ಬಿಜೆಪಿಯ ಪ್ರಖರ ವಾಗ್ಮಿ ಮತ್ತು ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ತಮ್ಮ ಎಕ್ಸ್ ಖಾತೆಯ ಪರಿಚಯದ ಪುಟದಿಂದ (Bio) ಬಿಜೆಪಿ ರಾಷ್ಟ್ರೀಯ ವಕ್ತಾರ ಎಂಬ ಉಲ್ಲೇಖವನ್ನು ತೆಗೆದುಹಾಕಿರುವುದು ಈಗ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಪೂನಾವಾಲಾ ಅವರು ಹಂಚಿಕೊಂಡಿರುವ ವಿಡಿಯೋ ಸಂದೇಶವು ವಿರೋಧ ಪಕ್ಷಗಳಿಗೆ ಚುರುಕು ಮುಟ್ಟಿಸುವಂತಿದೆ.
ವಿಡಿಯೋದಲ್ಲಿ ಮಾತನಾಡಿದ ಪೂನಾವಾಲಾ, ಪ್ರಧಾನಿ ಮೋದಿ ಅವರು ಒಬ್ಬ ನಿಜವಾದ ಸರ್ವಾಧಿಕಾರಿ ಆಗಲು ವಿಫಲರಾಗಿದ್ದಾರೆ ಎಂದು ವ್ಯಂಗ್ಯವಾಗಿ ಹೇಳುವ ಮೂಲಕ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದ್ದಾರೆ. ಇತ್ತೀಚೆಗೆ ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ನೀಟ್ ಪ್ರತಿಭಟನೆ ವೇಳೆ ಕೆಲವು ವಿದ್ಯಾರ್ಥಿಗಳು ಪ್ರಧಾನಿ ಮೋದಿ ಮತ್ತು ಅವರ ದಿವಂಗತ ತಾಯಿಯ ಬಗ್ಗೆ ಅತ್ಯಂತ ಅವಹೇಳನಕಾರಿ ಮಾತುಗಳನ್ನು ಬಳಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮೋದಿ, ಅವರು ಮಕ್ಕಳು, ತಪ್ಪು ಮಾಡುತ್ತಾರೆ, ಅವರನ್ನು ಕ್ಷಮಿಸಿ ಎಂದು ಹೇಳಿದ್ದರು. ಈ ಘಟನೆಯನ್ನು ಉಲ್ಲೇಖಿಸಿದ ಪೂನಾವಾಲಾ, ತನ್ನ ತಾಯಿಯನ್ನೇ ನಿಂದಿಸಿದವರನ್ನು ಕ್ಷಮಿಸುವ ವ್ಯಕ್ತಿ ಸರ್ವಾಧಿಕಾರಿ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧವೂ ಕಿಡಿಕಾರಿದ ಅವರು, ಸರ್ವಾಧಿಕಾರ ಮತ್ತು ತುರ್ತು ಪರಿಸ್ಥಿತಿಯ ಬಗ್ಗೆ ಕಲಿಯಬೇಕೆಂದರೆ ರಾಹುಲ್ ಗಾಂಧಿ ಅವರ ಬಳಿ ಹೋಗಬೇಕು. ಇಂದಿರಾ ಗಾಂಧಿ ಮತ್ತು ಜವಾಹರಲಾಲ್ ನೆಹರು ಅವರು ವಿರೋಧ ಪಕ್ಷಗಳ ಧ್ವನಿಯನ್ನು ಹೇಗೆ ಅಡಗಿಸುತ್ತಿದ್ದರು ಮತ್ತು ಮಾತಿನ ಸ್ವಾತಂತ್ರ್ಯವನ್ನು ಹೇಗೆ ಕಿತ್ತುಕೊಂಡಿದ್ದರು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ಜನರ ಮೇಲೆ ಕೇಸ್ ದಾಖಲಿಸಲಾಗುತ್ತಿದೆ ಎಂದು ಪೂನಾವಾಲಾ ದೂರಿದ್ದಾರೆ. ಕೇರಳದಲ್ಲಿ ರಾಹುಲ್ ಗಾಂಧಿ ವಿರುದ್ಧ ಇನ್ಸ್ಟಾಗ್ರಾಮ್ ಪೋಸ್ಟ್ ಹಾಕಿದ ವ್ಯಕ್ತಿಯ ಮೇಲೆ ಮತ್ತು ಕರ್ನಾಟಕದಲ್ಲಿ ಪೋಸ್ಟರ್ ಪ್ರಕರಣ ಹಾಗೂ ರ್ಯಾಪ್ ಕಲಾವಿದನ ಮೇಲೆ ಪೊಲೀಸ್ ಕ್ರಮ ಕೈಗೊಂಡಿರುವುದನ್ನು ಅವರು ಉದಾಹರಿಸಿದ್ದಾರೆ. ಮಕ್ಕಳನ್ನು ಕ್ಷಮಿಸುವ ಮೋದಿ ಸರ್ಕಾರ ಒಂದೆಡೆಯಾದರೆ, ವಿಮರ್ಶೆಯನ್ನು ಸಹಿಸದ ಕಾಂಗ್ರೆಸ್ ಸರ್ಕಾರ ಇನ್ನೊಂದೆಡೆಯಿದೆ ಎಂದು ಅವರು ತುಲನೆ ಮಾಡಿದ್ದಾರೆ.
2017ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಶೆಹಜಾದ್ ಪೂನಾವಾಲಾ ಅವರು ಪಕ್ಷದ ಪ್ರಮುಖ ಮುಸ್ಲಿಂ ಮುಖವಾಗಿ ಗುರುತಿಸಿಕೊಂಡಿದ್ದರು. ಈಗ ಇದ್ದಕ್ಕಿದ್ದಂತೆ ಅವರು ತಮ್ಮ ಸಾಮಾಜಿಕ ಜಾಲತಾಣದ ಬಯೋ ಬದಲಿಸಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಅವರು ವಕ್ತಾರ ಸ್ಥಾನದಿಂದ ದೂರವಾಗಿದ್ದಾರೆಯೇ ಅಥವಾ ಪಕ್ಷವು ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.








