800 ಗ್ರಾಂ ತೂಕ.. ಎಂಟು ಅಡಿ 10 ಇಂಚಿನ ಜಾವೆಲಿನ್. ಫಿನ್ನಿಷ್ ಗ್ರಿಪ್ನ ಟೆಕ್ನಿಕ್. ಶಕ್ತಿಯ ಜೊತೆಗೆ ಯುಕ್ತಿಯ ಅಪೂರ್ವ ಸಂಗಮ. ಬಿಲ್ಲು ಬಾಣದಂತೆ ಬಾಗುವ ದೇಹ..!
ಅಬ್ಬಾ…ಈ ದೃಶ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬ..!
====
ಈಟಿಯ ಹಿಡಿತದ ಮೇಲೆ ಕೈ ಬೆರಳುಗಳ ಸ್ಪರ್ಶ. ಒಂದು ಕೈಯಲ್ಲಿ ಅನುಭವ ಮತ್ತು ಪರಿಶ್ರಮದ ಶಕ್ತಿ. ಇನ್ನೊಂದು ಕೈಯಲ್ಲಿ ನಿಖರವಾದ ಗುರಿ. ದೂರದ ಗೆರೆಯತ್ತ ಕಣ್ಣುಗಳ ತೀಕ್ಷ್ಣ ನೋಟ. ಏಕಾಗ್ರತೆಯ ಒಂದು ದೀರ್ಘ ಉಸಿರು…!
ರನ್ ವೇನಲ್ಲಿ ಟೇಕ್ ಆಪ್ ಆಗುವ ವಿಮಾನದಂತೆ, 15-15 ಹೆಜ್ಜೆಗಳ ರನ್ಅಪ್. ದೇಹದ ಪ್ರತಿ ನರನಾಡಿಗಳಲ್ಲೂ ಮಿಂಚಿನ ಸಂಚಾರ. ಎರಡು ಅಥವಾ ಮೂರು ಕ್ರಾಸ್ ಓವರ್ ಸ್ಟೆಪ್ಸ್. ಈಟಿ ಎಸೆಯುವ ಮುನ್ನ ಭುಜದ ಚಲನೆಯ ಮೇಲೊಂದು ಅದ್ಭುತವಾದ ಲಯ. ದೇಹವನ್ನು ಬಿಲ್ಲಿನಂತೆ ಬಾಗಿ ಎಸೆಯುವ ಭಂಗಿ. ತನ್ನ ಎಲ್ಲಾ ಬಲ ಪ್ರಯೋಗಿಸಿ ಈಟಿಯನ್ನು ಗಾಳಿಗೆ ಒಪ್ಪಿಸಿದಾಗ ಆತನಿಂದ ಹೊರಬರೋದು ಒಂದು ಆವೇಶದ ಉದ್ಗಾರ..!
ಅಷ್ಟೇ….!
ಅವನಿಗೆ ಬೇಕಾಗಿದ್ದು ಅಷ್ಟೇ. ಪರ್ಫೆಕ್ಟ್ ಎಸೆತವಾಗಿದ್ರೆ, ಆತ ನೆಲಕ್ಕೆ ಬಿದ್ರೂ ಹಿಂತಿರುಗಿ ನೋಡಲ್ಲ. ತಾನು ಎಸೆದ ಈಟಿ, ಗಾಳಿಯನ್ನು ಸೀಳಿ ಹೋಗುವುದನ್ನು ನೋಡಲು ಕೂಡ ಇಷ್ಟಪಡಲ್ಲ. ಎಷ್ಟು ದೂರದಲ್ಲಿ ಈಟಿ ಭೂಸ್ಪರ್ಶ ಆಗಿದೆ ಎಂಬುದು ಅವನಿಗೆ ಬೇಕಿಲ್ಲ. ಆ ಕ್ಷಣದಲ್ಲಿ ಅವನು ಫಲಿತಾಂಶದ ಬಗ್ಗೆ ಯೋಚನೆಯನ್ನೂ ಮಾಡಲ್ಲ.
ಯಾಕಂದ್ರೆ ಆ ಎಸೆತದ ಮೇಲೆ ಅವನಿಗೆ ಅಚಲವಾದ ನಂಬಿಕೆ ಇರುತ್ತೆ. ತಾನು ಎಸೆದಿರುವುದು ಅತ್ಯುತ್ತಮ ಕ್ಲೀನ್ ಥ್ರೋ ಎಂದು ಮನಸ್ಸು ಆ ಕ್ಷಣದಲ್ಲೇ ಹೇಳುತ್ತದೆ. ಹೀಗಾಗಿಯೇ ಈಟಿ ಗಾಳಿಯಲ್ಲಿ ತೇಲಾಡುತ್ತಿರುವಾಗಲೇ ಎರಡು ಕೈ ಎತ್ತಿ ಸಂಭ್ರಮಿಸುತ್ತಾನೆ. ಗ್ಲಾಸ್ಗೋ ಅಂಗಣದಲ್ಲಿ ಆಗಿದ್ದು ಅದೇ. ಎರಡನೇ ಯತ್ನದಲ್ಲಿ ಈಟಿ ಅಂಗಣದ ಮೇಲೆ ಗುರುತು ಮೂಡಿಸಿದಾಗ ಆತನ ಕೊರಳಿಗೆ ಬೆಳ್ಳಿ ಪದಕವೂ ಒಲಿದು ಬಂತು.
ಇದು ಆತನ ಆತ್ಮವಿಶ್ವಾಸದ ಕ್ಷಣವಾಗಿತ್ತು. ಅನುಭವದ ಉತ್ತರವಾಗಿತ್ತು. ಇನ್ನಷ್ಟು ಪಕ್ವತೆ ಪಡೆದುಕೊಳ್ಳಲು ಕಲಿತ ಪಾಠವಾಗಿತ್ತು. ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿತ್ತು.
ನೀರಜ್ ಚೋಪ್ರಾ.
ಇದು ಗ್ಲಾಸ್ಗೋ ಅಂಗಣದ ಜಾವೆಲಿನ್ ಅಖಾಡದಲ್ಲಿ ನೀರಜ್, ಈಟಿಯ ಜೊತೆ ನಡೆಸಿದ್ದ ಮೌನ ಸಂಭಾಷಣೆಯ ಒಂದು ಝಲಕ್..!
ನೀರಜ್ಗೆ ಪದಕ ಗೆಲ್ಲುವುದು ಮುಖ್ಯವಲ್ಲ. ಸ್ಥಿರ ಪ್ರದರ್ಶನ ನೀಡುವುದೇ ಆತನ ವಿಶೇಷತೆ. ಕೇವಲ ಒಂದೇ ಒಂದು ಅದ್ಭುತ ಎಸೆತ ಫಲಿತಾಂಶವನ್ನೇ ಬಡಮೇಲು ಮಾಡಬಹುದು. ಆದ್ರೆ ಅಂತಹ ಅಮೋಘ ಎಸೆತ ಎಸೆಯಲು ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು.
ಹಾಗಾಗಿ ನೀರಜ್, ಫಲಿತಾಂಶಕ್ಕಿಂತ ಸ್ಥಿರ ಪ್ರದರ್ಶನದ ಮೇಲೆ ಹೆಚ್ಚು ನಂಬಿಕೆಯನ್ನಿಟ್ಟುಕೊಂಡಿದ್ದಾನೆ. ಇದೀಗ ಗಾಯದಿಂದ ಚೇತರಿಸಿಕೊಂಡು ಪದಕ ಗೆದ್ದಿರುವುದು ಆತನ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ.
ಚಿನ್ನ ಗೆದ್ದ ಲಂಕಾದ ರುಮೇಶ್ಗೆ ನೀರಜ್ ಪ್ರೇರಣೆ..!
ನೀರಜ್, ವಿಶ್ವದ ಚಾಂಪಿಯನ್ ಈಟಿ ಎಸೆತಗಾರ. ಅಷ್ಟೇ ಅಲ್ಲ, ಸ್ನೇಹ – ಗೌರವಕ್ಕೆ ಮತ್ತೊಂದು ಹೆಸರು ಕೂಡ. ತನ್ನ ಜೊತೆ ಅಖಾಡಕ್ಕಿಳಿಯುವ ಅಥ್ಲೀಟ್ಗಳನ್ನು ಪ್ರತಿಸ್ಪರ್ಧಿಗಳಂತೆ ನೀರಜ್ ನೋಡುವುದೇ ಇಲ್ಲ. ಪದಕದ ರೇಸ್ನಲ್ಲಿದ್ರೂ ಅವರ ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ಸಲಹೆ ನೀಡುವ ಒಬ್ಬ ಆಪ್ತ ಗೆಳೆಯ.
ಇತ್ತೀಚಿನ ವರ್ಷಗಳಲ್ಲಿ ಭಾರತ, ಪಾಕ್ ಮತ್ತು ಲಂಕಾದ ಜಾವೆಲಿನ್ ಎಸೆತಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈ ಹಿಂದೆ ಯೂರೋಪ್ನವರು ಈಟಿ ಎಸೆತದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ರು. ಆದ್ರೆ ಈಗ ಏಷ್ಯಾದ ಹುಡುಗರು ಮೇಲುಗೈ ಸಾಧಿಸುತ್ತಿದ್ದಾರೆ. ನೀರಜ್ ಚೋಪ್ರಾ, ಪಾಕ್ನ ಅರ್ಷದ್ ನದೀಮ್ ಹಾಗೂ ಲಂಕಾದ ರುಮೇಶ್ ಜಾಗತಿಕ ಸ್ಪರ್ಧೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ.
ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ನೀರಜ್ಗಿಂತಲೂ ಒಂದು ಹೆಜ್ಜೆ ಮುಂದೆ ಸಾಗಿದ್ದ ಲಂಕಾದ ರುಮೇಶ್ ಪತಿರಾಜೆ ಚಿನ್ನದ ನಗೆ ಬೀರಿದ್ದಾನೆ. ಆದ್ರೆ ಆ ಚಿನ್ನದ ನಗುವಿನ ಹಿಂದೆ ಇದ್ದಿದ್ದು ಇದೇ ನೀರಜ್ ಚೋಪ್ರಾನ ಪ್ರೋತ್ಸಾಹ. ಇದು ಅಚ್ಚರಿಯಾದ್ರೂ ಸತ್ಯ.
ಕಳೆದ ವರ್ಷ ಭುವನೇಶ್ವರದಲ್ಲಿ ನಡೆದ ಕ್ರೀಡಾಕೂಟದ ಜಾವೆಲಿನ್ ಸ್ಪರ್ಧೆಯಲಿ,್ಲ ರುಮೇಶ್ 86.50 ಮೀಟರ್ ದೂರ ಎಸೆದು ವಿಶ್ವ ಚಾಂಪಿಯನ್ಷಿಪ್ಗೆ ಅರ್ಹತೆ ಪಡೆದುಕೊಂಡಿದ್ದ. ಇದನ್ನು ಗಮನಿಸಿದ್ದ ನೀರಜ್, ಬೆಂಗಳೂರಿನಲ್ಲಿ ನಡೆದ ನೀರಜ್ ಚೋಪ್ರಾ ಕ್ಲಾಸಿಕ್ ನಲ್ಲಿ ಸ್ಪರ್ಧಿಸುವಂತೆ ರುಮೇಶ್ಗೆ ಆಹ್ವಾನ ನೀಡಿದ್ದ.
ಚೋಪ್ರಾ ಆಹ್ವಾನದಂತೆ ರುಮೇಶ್ ಸ್ಪರ್ಧೆಯಲ್ಲಿ ಭಾಗವಹಿಸಿದ್ರೂ ಮೊದಲ ಎರಡು ಪ್ರಯತ್ನಗಳಲ್ಲಿ ನೀರಸ ಪ್ರದರ್ಶನ ನೀಡಿದ್ದ. ಇದನ್ನು ನೋಡಿದ್ದ ನೀರಜ್, ರುಮೇಶ್ ಬಳಿ ಹೋಗಿ ನೀನು ಇದಕ್ಕಿಂತಲೂ ಉತ್ತಮವಾಗಿ ಎಸೆಯಬಲ್ಲೆ ಎಂದು ಹೇಳಿದ್ದ. ಇದು ರುಮೇಶ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಅಲ್ಲದೆ ನೀರಜ್ ಜೊತೆ ಪೋಡಿಯಂ ಹತ್ತಿ ಪದಕ ಕೂಡ ಗೆದ್ದುಕೊಂಡಿದ್ದ.
ನಂತರ ಮಾಧ್ಯಮಗಳ ಮುಂದೆ ಮಾತನಾಡುವಾಗ ರುಮೇಶ್ ಭಾಷೆಯ ಸಮಸ್ಯೆಯಿಂದ ಹಿಂದೇಟು ಹಾಕುತ್ತಿದ್ದ. ಆಗ ರುಮೇಶ್ ಸಹಾಯಕ್ಕೆ ಬಂದ ನೀರಜ್, ಎಷ್ಟು ಸಾಧ್ಯವೋ ಅಷ್ಟು ಇಂಗ್ಲಿಷ್ನಲ್ಲಿ ಮಾತನಾಡು. ನಾನು ಹೀಗೆ ಕಲಿತಿರುವುದು. ಪೋಡಿಯಂ ಮೇಲೆ ಮುಂದಿನ ದಿನಗಳಲ್ಲಿ ನೀನು ನಿಲ್ಲುತ್ತಿಯಾ. ಹೆದರಬೇಡ. ಯಾವುದೇ ಹಿಂಜರಿಕೆ ಬೇಡ. ಧೈರ್ಯವಾಗಿರು ಎಂದು ಚೋಪ್ರಾ ಹೇಳಿರುವುದನ್ನು ರುಮೇಶ್ ಈಗಲೂ ನೆನಪಿಸಿಕೊಳ್ಳುತ್ತಾನೆ.
ಪಾಕ್ನ ಅರ್ಷದ್ ನದೀಮ್ಗೆ ನೀರಜ್ ನೈತಿಕ ಬೆಂಬಲ..!
ಇನ್ನು ನೆರೆಯ ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ಗೂ ಪರೋಕ್ಷವಾಗಿ ನೀರಜ್ಗೆ ನೈತಿಕ ಬೆಂಬಲ ನೀಡಿದ್ದಾನೆ. ವೈರಿ ರಾಷ್ಟ್ರದ ಸ್ಪರ್ಧಿಯಾದ್ರೂ ಪ್ರತಿಭೆ, ಸಾಮಥ್ರ್ಯಕ್ಕೆ ಗೌರವ ನೀಡಿರುವುದು ನೀರಜ್ ಚೋಪ್ರಾನ ದೊಡ್ಡತನ.
ಉತ್ತಮ ಜಾವೆಲಿನ್ ಖರೀದಿಸಲು ನದೀಮ್ಗೆ ಆರ್ಥಿಕ ಸಮಸ್ಯೆ ಇದೆ ಎಂಬ ಸುದ್ದಿ ಕೇಳಿದ ತಕ್ಷಣ ನೀರಜ್ ಮೌನವಾಗಿರಲಿಲ್ಲ. ನದೀಮ್ ಅತ್ಯುತ್ತಮ ಜಾವೆಲಿನ್ ಎಸೆತಗಾರ. ಅವನಿಗೆ ಪಾಕ್ ಸರ್ಕಾರ ಅಗತ್ಯ ನೆರವು ನೀಡಬೇಕು ಎಂದು ಬಹಿರಂಗವಾಗಿಯೇ ಹೇಳಿದ್ದ. ಅಷ್ಟೇ ಅಲ್ಲ, ಜಾವೆಲಿನ್ ತಯಾರಿಕಾ ಸಂಸ್ಥೆಗಳು ಕೂಡ ನದೀಮ್ಗೆ ಪ್ರಾಯೋಜಕತ್ವ ನೀಡಲು ಮುಂದೆ ಬರಬೇಕು ಎಂದು ಹೇಳಿದ್ದ.
ನೀರಜ್ನಂತಹ ಚಾಂಪಿಯನ್ಗೆ ಎದುರಾಳಿಯನ್ನು ಸೋಲಿಸುವುದು ದೊಡ್ಡ ವಿಷಯವೇನೂ ಅಲ್ಲ. ಆದ್ರೆ ಪ್ರತಿಸ್ಪರ್ಧಿಯೂ ಉತ್ತಮ ಪ್ರದರ್ಶನ ನೀಡಲಿ ಎಂದು ಬಯಸುವ ಗುಣ ಆತನ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ
ಹೌದು, ನೀರಜ್ ಕೇವಲ ಭಾರತೀಯ ಚಾಂಪಿಯನ್ ಮಾತ್ರವಲ್ಲ. ಜಾಗತಿಕ ಕ್ರೀಡೆಯ ನಿಜವಾದ ರಾಯಭಾರಿ..! ಕಲ್ಮಶವಿಲ್ಲದ ಮನಸ್ಸಿನಿಂದ ರುಮೇಶ್ಗೆ ಪ್ರೋತ್ಸಾಹ ನೀಡಿ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನ ಗೆಲ್ಲುವಂತೆ ಆತ್ಮವಿಶ್ವಾಸ ಮೂಡಿಸಿದ್ದ್ದ. ಹಾಗೇ ಅರ್ಷದ್ ನದೀಮ್ಗೆ ನೈತಿಕ ಬೆಂಬಲ ನೀಡಿ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬಂಗಾರ ಗೆಲ್ಲುವಂತೆ ಮಾಡಿದ್ದ.
ಬೊಜ್ಜು ಹುಡುಗನ ಕೈಗೆ ಈಟಿ ಬಂದಿದ್ದು ಹೇಗೆ..?
ಅಂದ ಹಾಗೇ, ನೀರಜ್ ಚೋಪ್ರಾನ ಈ ಸಾಧನೆಯ ಮೆರವಣಿಗೆಯ ಹಿಂದೆ ಅಪಾರವಾದ ಶ್ರಮವಿದೆ. ಅಪಮಾನಗಳ ಕೋಪವಿದೆ. ಬೊಜ್ಜು ಹುಡುಗ ಅಂತ ಹೀಯಾಳಿಸಿದಾಗ ಕಣ್ಣೀರು ಸುರಿಸಿದ್ದು ಇದೆ. 11ರ ಹರೆಯದಲ್ಲೇ ವಯಸ್ಸಿಗೂ ಮೀರಿದ ತೂಕವಿದ್ದ ನೀರಜ್, ತನ್ನ ದೇಹದ ಬೊಜ್ಜು ಕರಗಿಸಲು ಪಾಣಿಪತ್ನಲ್ಲಿ ಜಿಮ್ಗೆ ಸೇರಿಕೊಂಡಿದ್ದ. ಆಕಸ್ಮಿಕವಾಗಿ ಒಂದು ದಿನ ಚೋಪ್ರಾ, ಪಾಣಿಪತ್ ನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಭೇಟಿ ಕೊಟ್ಟಿದ್ದ.
ಆಗ ಜಾವೇಲಿನ್ ಎಸೆತಗಾರ ಜೈವೀರ್ ಚೌಧರಿ ಅವರ ಕಣ್ಣಿಗೆ ಬಿದ್ದ. ಯಾವುದೇ ಜಾವೆಲಿನ್ ಎಸೆತದ ತರಬೇತಿ ಇಲ್ಲದ ನೀರಜ್ 40 ಮೀಟರ್ ದೂರ ಎಸೆದಾಗ ಈ ಹುಡುಗನಲ್ಲಿ ಪ್ರತಿಭೆ ಇದೆ ಅಂತ ಜೈವೀರ್ ಚೌಧರಿಗೆ ಅನ್ನಿಸಿತ್ತು. ನಂತರ ಬೊಜ್ಜು ಹುಡುಗನ ಕೈಗೆ ಬಂದಿದ್ದು ಈಟಿ. ನಂತರ ಹಿಂತಿರುಗಿ ನೋಡಲೇ ಇಲ್ಲ. ತನ್ನನ್ನು ಹೀಯಾಳಿಸಿ ಅಪಮಾನ ಮಾಡಿದವರಿಗೆ ಈಟಿಯಿಂದ ಸಾಧನೆ ಮಾಡಿ ಚುಚ್ಚುತ್ತಿದ್ದಾನೆ.
ಅದಕ್ಕೆ ಅನ್ನೋದು ನೀರಜ್ ಚೋಪ್ರಾ ಅಂದ್ರೆ ಆತ್ಮವಿಶ್ವಾಸಕ್ಕೆ ಮತ್ತೊಂದು ಹೆಸರು. ನೀನು ಯಾವತ್ತಿಗೂ ನೀ..ರಾಜನೇ…!
ಸನತ್ ರೈ
saakshatv.com
#NeerajChopra #Javelin #CommonwealthGames #RumeshPathirage #ArshadNadeem #Athletics #SanathRai#ನೀರಜ್_ಚೋಪ್ರಾ #ಜಾವೆಲಿನ್ #ಕಾಮನ್ವೆಲ್ತ್_ಗೇಮ್ಸ್ #ರುಮೇಶ್_ಪತಿರಾಜೆ #ಅರ್ಷದ್ ನದೀಮ್







