಕಕ್ಕೆ ಆಸರೆಯಾಗಿದ್ದ ರಹಾನೆ, ಟೆಸ್ಟ್ ಕ್ರಿಕೆಟ್ನಲ್ಲಿ ಹಲವು ನೆನಪಿನಲ್ಲಿ ಉಳಿಯುವಂತಹ ಇನಿಂಗ್ಸ್ಗಳನ್ನು ಆಡಿದ್ದಾರೆ.
ಒಟ್ಟಾರೆ, ರಹಾನೆ 85 ಟೆಸ್ಟ್ ಪಂದ್ಯಗಳಲ್ಲಿ 12 ಶತಕ ಹಾಗೂ 26 ಅರ್ಧಶತಕಗಳ ಸಹಾಯದಿಂದ 5077 ರನ್ ದಾಖಲಿಸಿದ್ದಾರೆ. 90 ಏಕದಿನ ಪಂದ್ಯಗಳಲ್ಲಿ 2962 ರನ್ ಹಾಗೂ ಮೂರು ಶತಕ, 24 ಅರ್ಧಶತಕಗಳನ್ನು ಸಿಡಿಸಿದ್ದಾರೆ. 20 ಟಿ-20 ಪಂದ್ಯಗಳಲ್ಲಿ 375 ರನ್ ಗಳಿಸಿದ್ದಾರೆ.
ಅಜಿಂಕ್ಯಾ ರಹಾನೆಯ ಕ್ರಿಕೆಟ್ ಬದುಕು ಕೇವಲ ಅಂಕಿ ಅಂಶಗಳಿಗೆ ಸೀಮಿತವಾಗಿಲ್ಲ. ಸಂಯಮದಿಂದ ತಂಡವನ್ನು ಮುನ್ನಡೆಸುತ್ತಿದ್ದ ರೀತಿ, ಎದುರಾಳಿ ಆಟಗಾರರಿಗೆ ಗೌರವ ನೀಡುತ್ತಿದ್ದ ನೀತಿ, ತಾಳ್ಮೆ ಹಾಗೂ ಏಕಾಗ್ರತೆಯಿಂದ ಆಡುತ್ತಿದ್ದ ವೈಖರಿ, ಸಂಕಷ್ಟದ ಸಮಯದಲ್ಲೂ ತಂಡವನ್ನು ಪಾರು ಮಾಡುತ್ತಿದ್ದ ಪರಿ, ತಂಡವನ್ನು ಗೆಲುವಿನ ದಡ ಸೇರಿಸುವ ಧಾಟಿಗೆ ಅಜಿಂಕ್ಯಾ ರಹಾನೆಯೇ ಸರಿಸಾಟಿ.
ಇದೀಗ ತನ್ನ ಬದುಕಿಗೆ ಅರ್ಥಕಲ್ಪಿಸಿದ್ದ 278 ಸಂಖ್ಯೆಯ ಕ್ಯಾಪ್ ಅನ್ನು ರಹಾನೆ ಗೌರವದಿಂದಲೇ ಬದಿಗಿಟ್ಟಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನ ಪಯಾಣಕ್ಕೆ ಜಿಂಕ್ಸ್ ತೆರೆ ಎಳೆದಿದ್ದಾರೆ. ಮುಂದಿನ ಜೀವನ ಸುಖಕರವಾಗಿರಲಿ..!
ಸನತ್ ರೈ
saakshatv.com







