ಕಾವೇರಿ ನೀರು ಹಂಚಿಕೆ ವಿವಾದವು ಕರ್ನಾಟಕ ಮತ್ತು ತಮಿಳುನಾಡು ನಡುವೆ ಮತ್ತೆ ಕಿಡಿ ಹೊತ್ತಿಸಿರುವ ಬೆನ್ನಲ್ಲೇ, ತಮಿಳುನಾಡು ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಮಹತ್ವದ ಹೇಳಿಕೆ ನೀಡಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಭಾರತ ಮತ್ತು ಪಾಕಿಸ್ತಾನದಂತಲ್ಲ. ಈ ವಿವಾದವನ್ನು ಬಗೆಹರಿಸಲು ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಪರಸ್ಪರ ಕುಳಿತು ಮಾತುಕತೆ ನಡೆಸುವುದು ಅತ್ಯಂತ ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶದ ವಿರುದ್ಧ ಕರ್ನಾಟಕದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಕನ್ನಡಪರ ಸಂಘಟನೆಗಳು ಆಗಸ್ಟ್ 13ರಂದು ಕರ್ನಾಟಕ ಬಂದ್ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಣಿಕಂ ಟ್ಯಾಗೋರ್, ಕರ್ನಾಟಕದ ಮುಖ್ಯಮಂತ್ರಿಗೆ ತಮ್ಮ ರಾಜ್ಯದ ಹಿತಾಸಕ್ತಿ ಹೇಗೆ ಮುಖ್ಯವೋ, ತಮಿಳುನಾಡಿಗೆ ನಮ್ಮ ರಾಜ್ಯದ ರೈತರ ಹಿತಾಸಕ್ತಿ ಅಷ್ಟೇ ಮುಖ್ಯ ಎಂದು ಹೇಳಿದರು.
ಕಾವೇರಿ ವಿಚಾರದಲ್ಲಿ ಕರ್ನಾಟಕದ ರಾಜಕೀಯ ಪಕ್ಷಗಳು ತೋರುತ್ತಿರುವ ಒಗ್ಗಟ್ಟನ್ನು ಮಾಣಿಕಂ ಟ್ಯಾಗೋರ್ ಶ್ಲಾಘಿಸಿದರು. ಆದರೆ ತಮಿಳುನಾಡಿನಲ್ಲಿ ರಾಜಕೀಯ ಪಕ್ಷಗಳು ತಮ್ಮ ತಮ್ಮಲ್ಲೇ ಕಚ್ಚಾಡುತ್ತಿವೆ ಮತ್ತು ಪ್ರತ್ಯೇಕವಾಗಿ ನ್ಯಾಯಾಲಯದ ಮೊರೆ ಹೋಗುತ್ತಿವೆ. ರಾಜ್ಯದ ಒಳಗಿನ ಆಂತರಿಕ ರಾಜಕೀಯವು ಕಾವೇರಿ ಹಿತಾಸಕ್ತಿಗಿಂತ ದೊಡ್ಡದಾಗುತ್ತಿರುವುದು ವಿಷಾದನೀಯ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಮೇಕೆದಾಟು ಯೋಜನೆಯನ್ನು ಈಗಾಗಲೇ ವಿಧಾನಸಭೆಯಲ್ಲಿ ಒಮ್ಮತದಿಂದ ವಿರೋಧಿಸಲಾಗಿದ್ದು, ಈಗ ಮತ್ತೆ ಸರ್ವಪಕ್ಷ ಸಭೆ ಕರೆಯುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ ಸಂಸದರು, ರಾಹುಲ್ ಗಾಂಧಿ ಅವರು ತಮಿಳುನಾಡಿಗೆ ಭೇಟಿ ನೀಡಿದ ತಕ್ಷಣವೇ ರಾಜ್ಯಕ್ಕೆ ನೀರು ಹರಿದು ಬಂದಿದೆ. ಅವರು ಮುಂದಿನ ಬಾರಿ ರಾಜ್ಯಕ್ಕೆ ಬಂದಾಗ ಇನ್ನೂ ಹೆಚ್ಚಿನ ಮಳೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕಾವೇರಿ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಕರ್ನಾಟಕ ಮುಖ್ಯಮಂತ್ರಿ ಮತ್ತು ತಮಿಳುನಾಡು ಸಿಎಂ ನಡುವಿನ ಮಾತುಕತೆಗೆ ತಮಿಳುನಾಡು ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.






