ಭಾರತೀಯ ಹಾಕಿ ತಂಡದ ಸಾಂಪ್ರದಾಯಿಕ ನೀಲಿ ಬಣ್ಣದ ಜರ್ಸಿಯನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿರುವುದಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ರೀಡೆ ಮತ್ತು ಕ್ರೀಡಾಪಟುಗಳನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳಬಾರದು ಎಂದು ಅವರು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಖರ್ಗೆ, ಹಾಕಿ ತಂಡದ ಜರ್ಸಿ ಬಣ್ಣ ಬದಲಾವಣೆಯ ನಿರ್ಧಾರವು ಕೋಟ್ಯಂತರ ಭಾರತೀಯರ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ. ಜಗತ್ತಿನಾದ್ಯಂತ ನಮ್ಮ ಆಟಗಾರರನ್ನು ಮೆನ್ ಇನ್ ಬ್ಲೂ ಮತ್ತು ಬ್ಲೂ ಟೈಗರ್ಸ್ ಎಂದು ಗುರುತಿಸಲಾಗುತ್ತದೆ. ಇದು ಕೇವಲ ಬಟ್ಟೆಯ ಬಣ್ಣವಲ್ಲ, ಇದು ಭಾರತೀಯ ಕ್ರೀಡಾ ಇತಿಹಾಸದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಯಾವುದೇ ಸಮಾಲೋಚನೆ ನಡೆಸದೆ ಏಕಪಕ್ಷೀಯವಾಗಿ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಖರ್ಗೆ ಆರೋಪಿಸಿದ್ದಾರೆ. ಈಗಾಗಲೇ ದೂರದರ್ಶನದ ಲೋಗೋ, ಸಂಸತ್ ಭವನದ ಸಿಬ್ಬಂದಿಯ ಉಡುಪು ಮತ್ತು ಪಾದಚಾರಿ ಮಾರ್ಗಗಳ ಬಣ್ಣವನ್ನು ಕೇಸರಿಮಯ ಮಾಡಲಾಗಿದೆ. ಈಗ ಕ್ರೀಡೆಗೂ ಈ ಸೈದ್ಧಾಂತಿಕ ಬಣ್ಣ ಬಳಿಯಲು ಹೊರಟಿರುವುದು ಸರಿಯಲ್ಲ ಎಂದು ಅವರು ಟೀಕಿಸಿದ್ದಾರೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಾವುದೇ ಪಾತ್ರವಿಲ್ಲದವರು ಇಂದು ಪ್ರತಿಯೊಂದು ರಾಷ್ಟ್ರೀಯ ಸಂಕೇತದ ಮೇಲೆ ತಮ್ಮ ಸೈದ್ಧಾಂತಿಕ ಮುದ್ರೆ ಒತ್ತಲು ಅವಸರ ಮಾಡುತ್ತಿದ್ದಾರೆ. ಆರೆಸ್ಸೆಸ್ ಆರಂಭದಲ್ಲಿ ತ್ರಿವರ್ಣ ಧ್ವಜವನ್ನೇ ವಿರೋಧಿಸಿತ್ತು ಎಂಬ ಇತಿಹಾಸವನ್ನು ನಾವು ಮರೆಯಬಾರದು ಎಂದು ಖರ್ಗೆ ಕುಟುಕಿದ್ದಾರೆ.
ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂನಲ್ಲಿ ನಡೆಯಲಿರುವ ವಿಶ್ವ ಹಾಕಿ ಕಪ್ ಪಂದ್ಯಾವಳಿಯಲ್ಲಿ ಭಾರತೀಯ ಪುರುಷ ಮತ್ತು ಮಹಿಳಾ ತಂಡಗಳು ಕೇಸರಿ ಜರ್ಸಿ ಧರಿಸಲಿವೆ ಎಂದು ಭಾರತೀಯ ಹಾಕಿ ಸಂಸ್ಥೆ ಘೋಷಿಸಿತ್ತು. ಆದರೆ, ದೇಶದ ಕ್ರೀಡಾ ಪರಂಪರೆಯನ್ನು ಗೌರವಿಸಿ ಈ ನಿರ್ಧಾರವನ್ನು ತಕ್ಷಣವೇ ಮರುಪರಿಶೀಲಿಸಬೇಕು ಎಂದು ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.







